ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ)ದ ಹಿಂದಿ ವಿಭಾಗದ ವತಿಯಿಂದ ಕಾಲೇಜಿನ ರಜತ ಮಹೋತ್ಸವ ಸಭಾಭವನದಲ್ಲಿ ಬುಧವಾರ ಹಿಂದಿ ದಿವಸ್ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ಹಿಂದಿ ಭಾರತದ ಪ್ರಮುಖ ಭಾಷೆಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳು ವಿವಿಧ ಭಾಷೆಗಳನ್ನು ಕಲಿಯುವುದರಿಂದ ದೊರೆಯುವ ಅವಕಾಶಗಳತ್ತ ಗಮನ ಹರಿಸಬೇಕು. ಜೀವನದಲ್ಲಿ ಕಲಿಯಬೇಕಾದ ಪ್ರಮುಖ ವಿಷಯಗಳಲ್ಲಿ ತಮ್ಮ ಭಾಷೆಯನ್ನು ಗೌರವಿಸುವುದು ಹಾಗೂ ಭಾಷೆಯ ನಿಜವಾದ ಉದ್ದೇಶವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಮಹಾವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥ ಡಾ| ಮಲ್ಲಿಕಾರ್ಜುನ ಎನ್. ಭಾಗವಹಿಸಿದ್ದರು. ಅವರು ಹಿಂದಿ ದಿವಸದ ಮಹತ್ವವನ್ನು ವಿವರಿಸುತ್ತಾ, ಸೆಪ್ಟೆಂಬರ್ 14ರಂದು ಭಾರತೀಯ ಸಂವಿಧಾನ ಸಭೆಯು ಹಿಂದಿ ಭಾಷೆಯನ್ನು ದೇಶದ ಅಧಿಕೃತ ಆಡಳಿತ ಭಾಷೆಯಾಗಿ ಅಂಗೀಕರಿಸಿದ ನೆನಪಿಗಾಗಿ ಪ್ರತಿವರ್ಷ ಹಿಂದಿ ದಿವಸವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ವಿವಿಧ ಭಾಷಿಕ ಸಮುದಾಯಗಳ ನಡುವೆ ಸಂವಹನದ ಸೇತುವೆಯಾಗಿ ಹಿಂದಿ ಕಾರ್ಯನಿರ್ವಹಿಸುತ್ತದೆ. ಹಿಂದಿ ದಿವಸ್ ಕಬೀರ್, ತುಲಸೀದಾಸ್ ಹಾಗೂ ಪ್ರೇಮ್‌ಚಂದ್ ಅವರಂತಹ ಮಹಾನ್ ಸಾಹಿತ್ಯ ದಿಗ್ಗಜರ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಸ್ಮರಿಸುವುದರ ಜೊತೆಗೆ, ಯುವ ಪೀಳಿಗೆಯಲ್ಲಿ ಭಾಷಾ ಜ್ಞಾನ, ಕೌಶಲ್ಯ ಹಾಗೂ ರಾಷ್ಟ್ರೀಯ ಏಕತೆಯ ಭಾವನೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಹಿಂದಿ ದಿವಸ್ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಕಾರ್ಯಕ್ರಮದಲ್ಲಿನಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿ ಸಂಯೋಜಕ ಅಶ್ವಿನ್ ಮೊಂತೇರೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಿಂಪಲ್ ಮಿಶೆಲ್ ತಾವ್ರೊ ಸಹಕರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಏಂಜಲ್ ಮತ್ತು ಬಳಗದವರು ಪ್ರಾರ್ಥನೆ ನೆರವೇರಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಡಾ| ಡಿಂಪಲ್ ಜೇನಿಫರ್ ಫೆರ್ನಾಂಡಿಸ್ ಸ್ವಾಗತಿಸಿದರು. ದ್ವಿತೀಯ ಬಿ.ಎ. ವಿಭಾಗದ ಮನೀಶ್ ವಂದನಾರ್ಪಣೆ ಸಲ್ಲಿಸಿದರು. ದ್ವಿತೀಯ ಬಿ.ಸಿ.ಎ. ವಿಭಾಗದ ಭಾರದ್ವಾಜ್ ಭಂಡಾರ್ಕರ್ ಕಾರ್ಯಕ್ರಮ ನಿರೂಪಿಸಿದರು.


