ಪುತ್ತೂರು: ವಿಟ್ಲ ಶ್ರೀ ಭಗವತೀ ಕ್ಷೇತ್ರದಲ್ಲಿ ಸಿಂಹಮಾಸದ ವಿಶೇಷ ಪೂಜೆಯ ಸಂದರ್ಭದಲ್ಲಿ, ಪ್ರತ್ತೂರು ವೈಷ್ಣವೀ ನಾಟ್ಯಾಲಯ (ರಿ) ಇದರ ರಜತ ನೃತ್ಯಾಂತರ್ಯಾನದ ಅಂಗವಾಗಿ ವಿಟ್ಲ ಶಾಖೆಯ ವಿದ್ಯಾರ್ಥಿಗಳಿಂದ 'ನೃತ್ಯಾರ್ಪಣಂ' ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಿತು.
ವೈಷ್ಣವೀ ರಜತ ನೃತ್ಯಾಂತರ್ಯಾನದ ಗೌರವಾಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಗವತೀ ದೇವಸ್ಥಾನದ ವ್ಯವಸ್ಥಾಪಕರಾದ ಕೇಶವ ಆರ್.ವಿ. ಅವರು ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಸುಭಾಷ್ ಚಂದ್ರ ನಾಯಕ್ ಹಾಗೂ ಸಂಗೀತ ಗುರುಗಳಾದ ವಿದುಷಿ ಪಾರ್ವತಿ ಗಣೇಶ್ ಭಟ್ ಹೊಸಮೂಲೆ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು. ನಾಟ್ಯಾಲಯದ ನಿರ್ದೇಶಕಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ರವರು ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ನಾಟ್ಯಾಲಯದ ವತಿಯಿಂದ ಕೇಶವ್ ಆರ್.ವಿ., ಪಾರ್ವತಿ ಗಣೇಶ್ ಭಟ್ ಹಾಗೂ ಶ್ರೀಮತಿ ಲಲಿತಾ ಅವರನ್ನು ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ಜರಗಿತು.
ಹಿಮ್ಮೇಳದಲ್ಲಿ ನಟುವಾಂಗವನ್ನು ವಿದುಷಿ ಯೋಗೀಶ್ವರಿ ಜಯಪ್ರಕಾಶ್ ನಿರ್ವಹಿಸಿದರು. ಹಾಡುಗಾರಿಕೆಯಲ್ಲಿ ವಿದ್ವಾನ್ ವಿಷ್ಣು ಭಟ್ ವೆಳಿಕ್ಕೋತ್ ಮತ್ತು ವಸಂತ ಕುಮಾರ ಗೋಸಾಡ, ಮೃದಂಗದಲ್ಲಿ ರಾಜೀವ ಗೋಪಾಲ ವೆಳ್ಳಿಕ್ಕೋತ್, ಕೊಳಲಿನಲ್ಲಿ ರಾಜಗೋಪಾಲ ಕಾಞಂಗಾಡ್ ಹಾಗೂ ರಿದಂ ನಲ್ಲಿ ಶಶಾಂಕ ಬಿ.ಸಿ.ರೋಡು ಸಹಕರಿಸಿದರು. ಶ್ರೀಮತಿ ತುಳಸಿ ವಿಟ್ಲ ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀಮತಿ ಚಂಪಾ ವಿಟ್ಲ ವಂದಿಸಿದರು.
