ನಾವು ಎಷ್ಟೇ ದೊಡ್ಡವರಾದರು ನಮ್ಮ ಬಾಲ್ಯವನ್ನು ಮರೆಯಲು ಆಗುದಿಲ್ಲ ಹಾಗೇ ಆ ವಯಸ್ಸಿನಲ್ಲಿ ಆಡಿದ ಆಟಗಳನ್ನು ಮರೆಯಲಾಗದು ಅದು ನಮ್ಮ ಜೀವನದಲ್ಲಿ ಮರುಕಳಿಸದ ಒಂದು ಸುಂದರ ಪ್ರಪಂಚ. ಆ ಜೀವನವನ್ನು ನೆನಪಿಸಿಕೊಂಡಗ ಮೊದಲು ನೆನಪಾಗುವುದು ನಾವು ಆಟ ಆಡಿದ ಮೈದಾನ ಮತ್ತು ಸ್ನೇಹಿತರೊಂದಿಗೆ ಮಾಡಿದ ತುಂಟಾಟಗಳು ಎಲ್ಲವು ನೆನಪಾಗುತ್ತವೆ. ಆದರೆ ಇಂದಿನ ಜಗತ್ತಲ್ಲಿ ಇಂತಹ ಒಂದು ಪ್ರಪಂಚವು ಕಾಣಿಸುವುದಿಲ್ಲ.
ಸುಮಾರು 60 ಮತ್ತು 70ರ ದಶಕದ ಬಾಲ್ಯ ಬಹಳ ಕಷ್ಟದಿಂದ ಕೂಡಿತ್ತು. ಆರ್ಥಿಕವಾಗಿ ದುರ್ಬಲವಾಗಿತ್ತು. ಆದರೂ ಆಗ ಕಲಿತ ಜೀವನದ ನೀತಿ ಪಾಠಗಳು ಯಾವ ಶಿಕ್ಷಣದಲ್ಲಿಯೂ ಸಿಗಲ್ಲ ಎಂದು ನಮ್ಮ ಹಿರಿಯರು ಹೇಳುತ್ತಾರೆ
ಎಲ್ಲಾ ಸ್ನೇಹಿತರು ಸೇರಿ ಆಡುವಂತಹ ಖೋ - ಖೋ, ಕಬಡ್ಡಿ, ವಾಲಿಬಾಲ್, ಪುಟಾಬಾಲ್, ಲಗೋರಿ, ಕುಂಟ್ಟೆಬಿಲ್ಲೆ, ಸಕ್ಕಸರಗಿ ಮತ್ತು ಹಗ್ಗದ ಆಟ, ಕೆರೆ ದಡ ಇನ್ನೂ ಮುಂತಾದ ಆಟಗಳನ್ನು ಆಡುತ್ತಾ ಎಲ್ಲರನ್ನು ರೇಗಿಸುತ್ತಾ, ತಮಾಷೆ ಮಾಡುತ್ತಾ ಹಾಗೂ ಕೆಲವೊಂದು ಸಲ ಕಿತ್ತಾಡಿ ನೀನು ಯಾರು ಎಂದು ಗೊತ್ತೇ ಇಲ್ಲ ಎನ್ನುವ ಹಾಗೇ ಇದ್ದು ಮರುದಿನ ಮತ್ತೆ ಎಲ್ಲರು ಸೇರಿ ಅದನ್ನ ಎಲ್ಲಾ ಮರೆತು ಆಟ ಆಡುವುದು ಎಲ್ಲವೂ ಸಹ ಮರೆಯಲಾಗದ ಒಂದು ಸುಂದರ ಅನುಭವ. ಇಂತಹ ನೆನಪುಗಳನ್ನು ಪಡೆದುಕೊಂಡ ನಾವೇ ಅದೃಷ್ಟವಂತರು. ಇಂದಿನ ಸಮಾಜದಲ್ಲಿ ಇದನ್ನು ಕಾಣುವುದು ಅಪರೂಪ ಈಗಿನ ಬಹುತೇಕ ಮಕ್ಕಳು ಆನ್ಲೈನ್ ಗೇಮ್, ಟಿವಿ, ಮೊಬೈಲ್ ಇಂತಹ ಕೆಲಸದಲ್ಲಿಯೇ ಹೆಚ್ಚು ಸಮಯ ಕಳೆಯುತ್ತಾರೆ.
ಈಗಿನ ಪೋಷಕರಂತೆ ಅಂದಿನ ಪೋಷಕರು ಅತಿಯಾದ ಕಾಳಜಿ ವಹಿಸುತ್ತಿರಲಿಲ್ಲ ಆದರೂ ಮಕ್ಕಳು ಪೋಷಕರ ಕಣ್ಣಾಗವಲಿನಲ್ಲಿ ಸುರಕ್ಷಿತರಾಗಿರುತ್ತಿದ್ದರು. ಏಟು ಮಾಡಿಕೊಂಡು ಕಲಿತದ್ದೇ ಹೆಚ್ಚು ಆದರೂ ಆ ನೋವು ಮುಂದಿನ ಜೀವನಕ್ಕೆ ಉತ್ತಮ ತಳಹದಿ ಎಂದೆನ್ನಿಸಿದೆ. ಅಂದು ಮಾಹಿತಿಯು ನಿಧಾನವಾಗಿತ್ತು ಆದರೆ ತಾಳ್ಮೆಯ ವೇಗ ಹೆಚ್ಚಿತ್ತು. ಈಗಿನಂತೆ ಅಂದು ಮೊಬೈಲ್, ವಿಡಿಯೋ ಕಾಲ್‌ಗಳು ಯಾವುದೇ ಸೌಲಭ್ಯಗಳಿರಲಿಲ್ಲ ಆದರೂ ಆ ಜೀವನ ಸುಂದರವಾಗಿತ್ತು, ಎಲ್ಲ ಸುದ್ದಿಗಳು ಪತ್ರದ ಮೂಲಕ ನಿಧಾನವಾಗಿ ತಲುಪಿತ್ತಿತ್ತು ಆದರೂ ಎಲ್ಲರಲ್ಲೂ ತಾಳ್ಮೆಯ ಗುಣವಿತ್ತು.
ಇಂದು ತಂತ್ರಜ್ಞಾನ ಬೆಳೆದು ನಿಂತಿದೆ ಹಾಗೇ ಈಗಿನ ಮಕ್ಕಳು ಅದನ್ನು ತಮ್ಮ ಜೀವನದ ಅಳವಡಿಸಿಕ್ಕೊಂಡಿದ್ದಾರೆ ಮಾಹಿತಿಯ ವೇಗ ಹೆಚ್ಚಿದರು ಇಂದು ಮಕ್ಕಳಲ್ಲಿನ ತಾಳ್ಮೆ ಇರುವುದಿಲ್ಲ. ತಮ್ಮ ಪೂರ್ತಿ ಸಮಯವನ್ನು ಕೇವಲ ಮೊಬೈಲ್ ಟಿವಿ ಮುಂತಾದವುಗಳೊಂದಿಗೆನೇ ಕಳೆಯುತ್ತಾರೆ.ಇದರಿಂದ ಈಗಿನ ಮಕ್ಕಳಿಗೆ ಆಟದಲ್ಲಿ ಸ್ನೇಹದಲ್ಲಿ ಆಸಕ್ತಿಯೇ ಕಾಣುವುದಿಲ್ಲ ಇಂದಿನ ಮಕ್ಕಳಿಗೆ ಮೈದಾನದಲ್ಲಿ ಆಟ ಆಡುವುದೇ ಒಂದು ಅಪರೂಪದ ದಿನವಾಗಿರುತ್ತದೆ ಅಷ್ಟರ ಮಟ್ಟಿಗೆ ಇಂದಿನ ಜಗತ್ತು ಬಂದು ತಲುಪಿದೆ.
- ನೀಲಮ್ಮ ಬಾಣಕಾರ
ಪತ್ರಿಕೋದ್ಯಮ ವಿಭಾಗ, ಬಸವೇಶ್ವರ ಕಲಾ ಮಹಾವಿದ್ಯಾಲಯ ಬಾಗಲಕೋಟೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

