ಸಾಹಿತಿಗಳು ಬಣ್ಣದ ಮಾನಸಿಕತೆಯಿಂದ ಹೊರಬಂದು ಉತ್ತಮ ಸಾಹಿತ್ಯ ಸೃಷ್ಟಿಸಲಿ: ಡಾ. ಟಿ.ಎಂ. ಭಾಸ್ಕರ

Upayuktha
0

ಕಲಬುರಗಿ: ಸಾಹಿತಿಗಳು ಜಾತಿ, ಧರ್ಮ ಹಾಗೂ ಸಿದ್ಧಾಂತಗಳ ಬಣ್ಣದ ಮಾನಸಿಕತೆಯಿಂದ ಹೊರಬಂದು, ನೈಜ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಉತ್ತಮ ಸಾಹಿತ್ಯ ಸೃಷ್ಟಿಯತ್ತ ಮನಸ್ಸು ಮಾಡಬೇಕು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಟಿ. ಎಂ. ಭಾಸ್ಕರ ಅಭಿಪ್ರಾಯಪಟ್ಟರು.


ಇಲ್ಲಿನ ರಂಗಾಯಣದಲ್ಲಿ ಸಿರಿಗನ್ನಡ ವೇದಿಕೆಯ ಜಿಲ್ಲಾ ಘಟಕದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಹಾಗೂ ರಾಜ್ಯಮಟ್ಟದ ‘ಸಾಹಿತ್ಯ ಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.


"ಪ್ರಕೃತಿಯಲ್ಲಿ ಅರಳುವ ಹೂವುಗಳು ವಿವಿಧ ಬಣ್ಣಗಳಿಂದ ಕೂಡಿದ್ದರೂ, ಅದರೊಳಗಿನ ಪರಾಗಕ್ಕೆ ಯಾವುದೇ ಬಣ್ಣವಿರುವುದಿಲ್ಲ; ಅದು ಕೇವಲ ಸುವಾಸನೆಯನ್ನಷ್ಟೇ ಬೀರುತ್ತದೆ. ಅಂತೆಯೇ ಸಾಹಿತ್ಯಕ್ಕೂ ಯಾವುದೇ ಬಣ್ಣವಿರಬಾರದು. ಕನ್ನಡ, ತೆಲುಗು, ಮರಾಠಿ, ಪಾಲಿ, ಹಿಂದಿ, ಇಂಗ್ಲಿಷ್ ಮುಂತಾದ ಭಾಷೆಗಳು ಭಿನ್ನವಾಗಿದ್ದರೂ, ಅವುಗಳ ಅಂತಿಮ ಗುರಿ ಮಾನವೀಯ ಮೌಲ್ಯಗಳ ಪ್ರತಿಪಾದನೆಯೇ ಆಗಿದೆ. ಸಾಹಿತ್ಯಕ್ಕೆ ಜಾತಿ, ಕುಲ, ಗೋತ್ರ, ಧರ್ಮ, ಪಂಗಡಗಳ ಬಣ್ಣ ಬಳಿಯುತ್ತಿರುವುದರಿಂದ ನೈಜ ಸಾಹಿತ್ಯ ಕುಂಠಿತಗೊಂಡು, ಸಾಮಾಜಿಕ-ಸಾಂಸ್ಕೃತಿಕ ಲೋಕ ಬಡವಾಗುತ್ತಿದೆ. ಸಾಹಿತ್ಯದಲ್ಲಿ ಸೌಂದರ್ಯ, ರೂಪ ಹಾಗೂ ಛಂದಸ್ಸಿನ ವರ್ಗೀಕರಣವಿರಬೇಕೇ ವಿನಃ ಜಾತಿ, ಲಿಂಗ, ಧರ್ಮದ ವರ್ಗೀಕರಣ ಸಲ್ಲದು," ಎಂದು ಅವರು ಪ್ರತಿಪಾದಿಸಿದರು.


ಜೀವಪ್ರೀತಿಯ ಸಾಹಿತ್ಯ ರಚನೆ ಅಗತ್ಯ:

ವಿಶೇಷ ಉಪನ್ಯಾಸ ನೀಡಿದ ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ಮುಖ್ಯಸ್ಥ ಡಾ. ಸದಾನಂದ ಪೆರ್ಲ ಮಾತನಾಡಿ, "ಸಿದ್ದಯ್ಯ ಪುರಾಣಿಕ, ಶಾಂತರಸ, ಡಾ. ಜಯದೇವಿತಾಯಿ ಲಿಗಾಡೆ, ಡಾ. ಚೆನ್ನಣ್ಣ ವಾಲೀಕಾರ, ಬಿ. ಶ್ಯಾಮಸುಂದರ, ಡಾ. ಶೈಲಜಾ ಉಡಚಣ ಹಾಗೂ ಗೀತಾ ನಾಗಭೂಷಣ ಅವರಂತಹ ಮಹನೀಯರ ಹೆಸರಿನಲ್ಲಿ ನೀಡಲಾಗುತ್ತಿರುವ ಪ್ರಶಸ್ತಿಗಳು ಬರಹಗಾರರಲ್ಲಿ ಮಾನವೀಯ ಮೌಲ್ಯ, ಕನ್ನಡದ ಅಸ್ಮಿತೆ ಹಾಗೂ ಮನುಷ್ಯ ಪ್ರೀತಿಯನ್ನು ಜೀವಂತವಾಗಿರಿಸಲು ಪ್ರೇರಣೆಯಾಗಿದೆ. ಲೇಖಕರ ತುಡಿತ ಕೇವಲ ಪ್ರಚಾರ ಹಾಗೂ ಪ್ರಶಸ್ತಿಯತ್ತ ಇರದೆ, ಜೀವಪ್ರೀತಿ ಮತ್ತು ಸಮಾಜದಲ್ಲಿ ಜಾಗೃತಪ್ರಜ್ಞೆ ಮೂಡಿಸುವ ಕಡೆಗೆ ಇರಬೇಕು," ಎಂದರು.


ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ:

ಸಮಾರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ನಿಂಗರಾಜ್ ಅರಸ್ ಅವರಿಗೆ ವಿಶೇಷ ಸನ್ಮಾನ ನೆರವೇರಿಸಲಾಯಿತು. ವಿವಿಧ ರಂಗಗಳಲ್ಲಿ ಸಾಧನೆಗೈದ ಒಟ್ಟು 42 ಸಾಹಿತಿಗಳು ಹಾಗೂ ಸಾಧಕರಿಗೆ ಪ್ರಶಸ್ತಿ ಫಲಕ, ಶಾಲು ಹಾಗೂ ಹಾರ ನೀಡಿ ಗೌರವಿಸಲಾಯಿತು.


ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಗವಿಸಿದ್ದಪ್ಪ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸದಸ್ಯೆ ಡಾ. ಜಯದೇವಿ ಗಾಯಕವಾಡ, ಪ್ರಕಾಶಕ ಬಸವರಾಜ ಕೊನೇಕ್, ದಲಿತ ಸಾಹಿತ್ಯ ಪರಿಷತ್ತಿನ ಚಿದಾನಂದ ಕುಡ್ಡನ್ನ, ಪತ್ರಿಕಾ ಸಂಪಾದಕ ಶರಣಬಸವ ಸೂಗೂರು ಹಾಗೂ ಡಾ. ಪೀರಪ್ಪ ಸಜ್ಜನ್ ಉಪಸ್ಥಿತರಿದ್ದರು.

ಡಾ. ಶೀಲಾದೇವಿ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು. ರಾಜಕುಮಾರ ಮಾಳಗೆ ವಂದಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top