ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಕತ್ತರಿ?: ಸಾಧಕರಿಗೆ ಅಪಮಾನ ಸಲ್ಲದು

Shreya Hegde
0



ಕನ್ನಡ ರಾಜ್ಯೋತ್ಸವವೆಂದರೆ ನಾಡಿನ ಅಸ್ಮಿತೆಯ ಸಂಕೇತ ಹಾಗೂ ಸಂಭ್ರಮ-ಸಡಗರದ ಸಂದರ್ಭ. ಬಹುಮುಖ್ಯವಾಗಿ, ಜಿಲ್ಲೆಯ ವಿವಿಧ ವಲಯಗಳಲ್ಲಿ ವಿಶೇಷ ಸಾಧನೆಗೈದ ಸಾಧಕರನ್ನು ಗುರುತಿಸಿ ಗೌರವಿಸುವುದು ಉಡುಪಿಯಲ್ಲಿ ಅನಾದಿಕಾಲದಿಂದಲೂ ನಡೆದುಬಂದ ಉತ್ತಮ ಸಂಪ್ರದಾಯ. ಎಲ್ಲ ಸಾಧಕರನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿ ಗೌರವಿಸುವುದು ಕಷ್ಟಸಾಧ್ಯ ಹಾಗೂ ಇದು ಸರಕಾರಕ್ಕೆ ಆರ್ಥಿಕವಾಗಿಯೂ ಹೊರೆಯಾಗಬಹುದು. ಆದರೆ, ಜಿಲ್ಲಾ ಮಟ್ಟದಲ್ಲಿ ಗುರುತಿಸಿ ನೀಡುವ ಪ್ರಶಸ್ತಿ ಪತ್ರ, ಸನ್ಮಾನ, ಶಾಲು ಮತ್ತು ಹೂವಿನ ಹಾರಕ್ಕೆ ಹೆಚ್ಚಿನ ಆರ್ಥಿಕ ವೆಚ್ಚವೇನೂ ತಗಲುವುದಿಲ್ಲ. ಇದು ಜಿಲ್ಲೆಯ ಸಾಧಕರಿಗೆ ಆಡಳಿತ ನೀıಡುವ ಅತಿ ದೊಡ್ಡ ಗೌರವ. ಇಂತಹ ಸತ್ಕಾರಕ್ಕೂ ಕತ್ತರಿ ಹಾಕುವುದೆಂದರೆ ಅತ್ಯಂತ ವಿಷಾದನೀಯ ಬೆಳವಣಿಗೆಯಷ್ಟೇ.


ಇದು ಉಡುಪಿ ಜಿಲ್ಲೆ ಅಸ್ತಿತ್ವಕ್ಕೆ ಬಂದ ದಿನದಿಂದಲೂ ನಡೆದುಕೊಂಡು ಬಂದಿರುವ ಗೌರವದ ಕಾರ್ಯಕ್ರಮ ಮಾತ್ರವಲ್ಲ, ಜಿಲ್ಲೆಯ ಹೆಮ್ಮೆಯ ಸಂಕೇತವೂ ಹೌದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಸಾಧಕರನ್ನು ಗುರುತಿಸಿ ಗೌರವಿಸುವ ಕುರಿತಾದ ಪತ್ರಿಕಾ ಪ್ರಕಟಣೆ ಈಗಾಗಲೇ ಹೊರಬಿದ್ದಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಈ ಕುರಿತು ಯಾವುದೇ ಅಧಿಕೃತ ಮಾಹಿತಿಯಿಲ್ಲ. ಮಾತ್ರವಲ್ಲ, ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೇ ಇತಿಶ್ರೀ ಹಾಡುವ ಅಪಸ್ವರಗಳು ಕೇಳಿಬರುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಒಮ್ಮೆ ಇಂತಹ ಸಂಪ್ರದಾಯ ನಿಂತರೆ, ಅದು ಶಾಶ್ವತವಾಗಿ ನಿಂತುಹೋಗುವ ಅಪಾಯವಿರುತ್ತದೆ. ಉಡುಪಿ ಜಿಲ್ಲೆಗೆ ಬರಗಾಲದ ಗಾಳಿ ಬೀಸಿದೆ ಎನ್ನುವ ಕಾರಣಕ್ಕೆ ಜಿಲ್ಲಾಡಳಿತ ಈ ನಿರ್ಧಾರಕ್ಕೆ ಬಂದಿದೆಯೆ ಎಂಬ ಅನುಮಾನ ನಮ್ಮೆಲ್ಲರನ್ನು ಕಾಡುತ್ತಿದೆ. ಮತ್ತೊಂದೆಡೆ, ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರು ದೂರದವರು ಎಂಬ ಕಾರಣಕ್ಕೆ ಈ ವಿಷಯ ಅವರ ಗಮನಕ್ಕೂ ಬಂದಿಲ್ಲವೇ ಎಂಬ ಪ್ರಶ್ನೆಯೂ ಮೂಡಿದೆ.


ನನಗೇನು ಈ ಪ್ರಶಸ್ತಿ ಬೇಕಿಲ್ಲ, ಅಥವಾ ಅದನ್ನು ಪಡೆಯುವ ಅರ್ಹತೆಯೂ ನನಗಿಲ್ಲ. ಆದರೆ, ಸಮಾಜಕ್ಕಾಗಿ ಶ್ರಮಿಸಿದ ಎಷ್ಟೋ ಮಂದಿ ಹಿರಿಯ ಹಾಗೂ ನಿಸ್ವಾರ್ಥ ಸಾಧನಪಟುಗಳಿದ್ದಾರೆ. ಅಂಥವರನ್ನು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಗುರುತಿಸದೆ ಹೋದರೆ, ಅದು ಉಡುಪಿ ಜಿಲ್ಲೆಗೆ ತರುವ ದೊಡ್ಡ ಕಳಂಕವಾಗಲಿದೆ. ಇದು ಉಡುಪಿಯ ಸಮಸ್ತ ಕನ್ನಡ ಅಭಿಮಾನಿಗಳ ಸಾರ್ವತ್ರಿಕ ಅಭಿಪ್ರಾಯವಾಗಿದ್ದು, ಜಿಲ್ಲಾಡಳಿತವು ಈ ಕುರಿತು ಗಂಭೀರವಾಗಿ ಪುನರ್‌ವಿಮರ್ಶೆ ನಡೆಸಬೇಕೆಂದು ಕಳಕಳಿಯ ಮನವಿ.


– ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

ನಿವೃತ್ತ ಮುಖ್ಯಸ್ಥರು, ರಾಜ್ಯಶಾಸ್ತ್ರ ವಿಭಾಗ,

ಎಂ.ಜಿ.ಎಂ. ಕಾಲೇಜು, ಉಡುಪಿ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top