ಸಿದ್ದಕಟ್ಟೆ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ಶೇ.12 ರಷ್ಟು ಲಾಭಾಂಶ ಘೋಷಣೆ

Shreya Hegde
0


ಬಂಟ್ವಾಳ: "ಸಹಕಾರ ಸಂಘಗಳು ಕೇವಲ ಆರ್ಥಿಕ ವ್ಯವಹಾರಗಳಿಗೆ ಮಾತ್ರ ಸೀಮಿತವಾಗದೆ, ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಈ ವರ್ಷ 'ಪಂಚ ಪರಿವರ್ತನೆ'ಯಡಿ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ" ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಹೇಳಿದರು. ಅವರು ಸಿದ್ದಕಟ್ಟೆಯ ಕೃಷ್ಣ ರೈ ರೈತ ಸಭಾಂಗಣದಲ್ಲಿ ಜರಗಿದ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಪರಿಸರ ಸಂರಕ್ಷಣೆ ಹಾಗೂ ಆರೋಗ್ಯ ಸೇವೆಗೆ ಆಧ್ಯತೆ

ಮನುಷ್ಯನ ಆರೋಗ್ಯಕ್ಕೆ ಶುದ್ಧ ಗಾಳಿಯ ಅವಶ್ಯಕತೆ ಇರುವುದರಿಂದ, ಪ್ರತಿಯೊಬ್ಬರೂ ತಮ್ಮ ಹಿರಿಯರ ಹೆಸರಿನಲ್ಲಿ ಗಿಡ ನೆಟ್ಟು ಸ್ವಚ್ಛ ಪರಿಸರ ನಿರ್ಮಿಸುವಂತೆ ಕರೆ ನೀಡಿದ ಅಧ್ಯಕ್ಷರು, ಕಾರ್ಯಕ್ರಮದ ವೇದಿಕೆಯಲ್ಲಿ ಸಾಂಕೇತಿಕವಾಗಿ ಸದಸ್ಯರಿಗೆ ಹಲಸಿನ ಗಿಡಗಳನ್ನು ವಿತರಿಸಿದರು. ಒಟ್ಟು ಸುಮಾರು 3,000 ಹಲಸಿನ ಗಿಡಗಳನ್ನು ಸದಸ್ಯರಿಗೆ ವಿತರಿಸಲಾಯಿತು. ಇದೇ ವೇಳೆ ಪ್ರಧಾನ ಮಂತ್ರಿ ಜನ ಔಷಧಿ ಸಿದ್ದಕಟ್ಟೆ ಘಟಕದ ವತಿಯಿಂದ ಆಶಕ್ತ ಸದಸ್ಯರಿಗೆ ಉಚಿತ ರಕ್ತದೊತ್ತಡ, ಸಕ್ಕರೆ ಕಾಯಿಲೆ ಹಾಗೂ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದ್ದು, ಸದಸ್ಯರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.


ಆರ್ಥಿಕ ಸಾಧನೆ ಮತ್ತು ಲಾಭಾಂಶ ವಿವರ

ಸಂಘವು ಗತ ವರ್ಷದಲ್ಲಿ ಒಟ್ಟು 720.47 ಕೋಟಿ ರೂ. ವ್ಯವಹಾರ ನಡೆಸಿ 2.19 ಕೋಟಿ ರೂ. ನಿವ್ವಳ ಲಾಭಗಳಿಸಿದ್ದು, ಸಂಘದ ಸದಸ್ಯರಿಗೆ ಶೇ. 12 ರಷ್ಟು ಲಾಭಾಂಶ ನೀಡಲಾಗುವುದು. ವಿವಿಧ ವಿಭಾಗಗಳಲ್ಲಿ ಒಟ್ಟು 133.63 ಕೋಟಿ ಸಾಲ ಹಾಗೂ ಒಟ್ಟಾರೆಯಾಗಿ 2788 ಸದಸ್ಯರಿಗೆ 152.24 ಕೋಟಿ ರೂ. ಸಾಲ ವಿತರಿಸಲಾಗಿದೆ. ಮಂಗಳಾ ಕಿಸಾನ್ ಕಾರ್ಡ್ ಮೂಲಕ 2299 ಮಂದಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 49.82 ಕೋಟಿ ರೂ., ಕೃಷಿ ಅಭಿವೃದ್ಧಿಗೆ 391 ಮಂದಿಗೆ 12.77 ಕೋಟಿ ರೂ., ಹಾಗೂ ಹೈನುಗಾರಿಕೆ ಮತ್ತು ಹಸುಗಳ ನಿರ್ವಹಣೆಗಾಗಿ ಶೂನ್ಯ ಬಡ್ಡಿ ದರದಲ್ಲಿ 3.60 ಕೋಟಿ ರೂ. ಸಾಲ ನೀಡಲಾಗಿದೆ. ಇದರೊಂದಿಗೆ ಜಮೀನು ಅಡಮಾನ ಸಾಲ ಮತ್ತು ವೈಯಕ್ತಿಕ ಸಾಲಗಳು ಸೇರಿದಂತೆ ಒಟ್ಟಾರೆ ಆರ್ಥಿಕ ಪ್ರಗತಿಯನ್ನು ಸಾಧಿಸಲಾಗಿದೆ.


ಮುಂದಿನ ಯೋಜನೆಗಳು

ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನದಡಿ ಪ್ರಾಥಮಿಕ ಸಹಕಾರ ಸಂಘಗಳು ಸ್ಥಳೀಯ ಉತ್ಪನ್ನಗಳ ಉತ್ಪಾದನೆಗೆ ಉತ್ತೇಜನ ನೀಡಬೇಕು ಎಂದ ಅಧ್ಯಕ್ಷರು, ಮುಂದಿನ ದಿನಗಳಲ್ಲಿ ಸಂಘದ ಕೇಂದ್ರ ಕಚೇರಿ ಆವರಣದಲ್ಲಿ ಸಾಮಾನ್ಯ ಸೇವಾ ಕೇಂದ್ರ (CSC) ತೆರೆಯುವ ಮೂಲಕ ಜನಸಾಮಾನ್ಯರಿಗೆ ದೊರೆಯುವ ಎಲ್ಲ ಸರಕಾರಿ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲಾಗುವುದು ಎಂದು ಘೋಷಿಸಿದರು.


ಸಂಘದ ಇತರ ಪ್ರಮುಖ ಮುಖ್ಯಾಂಶಗಳು

ಸಂಘದಲ್ಲಿ ಒಟ್ಟು 5,885 ಸದಸ್ಯರಿದ್ದು, ಅದರಲ್ಲಿ 3,904 'ಎ' ತರಗತಿ ಹಾಗೂ 1,981 'ಡಿ' ತರಗತಿ ಸದಸ್ಯರಿದ್ದಾರೆ. 2025-26ನೇ ಸಾಲಿನಲ್ಲಿ ಯಶಸ್ವಿನಿ ಆರೋಗ್ಯ ರಕ್ಷಣೆ ಯೋಜನೆಯಡಿ 612 ಕುಟುಂಬಗಳ 2,307 ಸದಸ್ಯರು ನೋಂದಾಯಿಸಿಕೊಂಡಿದ್ದು, ಒಟ್ಟು 4.23 ಲಕ್ಷ ರೂ. ಪ್ರೀಮಿಯಂ ಪಾವತಿಸಲಾಗಿದೆ. ಲೆಕ್ಕಪರಿಶೋಧನೆಯಲ್ಲಿ ಸತತವಾಗಿ 'ಎ' ಗ್ರೇಡ್ ಪಡೆದಿರುವ ಸಂಘವು ಶೇ. 98 ರಷ್ಟು ಸಾಲ ವಸೂಲಾತಿ ಸಾಧನೆ ಮಾಡಿದ್ದು, ಪ್ರಸಕ್ತ ಸಾಲಿನಲ್ಲಿ ಶೇ. 100 ರಷ್ಟು ವಸೂಲಾತಿ ಗುರಿ ಹೊಂದಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ ಸಂಘವು ಸತತ ಪ್ರಶಸ್ತಿಗಳಿಗೆ ಪಾತ್ರವಾಗಿದೆ.


ಸಭೆಯ ಆರಂಭದಲ್ಲಿ ನಿಧನ ಹೊಂದಿದ 38 ಸದಸ್ಯರಿಗೆ ಮೌನ ಪ್ರಾರ್ಥನೆ ಮೂಲಕ ನುಡಿನಮನ ಸಲ್ಲಿಸಲಾಯಿತು. ಮುಖ್ಯ ಕಚೇರಿ ಸೇರಿದಂತೆ ರಾಯಿ, ಆರಂಬೋಡಿ, ಮಾವಿನಕಟ್ಟೆ ಮತ್ತು ಅರಳ ಶಾಖೆಗಳು ಅತ್ಯುತ್ತಮ ಸೇವೆ ನೀಡುತ್ತಿವೆ ಎಂದು ತಿಳಿಸಲಾಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸಂದೇಶ್ ಶೆಟ್ಟಿ ಪೊಡುಂಬ, ನಿರ್ದೇಶಕರಾದ ಸತೀಶ್ ಪೂಜಾರಿ, ರಶ್ಮಿತ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ವೀರಪ್ಪ ಪರವ, ಜಾರಪ್ಪ ನಾಯ್ಕ, ಮಂದರಾತಿ ಎಸ್. ಶೆಟ್ಟಿ, ಪುಷ್ಪಲತಾ ಎಸ್.ಆರ್., ವೃತ್ತಿಪರ ನಿರ್ದೇಶಕರಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ನವೀನ್ ಹೆಗ್ಡೆ ಹಾಗೂ ವಿವಿಧ ಸಹಕಾರಿ ಸಂಘಗಳ ಮತ್ತು ಸ್ಥಳೀಯ ಸಂಸ್ಥೆಗಳ ಗಣ್ಯರು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ದಿನೇಶ್ ಪೂಜಾರಿ ವಂದಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top