ಮಂಗಳೂರು: ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಸ್ಥಾನಮಾನ ದೊರೆತಿರುವುದು ತುಳುವರ ಅನೇಕ ವರ್ಷಗಳ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಹೇಳಿದರು.
ಈ ನಿಟ್ಟಿನಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ತುಳುಪರ ಹೋರಾಟಗಾರರೊಂದಿಗೆ ಅನೇಕ ರೀತಿಯಲ್ಲಿ ಜೊತೆಯಾಗಿದ್ದೆ. ಅಧಿವೇಶಗಳಲ್ಲಿಯೂ ಈ ಕುರಿತು ಪ್ರಸ್ತಾಪಿಸಿದ್ದೆ. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಸುನಿಲ್ ಕುಮಾರ್ ಕಾರ್ಕಳರವರು ಈ ಬೇಡಿಕೆಗೆ ವಿಶೇಷ ಮನ್ನಣೆ ನೀಡಿದ್ದರು. ಅಂತಿಮವಾಗಿ ಡಾ. ಮೋಹನ್ ಆಳ್ವರವರು ಸಲ್ಲಿಸಿದ ಸಮಗ್ರ ವರದಿಯು ಈ ಹೋರಾಟಕ್ಕೆ ಇನ್ನಷ್ಟು ಬಲ ನೀಡಿತ್ತು. ಇದೀಗ ನಮ್ಮೆಲ್ಲರ ಆಶಯ ಈಡೇರಿದ್ದು ದಶಕಗಳ ಕಾಲದ ಹೋರಾಟವು ಸಾರ್ಥಕವಾಗಿದೆ. ಇಂದು ಈ ಮಹತ್ವದ ನಿರ್ಧಾರ ಕೈಗೊಂಡ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರಿಗೂ ವಿಶೇಷ ಧನ್ಯವಾದಗಳು. ಇದೇ ವೇಳೆ ನಮ್ಮ ಮತ್ತೊಂದು ಪ್ರಮುಖ ಬೇಡಿಕೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಕುರಿತಂತೆಯೂ ಕ್ರಮ ಕೈಗೊಳ್ಳಲಾಗಿದ್ದು ಶೀಘ್ರದಲ್ಲಿ ಬೇಡಿಕೆ ಈಡೇರಲಿ ಎಂದು ಶಾಸಕರು ಹೇಳಿದರು.
