ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭವು ಕಾಲೇಜಿನಲ್ಲಿ ನಡೆಯಿತು.
ಮಾತೃಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘವು ಇಂಜಿನಿಯರಿಂಗ್ ಕಾಲೇಜಿಗೆ ನೂತನ ಆಡಳಿತ ಮಂಡಳಿಯ ಸದಸ್ಯರನ್ನು ಆರಿಸಿದ್ದು, ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಹಾಗೂ ಕಾರ್ಯದರ್ಶಿ ವಿಜಯನಾರಾಯಣ.ಕೆ.ಎಂ ಅವರ ಸಮ್ಮುಖದಲ್ಲಿ ಹೊಸ ಸದಸ್ಯರು ಜವಾಬ್ಧಾರಿಯನ್ನು ವಹಿಸಿಕೊಂಡಿದ್ದಾರೆ. ನಿರ್ಗಮಿತ ಅಧ್ಯಕ್ಷ ವಿಶ್ವಾಸ್ ಶೆಣೈ, ಮತ್ತು ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣ ಶೆಟ್ಟಿ ಕಡಬ ಅವರು ವಿವೇಕಾನಂದ ಸಮೂಹ ಸಂಸ್ಥೆಗಳ ಏಳಿಗೆ ನಮ್ಮೆಲ್ಲರ ಜಾವಾಬ್ಧಾರಿ ಅದನ್ನು ನಾವೆಲ್ಲರೂ ಸರಿಯಾಗಿ ನಿರ್ವಹಿಸಿ ಸಂಸ್ಥೆಯ ಅಭಿವೃದ್ದಿಗೆ ಕಾರಣರಾಗೋಣ ಎಂದರು.
ಕಾರ್ಯದರ್ಶಿಗಳಾದ ವಿಜಯನಾರಾಯಣ.ಕೆ.ಎಂ ಮಾತನಾಡಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರು ಮತ್ತು ಆಡಳಿತ ಮಂಡಳಿ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಅದು ಉನ್ನತ ಸ್ಥಾನಕ್ಕೆ ಏರಬಹುದು. ನೂತನ ಆಡಳಿತ ಮಂಡಳಿಯ ಜೊತೆಯಲ್ಲಿ ನಾವೆಲ್ಲರೂ ಸಹಮತದಿಂದ ಕಾರ್ಯನಿರ್ವಹಿಸೋಣ ಎಂದರು.
ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ನಾನು ಈ ಕಾಲೇಜಿನ ಆಗುಹೋಗುಗಳ ಬಗ್ಗೆ ತಿಳುವಳಿಕೆಯನ್ನು ಹೊಂದಿದ್ದು, ಮುಂದಿನ ಕಾರ್ಯನಿರ್ವಹಣೆಯಲ್ಲಿ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ನೀಡುವುದಕ್ಕೆ ಆಡಳಿತ ಮಂಡಳಿ ಬದ್ದವಾಗಿದೆ ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ರವೀಂದ್ರ.ಪಿ, ಶ್ರೀಪತಿ ಕಲ್ಲೂರಾಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀ ಪ್ರಸಾದ್, ಸಹಾಯಕ ಕಾರ್ಯನಿರ್ವಣಾಧಿಕಾರಿ ವೆಂಕಟ್ರಮಣ ಭಟ್ ಮಂಕುಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷರಾಗಿ ಪುತ್ತೂರು ವಿವಿಧ್ ಎನರ್ಜಿ ಸಿಸ್ಟಮ್ಸ್ನ ರವಿಕೃಷ್ಣ.ಡಿ.ಕಲ್ಲಾಜೆ, ಸಂಚಾಲಕರಾಗಿ ಬೊಳ್ವಾರಿನ ಪ್ರಸನ್ನ ದರ್ಬೆ, ಕೋಶಾಧಿಕಾರಿಗಳಾಗಿ ನೆಕ್ರಾಜೆಯ ಅರವಿಂದ ವಳಕಟ್ಟೆ, ನಿರ್ದೇಶಕರುಗಳಾಗಿ ಮುಕ್ರುಂಪಾಡಿಯ ರಕ್ಷಾ ಪ್ರಭು, ಕೊಂಬೆಟ್ಟುವಿನ ವೇದಾ ಲಕ್ಷ್ಮೀಕಾಂತ ಆಚಾರ್ಯ, ಚಿಕ್ಕ ಮುಡ್ನೂರಿನ ಮನೋಜ್ ಶೆಣೈ, ಕಲ್ಲಡ್ಕದ ಸುಜಿತ್ ಕೊಟ್ಟಾರಿ, ಮುಂಡ್ಯ ನೆಟ್ಟಣಿಗೆ ಮುಡ್ನೂರಿನ ಕೆ.ಸುಬ್ರಮಣ್ಯ ಭಟ್ ಮತ್ತು ದ ವೆಬ್ ಪೀಪಲ್ ಸಂಸ್ಥಾಪಕ ಆದಿತ್ಯ ಕಲ್ಲೂರಾಯ ಆಯ್ಕೆಯಾಗಿದ್ದಾರೆ ಎಂದು ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ತಿಳಿಸಿದ್ದಾರೆ.


