ಮಂಗಳೂರು: ಕೆನರಾ ಕಾಲೇಜಿನ (ಸ್ವಾಯತ್ತ) ಕನ್ನಡ ವಿಭಾಗ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಜಂಟಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ‘ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ನೂರರ ನೆನಪು’ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಸಾಹಿತ್ಯವು ಮನುಷ್ಯನ ಬದುಕಿನ ಮೌಲ್ಯಗಳನ್ನು ಪ್ರತಿಬಿಂಬಿಸುವುದರ ಜೊತೆಗೆ, ಬದಲಾಗುತ್ತಿರುವ ಇಂದಿನ ಜೀವನಕ್ರಮವನ್ನು ಅರ್ಥೈಸಿಕೊಳ್ಳಲು ಅಗತ್ಯವಾದ ಮಾನವೀಯ ದೃಷ್ಟಿಕೋನವನ್ನು ನೀಡುತ್ತದೆ ಎಂದು ಕಾವೂರಿನ ಬಿಜಿಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಬ್ರಹ್ಮಣ್ಯ ಎನ್. ಕುಂದೂರು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಕೆನರಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರೇಮಲತಾ ವಿ. ಅವರು ಉದ್ಘಾಟಿಸಿ "ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಗಳ ಓದಿಗೆ ಸೀಮಿತವಾಗದೆ, ಉತ್ತಮ ಸಾಹಿತ್ಯ ಕೃತಿಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಓದು ಜ್ಞಾನವನ್ನು ವಿಸ್ತರಿಸುವುದರ ಜೊತೆಗೆ ಚಿಂತನಾ ಶಕ್ತಿ, ಭಾಷಾ ಸಾಮರ್ಥ್ಯ ಮತ್ತು ವ್ಯಕ್ತಿತ್ವವನ್ನು ರೂಪಿಸುತ್ತದೆ. ವಿದ್ಯಾರ್ಥಿಗಳು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ಕನ್ನಡ ಸಾಹಿತ್ಯದ ಮಹತ್ವವನ್ನು ಅರಿಯಲು ಸೂಕ್ತ ವೇದಿಕೆಯಾಗಿದೆ" ಎಂದು ತಿಳಿಸಿದರು.
ಮುಖ್ಯ ಉಪನ್ಯಾಸ ನೀಡಿದ ಡಾ. ಸುಬ್ರಹ್ಮಣ್ಯ ಎನ್. ಕುಂದೂರು ಅವರು, G.S.S. ಅವರ ಸಾಹಿತ್ಯದ ವಿವಿಧ ಒಳನೋಟಗಳನ್ನು ವಿಶ್ಲೇಷಿಸಿದರು. "ಶಿವರುದ್ರಪ್ಪನವರ ಸಾಹಿತ್ಯದಲ್ಲಿ ಮಾನವೀಯತೆ, ಸಾಮಾಜಿಕ ಕಾಳಜಿ, ಬದುಕಿನ ಸೂಕ್ಷ್ಮ ಅನುಭವಗಳು ಹಾಗೂ ಮಾನವ ಸಂಬಂಧಗಳ ಮೌಲ್ಯಗಳು ಪ್ರಮುಖವಾಗಿ ಮೂಡಿಬಂದಿವೆ. ಇಂದಿನ ವೇಗದ ಬದುಕು, ತಂತ್ರಜ್ಞಾನದ ಪ್ರಭಾವ ಹಾಗೂ ಬದಲಾಗುತ್ತಿರುವ ಜೀವನಶೈಲಿಯ ನಡುವೆ ಮನುಷ್ಯ ತನ್ನೊಳಗಿನ ಕರುಣೆ, ಪ್ರೀತಿ, ಸಹಾನುಭೂತಿ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಕಳೆದುಕೊಳ್ಳಬಾರದು. ಸಾಮಾನ್ಯ ಮನುಷ್ಯನ ನೋವು-ನಲಿವು, ಪ್ರಕೃತಿ ಮತ್ತು ಸಮಾಜದೊಂದಿಗಿನ ಬಾಂಧವ್ಯವನ್ನು ಅತ್ಯಂತ ಸಹಜವಾಗಿ ಕಟ್ಟಿಕೊಟ್ಟಿರುವ ಅವರ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದೆ" ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಅವರು ಮಾತನಾಡಿ, "ಕನ್ನಡ ಸಾಹಿತ್ಯದ ಬೆಳವಣಿಗೆ ಹಾಗೂ ಸಾಹಿತ್ಯಿಕ ಚಟುವಟಿಕೆಗಳನ್ನು ವಿಸ್ತರಿಸುವಲ್ಲಿ ಸಾಹಿತ್ಯ ಪರಿಷತ್ತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದೆ. ಸಾಹಿತ್ಯಿಕ ಚಟುವಟಿಕೆಗಳು ಹೆಚ್ಚು ಜನರನ್ನು ತಲುಪಬೇಕು ಮತ್ತು ಯುವಜನತೆಯಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸಬೇಕು. ರಾಷ್ಟ್ರಕವಿ ಜಿ.ಎಸ್.ಎಸ್. ಅವರ ಸಾಹಿತ್ಯ ಮತ್ತು ಜೀವನದೃಷ್ಟಿಯನ್ನು ಹೊಸ ತಲೆಮಾರಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ 'ನೂರರ ನೆನಪು' ಅರ್ಥಪೂರ್ಣ ಶ್ರಮವಾಗಿದೆ" ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ ವಾಣಿ ಯು.ಎಸ್., ಸಹಾಯಕ ಪ್ರಾಧ್ಯಾಪಕ ಪ್ರದೀಪ್ ಬಿ., ಸಾಹಿತಿ ಶ್ರೀನಿವಾಸ ಜೋಕಟ್ಟೆ ಹಾಗೂ ಸ್ಪಂದನ ನಾಗರಾಜ್ ಉಪಸ್ಥಿತರಿದ್ದರು.
ವಾಣಿ ಯು.ಎಸ್. ಸ್ವಾಗತಿಸಿದರು. ಕುಮಾರಿ ಶ್ರಾವ್ಯ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ್ ಬಿ. ವಂದನಾರ್ಪಣೆ ಮಾಡಿದರು.
