
ಪುತ್ತೂರು : ಶಿಕ್ಷಕನಾದವನು ಕೇವಲ ಪಾಠ ಬೋಧಿಸುವವನಾಗಿರದೆ, ವಿದ್ಯಾರ್ಥಿಗಳ ಮನಸ್ಸನ್ನು ಅರ್ಥಮಾಡಿಕೊಳ್ಳುವ ಮಾರ್ಗದರ್ಶಿಯಾಗಬೇಕು. ಮೌಲ್ಯಾಧಾರಿತ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ಸೂಕ್ಷ್ಮ ಚಿಂತನೆ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಬೇಕು ಎಂದು ಖ್ಯಾತ ವಾಗ್ಮಿ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಸ್ವಾಮಿ ವಿವೇಕಾನಂದರು 1893ರ ಸೆಪ್ಟೆಂಬರ್ 11ರಂದು ಅಮೆರಿಕದ ಚಿಕಾಗೋದಲ್ಲಿ ಮಾಡಿದ ಐತಿಹಾಸಿಕ ಭಾಷಣದ 133ನೇ ವರ್ಷಾಚರಣೆಯ ಪ್ರಯುಕ್ತ ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ‘ವಿವೇಕ ವಿಜಯ’ ಶೀರ್ಷಿಕೆಯಡಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ‘ವರ್ತಮಾನ ಶಿಕ್ಷಣ ಮತ್ತು ಭವಿಷ್ಯ ಭಾರತ’ ವಿಷಯದ ಕುರಿತು ಶಿಕ್ಷಕರು ಹಾಗೂ ವೃತ್ತಿಪರ ಶಿಕ್ಷಣದ ವಿದ್ಯಾರ್ಥಿಗಳಿಗಾಗಿ ಅವರು ಉಪನ್ಯಾಸ ಹಾಗೂ ಸಂವಾದ ನಡೆಸಿದರು.
ಇಂದಿನ ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಹೆಚ್ಚು ಅವಲಂಬಿಸಿದ್ದಾರೆ. ಸಾಮಾಜಿಕ ಜಾಲತಾಣಗಳು ಹಾಗೂ ಡಿಜಿಟಲ್ ಜಗತ್ತಿನ ಪ್ರಭಾವದಿಂದ ತಮ್ಮನ್ನು ಇತರರೊಂದಿಗೆ ಹೋಲಿಸಿಕೊಂಡು, ತಮ್ಮ ಸಾಮರ್ಥ್ಯ ಮತ್ತು ಸಾಧನೆಗಳ ಬಗ್ಗೆ ಅತೃಪ್ತಿ ಅಥವಾ ಕೀಳರಿಮೆ ಬೆಳೆಸಿಕೊಳ್ಳುವ ಸಂದರ್ಭಗಳಿವೆ. ಇಂತಹ ಸೂಕ್ಷ್ಮ ಮನಸ್ಸಿನ ಮಕ್ಕಳಿಗೆ ಬೋಧಿಸುವ ಶಿಕ್ಷಕರು ಅವರ ಮನಸ್ಸನ್ನು ಅರ್ಥಮಾಡಿಕೊಂಡು ಮಾರ್ಗದರ್ಶನ ನೀಡಬೇಕು ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ತನ್ನ ಮಗುವಿನಂತೆ ಪ್ರೀತಿಸಿ, ಅವರ ಸಾಮರ್ಥ್ಯವನ್ನು ಗುರುತಿಸಿ ಆತ್ಮವಿಶ್ವಾಸ ಬೆಳೆಸುವ ಶಿಕ್ಷಕನೇ ನಿಜವಾದ ಅರ್ಥದಲ್ಲಿ ಶ್ರೇಷ್ಠ ಶಿಕ್ಷಕ. ಶಾಲಾ ಅವಧಿಯಲ್ಲಿ ವೈಯಕ್ತಿಕ ಚಿಂತೆಗಳನ್ನು ಬದಿಗಿಟ್ಟು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿಯಿಂದ ಬೋಧಿಸಬೇಕು. ಶಿಕ್ಷಣವೆಂದರೆ ಕೇವಲ ಮಾಹಿತಿಯನ್ನು ತುಂಬುವುದಲ್ಲ, ಮಗುವಿನೊಳಗಿರುವ ಶಕ್ತಿಯನ್ನು ಹೊರತರುವ ಪ್ರಕ್ರಿಯೆ. ಸ್ವಾಮಿ ವಿವೇಕಾನಂದರ ಶಿಕ್ಷಣ ತತ್ತ್ವದಲ್ಲಿ ಈ ಸಂದೇಶದ ಸಾರ ಅಡಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ವಿಶೇಷ ಅಭ್ಯಾಗತರಾಗಿ ಭಾಗವಹಿಸಿದ್ದ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಗಂಗಾಧರ ರೈ ಪೆರ್ನೆ ಮಾತನಾಡಿ, ಬ್ರಿಟಿಷರ ದಬ್ಬಾಳಿಕೆಯ ಸಂದರ್ಭದಲ್ಲಿ ನಮ್ಮವರೇ ಆದ ಸನ್ಯಾಸಿಯೊಬ್ಬರು ಚಿಕಾಗೋದಲ್ಲಿ ಮಾಡಿದ ಭಾಷಣವು ಭಾರತದ ಹಿರಿಮೆಯನ್ನು ಜಗತ್ತಿನಾದ್ಯಂತ ಪಸರಿಸಲು ಕಾರಣವಾಯಿತು. ಆ ಸಂದೇಶದ ಸಾರವನ್ನು ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕಿ ವತ್ಸಲಾ ರಾಜ್ನಿ ಹಾಗೂ ಅಧ್ಯಕ್ಷ ರವೀಂದ್ರ ಪಿ. ಉಪಸ್ಥಿತರಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವಿಧ ವಿದ್ಯಾಸಂಸ್ಥೆಗಳು ಹಾಗೂ ಪುತ್ತೂರು ಮತ್ತು ಸುತ್ತಮುತ್ತಲಿನ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರೇರಣಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದೇವಿಚರಣ್ ರೈ ಎಂ. ಸ್ವಾಗತಿಸಿದರು. ಉಪನ್ಯಾಸಕಿ ಮೋನಿಷಾ ಎನ್. ವಂದಿಸಿದರು. ಪವಿತ್ರ ಕಾರ್ಯಕ್ರಮ ನಿರೂಪಿಸಿದರು.
