ಸುರತ್ಕಲ್‌ನಲ್ಲಿ ಪ್ರೊ. ಲೀಲಾವತಿ ಎಸ್. ರಾವ್ ಅವರಿಗೆ ಗೌರವ ನುಡಿ ನಮನ ಕಾರ್ಯಕ್ರಮ

Shreya Hegde
0


ಸುರತ್ಕಲ್: ಹಿರಿಯ ಲೇಖಕಿ, ಸಾಹಿತ್ಯ ಕಲಾ ಸಂಘಟಕಿ ಮತ್ತು ಸುರತ್ಕಲ್ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಪ್ರೊ. ಲೀಲಾವತಿ ಎಸ್. ರಾವ್ ಅವರ ಸಾಧನೆಯನ್ನು ಸ್ಮರಿಸಿ, ಅವರಿಗೆ ಗೌರವ ನುಡಿ ನಮನ ಸಲ್ಲಿಸುವ ಕಾರ್ಯಕ್ರಮವು ಸ್ಥಳೀಯ ವಿವೇಕಾನಂದ ಗ್ರಂಥಾಲಯದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಜರುಗಿತು.


ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಪ್ರೊ. ಲೀಲಾವತಿ ಎಸ್. ರಾವ್ ಅವರ ಸಾಹಿತ್ಯಿಕ, ಶೈಕ್ಷಣಿಕ ಹಾಗೂ ಸಾಂಘಿಕ ಸೇವೆಗಳನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.


ಸಾಹಿತಿಯೂ ಹಾಗೂ ಸುರತ್ಕಲ್‌ನ ಹಿಂದೂ ವಿದ್ಯಾದಾಯಿನಿ ಸಂಘದ ಉಪಾಧ್ಯಕ್ಷರಾದ ಬಾಲಕೃಷ್ಣ ಕೆ. (ಬಾಕೃ) ಮಾತನಾಡಿ, "ಲೀಲಾವತಿ ಎಸ್. ರಾವ್ ಅವರು ಸಾಹಿತ್ಯ ಲೋಕದಲ್ಲಿ ಉತ್ತಮ ವಿಮರ್ಶಕಿಯಾಗಿ, ದಾಸ ಸಾಹಿತ್ಯದಲ್ಲಿ ವಿಶೇಷ ಸಾಧನೆ ಮಾಡುವುದರ ಜೊತೆಗೆ ಹೊಸ ಬರಹಗಾರರಿಗೆ ಸದಾ ಪ್ರೋತ್ಸಾಹ ನೀಡಿದವರು" ಎಂದರು.


ನಿವೃತ್ತ ಪ್ರಾಧ್ಯಾಪಕ ಪ್ರೊ. ಟಿ. ಎಸ್. ಶ್ರೀಪೂರ್ಣ ಮಾತನಾಡಿ, ಮಾನವೀಯತೆ ಹಾಗೂ ಸೌಹಾರ್ದತೆಯ ನೆಲೆಗಟ್ಟಿನಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಪ್ರಸರಣಕ್ಕಾಗಿ ಅವರು ವಿಶೇಷ ಆಸಕ್ತಿ ವಹಿಸಿದ್ದರು ಎಂದು ಸ್ಮರಿಸಿದರು. ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ನಿಕಟಪೂರ್ವ ಅಧ್ಯಕ್ಷೆ ಡಾ. ಜ್ಯೋತಿ ಚೆಳೈರು ಮಾತನಾಡಿ, ಮಹಿಳಾ ಪರ ಪ್ರಬಲ ಧ್ವನಿಯಾಗಿ, ಸದರಿ ಸಂಘದ ಸ್ಥಾಪಕ ಸದಸ್ಯೆಯಾಗಿ ಮತ್ತು ಅಧ್ಯಕ್ಷೆಯಾಗಿ ಲೀಲಾವತಿ ರಾವ್ ಅವರು ನೀಡಿದ ಮಾರ್ಗದರ್ಶನ ಅನನ್ಯ ಎಂದರು.


ನಿವೃತ್ತ ಪ್ರಾಂಶುಪಾಲ ಡಾ. ಕೆ. ರಾಜಮೋಹನ ರಾವ್ ಅವರು, ಅವರು ಕೇವಲ ದಾನಿಯಷ್ಟೇ ಅಲ್ಲದೆ, ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಪ್ರೀತಿಯ ಶಿಕ್ಷಕಿಯಾಗಿ ಪ್ರೋತ್ಸಾಹ ನೀಡಿದವರು ಎಂದು ತಿಳಿಸಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ. ರಮೇಶ್ ಕುಳಾಯಿ, ಕನ್ನಡ ಭಾಷಾ ಪ್ರಾಧ್ಯಾಪಕಿಯಾಗಿ ಕಲಿಕೆಯ ಹಾಗೂ ಅಧ್ಯಯನ ಕ್ರಮಗಳನ್ನು ಅವರು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟ ಬಗೆಯನ್ನು ವಿವರಿಸಿದರು.


ಇದೇ ವೇಳೆ ನಿವೃತ್ತ ಪ್ರಾಂಶುಪಾಲ ಡಾ. ಕೆ. ಶಿವಶಂಕರ ಭಟ್, ನಿವೃತ್ತ ಪ್ರಾಧ್ಯಾಪಕ ಪ್ರೊ. ಜನಾರ್ಧನ ಭಟ್ ಹಾಗೂ ಹಿರಿಯ ಸಾಹಿತಿ ಪ್ರೊ. ರಘುರಾಮ ರಾವ್ ಬೈಕಂಪಾಡಿ ಅವರು ಲೀಲಾವತಿ ರಾವ್ ಅವರ ಆತ್ಮೀಯ ಗುಣಗಳು ಹಾಗೂ ಸಂಘಟನಾ ಚಾತುರ್ಯವನ್ನು ಮೆಲುಕು ಹಾಕಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ, "ಮಕ್ಕಳ ಸಾಹಿತಿಯಾಗಿ, ವಿಮರ್ಶಕಿಯಾಗಿ, ಲೇಖಕಿಯಾಗಿ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಶಸ್ತಿಗೆ ಭಾಜನರಾಗುವ ಮೂಲಕ ಪ್ರೊ. ಲೀಲಾವತಿ ಎಸ್. ರಾವ್ ಅವರು ಎಲ್ಲರಿಗೂ ಆದರ್ಶ ಮಾದರಿಯನ್ನು ರೂಪಿಸಿದ್ದಾರೆ" ಎಂದು ಬಣ್ಣಿಸಿದರು.


ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಕಾರ್ಯದರ್ಶಿ ಸತೀಶ್ ಸದಾನಂದ್ ವಂದಿಸಿದರು. ಸಭೆಯಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ. ಕೆ. ಕೃಷ್ಣ ಜೋಯಿಸ್, ನಾಗರಿಕ ಸಲಹಾ ಸಮಿತಿಯ ಟ್ರಸ್ಟಿ ಶ್ರೀನಿವಾಸ ರಾವ್ ಪಾದೆಬೆಟ್ಟು, ವೆಂಕಟೇಶ್ ಸುರತ್ಕಲ್, ಪೂವಪ್ಪ ನಾಯಕ್, ರಮೇಶ್ ಶೆಟ್ಟಿ ಕುಳಾಯಿ ಹಾಗೂ ರಾಮಣ್ಣ ಗೌಡ ಸುರತ್ಕಲ್ ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top