ಕೆಂಪು ದಾಸವಾಳ ಮತ್ತು ಶ್ರೀ ಗಣೇಶನ ಸಂಬಂಧ

Upayuktha
0

ಗಣೇಶ ಪೂಜೆಯಲ್ಲಿ ಕೆಂಪು ದಾಸವಾಳವನ್ನೇ ಏಕೆ ಅರ್ಪಿಸಲಾಗುತ್ತದೆ ? ಅಧ್ಯಾತ್ಮಶಾಸ್ತ್ರವೇನು ಹೇಳುತ್ತದೆ?



ಹಿಂದೂ ಧರ್ಮದ ಸಾಂಪ್ರದಾಯಿಕ ಪೂಜಾ-ವಿಧಿಗಳಲ್ಲಿ ನಿರ್ದಿಷ್ಟ ದೇವತೆಗೆ ನಿರ್ದಿಷ್ಟ ವಸ್ತುವನ್ನೇ ಅರ್ಪಿಸುವ ನಿಯಮವಿರುವುದು ಯಾಕೆ ಎಂದು ಎಂದಾದರೂ ಯೋಚಿಸಿದ್ದೀರಾ? ಆಧುನಿಕ ಸಂಸ್ಕೃತಿಯಲ್ಲಿ ಹೂವುಗಳ ಆಯ್ಕೆಯು ಕೇವಲ ವೈಯಕ್ತಿಕ ಇಷ್ಟ ಅಥವಾ ಸೌಂದರ್ಯದ ವಿಷಯವೆಂದು ಪರಿಗಣಿಸಲ್ಪಟ್ಟರೂ, ಆಧ್ಯಾತ್ಮಶಾಸ್ತ್ರದಲ್ಲಿ ಪ್ರಾಚೀನ ಕಾಲದಿಂದಲೂ ಪ್ರತಿಯೊಂದು ಘಟಕದಲ್ಲೂ ಒಂದು ನಿರ್ದಿಷ್ಟ ಸೂಕ್ಷ್ಮ ಶಕ್ತಿ ಇರುತ್ತದೆ ಎಂದು ನಂಬಲಾಗಿದೆ. ಗೋವಾದ 'ಮರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ'ದ ಸಂಶೋಧಕರು ಈ ಸಾಂಪ್ರದಾಯಿಕ ಪದ್ಧತಿಗಳನ್ನು ಪರೀಕ್ಷಿಸಿದಾಗ, ಹೂವುಗಳ ಆಯ್ಕೆಯಿಂದ ಸುತ್ತಮುತ್ತಲಿನ ವಾತಾವರಣದ ಶಕ್ತಿಯಲ್ಲಿ ಗಮನಾರ್ಹ ಬದಲಾವಣೆಯಾಗುತ್ತದೆ ಎಂಬ ತೀರ್ಮಾನಕ್ಕೆ ಬರಲಾಯಿತು.


ಈ ಅಧ್ಯಯನದಲ್ಲಿ ಸಂಶೋಧನಾ ತಂಡವು ಒಂದು ಮೂಲಭೂತ ಪ್ರಶ್ನೆಗೆ ಉತ್ತರವನ್ನು ಹುಡುಕಲು ಪ್ರಯತ್ನಿಸಿತು: 'ಪೂಜೆಯ ಸಮಯದಲ್ಲಿ ವಿವಿಧ ರೀತಿಯ ಹೂವುಗಳನ್ನು ಅರ್ಪಿಸಿದಾಗ ಸುತ್ತಮುತ್ತಲಿನ ವಾತಾವರಣದ ಶಕ್ತಿಯಲ್ಲಿ ಯಾವ ಬದಲಾವಣೆಗಳಾಗುತ್ತವೆ?' ಮಾನವ ಸಂವೇದನೆಗಳ (ಇಂದ್ರಿಯಗಳ)ಆಚೆಗಿನ ಬದಲಾವಣೆಗಳನ್ನು ದಾಖಲಿಸಲು ಸಂಶೋಧಕರು 'ಪಾಲಿಕಾನ್ಸ್ಟ್ರಾಸ್ಟ್ ಇಂಟರ್ಫೆರೆನ್ಸ್ ಫೋಟೋಗ್ರಫಿ' (PIP) ತಂತ್ರಜ್ಞಾನವನ್ನು ಬಳಸಿದರು. ಈ ತಂತ್ರಜ್ಞಾನವು ಯಾವುದೇ ವಸ್ತು ಅಥವಾ ವ್ಯಕ್ತಿಯ ಸುತ್ತಲೂ ಇರುವ ಅದೃಶ್ಯ ಶಕ್ತಿ, ಅಂದರೆ ಪ್ರಭಾವಲಯವನ್ನು (Aura) ಸೆರೆಹಿಡಿದು ಅದನ್ನು ದೃಶ್ಯ ಬಣ್ಣಗಳಾಗಿ ಪರಿವರ್ತಿಸುತ್ತದೆ. ಈ ಅಧ್ಯಯನದಲ್ಲಿ ಶ್ರೀ ಗಣೇಶನ ಚಿತ್ರಕ್ಕೆ ವಿವಿಧ ಹೂವುಗಳನ್ನು ಅರ್ಪಿಸಿದ ನಂತರ ಸುತ್ತಮುತ್ತಲಿನ ವಾತಾವರಣದ ಶಕ್ತಿಯಲ್ಲಿ ಉಂಟಾದ ಬದಲಾವಣೆಗಳನ್ನು ಅಧ್ಯಯನ ಮಾಡಲಾಯಿತು.


ಮೊದಲನೆಯದಾಗಿ, ಶ್ರೀ ಗಣೇಶನ ಚಿತ್ರದ ಮುಂದೆ ಯಾವುದೇ ಹೂವನ್ನು ಇಡುವ ಮೊದಲು, ಕೊಠಡಿಯಲ್ಲಿ ಚಿತ್ರದ ಸುತ್ತಮುತ್ತಲಿನ ವಾತಾವರಣದ ಆರಂಭಿಕ (Baseline) ರೀಡಿಂಗ್ ತೆಗೆದುಕೊಳ್ಳಲಾಯಿತು. ಇದರ ನಂತರ, ಶ್ರೀ ಗಣೇಶನ ಚಿತ್ರಕ್ಕೆ ಮೊದಲು ಒಂದು ಕೆಂಪು ಗುಲಾಬಿ ಮತ್ತು ನಂತರ ಗುಲಾಬಿ ಬಣ್ಣದ ದಾಸವಾಳವನ್ನು ಅರ್ಪಿಸಲಾಯಿತು. ಈ ಎರಡೂ ಹೂವುಗಳಿಂದಾಗಿ ಆರಂಭಿಕ ರೀಡಿಂಗ್‌ಗೆ ಹೋಲಿಸಿದರೆ ಸುತ್ತಮುತ್ತಲಿನ ಸಕಾರಾತ್ಮಕ ಶಕ್ತಿಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿತು. ಆದಾಗ್ಯೂ, ಸಾಂಪ್ರದಾಯಿಕ ಕೆಂಪು ದಾಸವಾಳದ ಹೂವನ್ನು ಅರ್ಪಿಸಿದಾಗ, ವಾತಾವರಣದ ಸಕಾರಾತ್ಮಕ ಶಕ್ತಿಯಲ್ಲಿ ಗಮನಾರ್ಹ ಹೆಚ್ಚಳವಿರುವುದು ಸ್ಪಷ್ಟವಾಗಿ ಕಂಡುಬಂತು.


ತೀರ್ಮಾನ : ಇನ್ನುಳಿದ ಎರಡೂ ಹೂವುಗಳಿಗೆ ಹೋಲಿಸಿದರೆ ಕೆಂಪು ದಾಸವಾಳದಲ್ಲಿ ಗಣೇಶತತ್ತ್ವವನ್ನು ಆಕರ್ಷಿಸಿ ಅದನ್ನು ವಾತಾವರಣದಲ್ಲಿ ಪ್ರಕ್ಷೇಪಿಸುವ (ಹರಡುವ) ಸಾಮರ್ಥ್ಯವು ಅಧಿಕವಾಗಿರುತ್ತದೆ. ಆದ್ದರಿಂದ, ಶ್ರೀ ಗಣೇಶನ ಚಿತ್ರದ ಮೇಲೆ ಕೆಂಪು ದಾಸವಾಳವನ್ನು ಅರ್ಪಿಸುವುದರಿಂದ ವಾತಾವರಣದಲ್ಲಿ ಸಕಾರಾತ್ಮಕ ಸ್ಪಂದನಗಳಲ್ಲಿ (Vibrations) ಅತ್ಯಧಿಕ ಹೆಚ್ಚಳ ಕಂಡುಬಂದಿದೆ.


ಸಂಶೋಧನಾ ತಂಡದ ಪ್ರಕಾರ, ಈ ತೀರ್ಮಾನಗಳು ಸಸ್ಯಗಳ ನಿರ್ದಿಷ್ಟ ಘಟಕಗಳು ಯಾವುದೇ ನಿರ್ದಿಷ್ಟ ದೇವತೆಯ ಸ್ಪಂದನಗಳನ್ನು ಆಕರ್ಷಿಸಲು ಮತ್ತು ಪ್ರಕ್ಷೇಪಿಸಲು ಸಮರ್ಥವಾಗಿರುತ್ತವೆ ಎಂಬ ಆಧ್ಯಾತ್ಮಶಾಸ್ತ್ರದ ಮೂಲಭೂತ ತತ್ವವನ್ನು ದೃಢೀಕರಿಸುತ್ತವೆ. ಇದರ ಪ್ರಕಾರ, ಕೆಂಪು ದಾಸವಾಳವು ಒಂದು ನೈಸರ್ಗಿಕ 'ಆಂಟೆನಾ'ದಂತೆ ಕಾರ್ಯನಿರ್ವಹಿಸುತ್ತದೆ; ಇದು ಶ್ರೀ ಗಣೇಶತತ್ತ್ವವನ್ನು ಆಕರ್ಷಿಸಿ ಅದನ್ನು ಸುತ್ತಮುತ್ತಲಿನ ವಾತಾವರಣದಲ್ಲಿ ಪ್ರಸಾರ ಮಾಡಲು ವಿಶೇಷವಾಗಿ ಅನುಕೂಲಕರವಾಗಿದೆ.


ಆದ್ದರಿಂದ, ಮುಂದಿನ ಬಾರಿ ಶ್ರೀ ಗಣೇಶನಿಗೆ ಹೂವುಗಳನ್ನು ಅರ್ಪಿಸುವಾಗ, ಬೇರೆ ಯಾವುದೇ ಹೂವಿಗಿಂತ ಕೆಂಪು ದಾಸವಾಳದ ಹೂವನ್ನೇ ಅರ್ಪಿಸಿ!


'ಹಿಂದೂ ಧರ್ಮದ ಸಾಂಪ್ರದಾಯಿಕ ಪದ್ಧತಿಗಳ ಹಿಂದೆ ವ್ಯವಹಾರಿಕ ಮತ್ತು ಆಳವಾದ ವಿಜ್ಞಾನವಿದೆ' ಎಂದು ಸಂಶೋಧಕರು ಸ್ಪಷ್ಟಪಡಿಸುತ್ತಾರೆ. ಇದರ ಹಿಂದಿನ ಸೂಕ್ಷ್ಮ ಕಾರ್ಯಪ್ರಣಾಳಿಯನ್ನು ಅರ್ಥಮಾಡಿಕೊಳ್ಳುವ ಮೂಲಕ, ನಾವು ನಮ್ಮ ದೈನಂದಿನ ಪೂಜಾ-ವಿಧಿಗಳಿಂದ ಅತ್ಯಧಿಕ ಸಕಾರಾತ್ಮಕ ಸ್ಪಂದನಗಳನ್ನು ಪಡೆಯಬಹುದು.


-ಮಧುರಾ ಧನಂಜಯ ಕರ್ವೆ,

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top