ಮಂಗಳೂರು, ಸೆ. 19: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಗ್ರಂಥಾಲಯ, ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಹಿಂದಿ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಹಿಂದಿ ದಿವಸ್ ಅಂಗವಾಗಿ 'ಗ್ರಂಥಾವಲೋಕನ' ಕಾರ್ಯಕ್ರಮದ ಆಯೋಜಿಸಲಾಗಿತ್ತು.
ಹಿಂದಿ ಸಾಹಿತ್ಯದ ದಿಗ್ಗಜ ಮುನ್ಸಿ ಪ್ರೇಮ್ಚಂದ್ ಅವರ ಕಥೆ, ಕಾದಂಬರಿ ಸೇರಿದಂತೆ ಹಿಂದಿ ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಹಿಂದಿ ವಿಭಾಗದ ಮುಖ್ಯಸ್ಥೆ ಪ್ರೊ. ಸುಮಾ ಟಿ. ರೋಡನ್ನರವರು, ಗ್ರಂಥಾಲಯದ ಮಹತ್ವ, ಪುಸ್ತಕಗಳ ಪ್ರಾಮುಖ್ಯತೆ ಹಾಗೂ ಭಾರತದ ಪ್ರಮುಖ ಗ್ರಂಥಾಲಯಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಮಾಹಿತಿ ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್, ಹಿಂದಿ ಭಾಷೆಯ ಪ್ರಾಮುಖ್ಯತೆ ಹಾಗೂ ಖ್ಯಾತ ಕವಿ ಹರಿವಂಶ ರಾಯ್ ಬಚ್ಚನ್ ಅವರ ಸಾಹಿತ್ಯೀಕ ಕೊಡುಗೆಗಳ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಇದೇ ವೇಳೆ, ಕಾಲೇಜಿನ ವಿದ್ಯಾರ್ಥಿ ಪರಿಷತ್ ಉಪನಿರ್ದೇಶಕ ಪ್ರೊ. ರಾಮಕೃಷ್ಣ ಬಿ. ಎಂ. ಹಾಗೂ ಐಕ್ಯುಎಸಿ ಸಂಯೋಜಕ ಡಾ. ಸಿದ್ಧರಾಜು ಎಂ. ಎನ್. ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕಿ ಗ್ರಂಥಪಾಲಕಿ ಡಾ. ವನಜಾ ಸ್ವಾಗತಿಸಿದರು. ವಿದ್ಯಾರ್ಥಿನಿ ರೆಯಾನಾ ಕಾರ್ಯಕ್ರಮದ ನಿರೂಪಿಸಿದರು ಹಾಗೂ ಹಿಂದಿ ವಿಭಾಗದ ಉಪನ್ಯಾಸಕಿ ಡಾ. ನಾಗರತ್ನ ಶೆಟ್ಟಿ ವಂದನಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಪ್ರಥಮ ಬಿ.ಎ. ವಿದ್ಯಾರ್ಥಿ ಅಮಿತ್ ಶುಕ್ಲ ಹಾಗೂ ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಅಭಿರಾಮಿ ಹಿಂದಿ ಸಾಹಿತ್ಯ ಪುಸ್ತಕಗಳ ಕುರಿತು ವಿಮರ್ಶೆ ಮಾಡಿದರು.
