ಶಿಕ್ಷಕರು ವಿದ್ಯಾರ್ಥಿಗಳ ನಾಯಕತ್ವ ಗುಣಗಳನ್ನು ಬೆಳೆಸುವವರು: ಪ್ರೇಮನಾಥ್ ಕುಡ್ವ

Upayuktha
0


ಮಂಗಳೂರು: “ಶಿಕ್ಷಕರು ಪ್ರಾಮಾಣೀಕತೆ, ನಿಸ್ವಾರ್ಥ ಸೇವಾ ಮನೋಭಾವದಿಂದ, ಶ್ರದ್ಧೆಯಿಂದ ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಮೌಲ್ಯಾಧಾರಿತ ಶಿಕ್ಷಣ ಧಾರೆಯೆರೆದು ಜೀವನದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಲು ಸಲಹೆ ನೀಡಿ ಭವಿಷ್ಯದ ಉತ್ತಮ ನಾಗರೀಕರಾಗಿ ರೂಪಿಸುವ ಶ್ರೇಷ್ಠ ಜವಾಬ್ಧಾರಿಯನ್ನು ಹೊಂದಿದ್ದಾರೆ” ಎಂದು ನಗರದ ಕೆನರಾ ವರ್ಕ್‌ಶಾಪ್ ಕೈಗಾರಿಕಾ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರೇಮನಾಥ್ ಕುಡ್ವ ರವರು ಅಭಿಪ್ರಾಯ ವ್ಯಕ್ತಪಡಿಸಿದರು.


ಅವರು ರೋರ‍್ಯಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ ಮಂಗಳವಾರ (ಸೆ.08) ನಗರದ ಹೊಟೇಲ್ ವುಡ್‌ಲ್ಯಾಂಡ್ಸ್ ಸಭಾಂಗಣದಲ್ಲಿ ಜರಗಿದ ‘ಶಿಕ್ಷಕರ ದಿನಾಚರಣೆ’ಯಂದು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಶಿಕ್ಷಕರು ವಿದ್ಯಾರ್ಥಿಗಳ ಬದುಕಿನ ಹಾಗೂ ವೃತ್ತಿ ಜೀವನದ ಅಡಿಪಾಯ ಹಾಕುವ ಶಿಲ್ಪಿಗಳು ಎಂದು ನುಡಿದರು.


ರೋಟರಿ ಜಿಲ್ಲಾ 3181 ರ ಮಾಜಿ ಗವರ್ನರ್ ಆದ ಡಾ| ದೇವದಾಸ್ ರೈ ಅವರು ಗೌರವ ಅತಿಥಿಯಾಗಿ ಪಾಲ್ಗೊಂಡು ಶಿಕ್ಷಕರು ಪಠ್ಯ ಪುಸ್ತಕದ ಜ್ಞಾನವನ್ನು ಮಾತ್ರವಲ್ಲದೆ ಜೀವನದ ಮೌಲ್ಯ, ನಾಯಕತ್ವ ಗುಣಗಳನ್ನು ಬೆಳೆಸುವುದನ್ನು ಕಲಿಸುವವರು ಎಂದು ಹೇಳಿದರು. 


ಈ ಸಂದರ್ಭದಲ್ಲಿ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿಯಾದ ಶ್ರೀಮತಿ ಫ್ಲೋರಿನ್ ರೀಟಾ ಡಿಸೋಜಾರವರನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆ, ಸಾಧಿಸಿದ ಸಾಧನೆಯನ್ನು ಪರಿಗಣಿಸಿ ‘ಆದರ್ಶ ಶಿಕ್ಷಕಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಡಿಸೋಜಾರವರು ರೋಟರ‍್ಯಾಕ್ಟ್ ಸಂಸ್ಥೆಯ ಸಮಾಜ ಸೇವೆಯನ್ನು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು. ಕೇಶವ್ ರಾಮಕುಂಜ ರವರು ಪ್ರಶಸ್ತಿ ವಿಜೇತ ಶ್ರೀಮತಿ ಡಿಸೋಜಾರವರ ಪರಿಚಯ ಮತ್ತು ಸಾಧನೆಗಳ ವಿವರ ನೀಡಿದರು. 


ಸಂಸ್ಥೆಯ ಅಧ್ಯಕ್ಷ ರಕ್ಷಣ್ ರವರು ಸ್ವಾಗತಿಸಿ ದಿನಾಚರಣೆಯ ಉದ್ದೇಶ, ಮಹತ್ವವನ್ನು ವಿವರಿಸಿ ಈ ದಿನ ನಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ದಿನ ಎಂದು ಮಾಹಿತಿ ನೀಡಿದರು. ಕಾರ್ಯದರ್ಶಿ ಮುಖೇಶ್ ವರದಿ ಮಂಡಿಸಿದರು. ಕೋಶಾಧಿಕಾರಿ ಪ್ರಾಥಿಕ್ ಶೆಟ್ಟಿ ವಂದಿಸಿದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top