ರಂಗಭೂಮಿಯ ವೈವಿಧ್ಯತೆ ವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆಗೆ ದಾರಿ : ಡಾ. ಮಾಧವ ಭಟ್ ಎಚ್.
ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಇಂಗ್ಲಿಷ್ ಪದವಿ ಹಾಗೂ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗಗಳ ವತಿಯಿಂದ ‘ಥಿಯೇಟರ್ ಇನ್ ಡೈಲಾಗ್: ಈಸ್ಟರ್ನ್ ಆ್ಯಂಡ್ ವೆಸ್ಟರ್ನ್ ಟ್ರಡಿಷನ್ಸ್, ಎನ್‌ಕೌಂಟರ್ಸ್ ಆ್ಯಂಡ್ ಎಕ್ಸ್‌ಪೆರಿಮೆಂಟೇಷನ್ಸ್’ ಎಂಬ ವಿಷಯದ ಕುರಿತು ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭ ನಡೆಯಿತು.
ಕಾರ್ಯಕ್ರಮವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಮಾಧವ ಭಟ್ ಎಚ್. ಚಾಲನೆ ನೀಡಿ, ‘ಥಿಯೇಟರ್ ಇನ್ ಡೈಲಾಗ್’ ಎಂಬ ಪರಿಕಲ್ಪನೆಯು ಸದಾ ಹೊಸತನ ಹಾಗೂ ಕುತೂಹಲವನ್ನು ಮೂಡಿಸುವುದರ ಜೊತೆಗೆ ರಂಗಭೂಮಿಯಲ್ಲಿನ ವಿವಿಧ ಚಲನಶೀಲ ಪ್ರಯೋಗಗಳು ಮತ್ತು ಸೃಜನಾತ್ಮಕ ಅಭ್ಯಾಸಗಳನ್ನು ಅನ್ವೇಷಿಸಲು ಅವಕಾಶ ನೀಡುತ್ತದೆ. ಇಂತಹ ರಂಗಭೂಮಿ ಸಂವಾದಗಳು ವಿಭಿನ್ನ ಸಂಸ್ಕೃತಿಗಳ ನಡುವಿನ ಅರಿವು ಮತ್ತು ಸಾಂಸ್ಕೃತಿಕ ಅನುಭವವನ್ನು ವಿಸ್ತರಿಸುವುದರೊಂದಿಗೆ, ಸ್ಥಳೀಯ ಹಾಗೂ ಸ್ವದೇಶಿ ರಂಗಭೂಮಿ ಪರಂಪರೆಗಳನ್ನು ಪರಿಚಯಿಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದರು.
ರಂಗಭೂಮಿಯ ಸಾಧ್ಯತೆಗಳು ಅತ್ಯಂತ ವಿಶಾಲವಾಗಿದ್ದು, ಅದರ ವೇದಿಕೆ ಕೇವಲ ಪ್ರದರ್ಶನಕ್ಕೆ ಸೀಮಿತವಾಗದೆ ಹೊಸ ಚಿಂತನೆ, ಪ್ರಯೋಗ ಹಾಗೂ ಸೃಜನಶೀಲತೆಗೆ ದೊಡ್ಡ ಅವಕಾಶವನ್ನು ಒದಗಿಸುತ್ತದೆ. ವಿವಿಧ ರಂಗಭೂಮಿ ಪರಂಪರೆಗಳ ಪರಿಚಯವು ವಿದ್ಯಾರ್ಥಿಗಳ ಜ್ಞಾನ, ಕಲ್ಪನಾಶಕ್ತಿ ಮತ್ತು ಸಾಂಸ್ಕೃತಿಕ ಅರಿವನ್ನು ವಿಸ್ತರಿಸುವುದರ ಜೊತೆಗೆ, ಭವಿಷ್ಯದಲ್ಲಿ ಹೊಸ ಸಾಧ್ಯತೆಗಳನ್ನು ಅನ್ವೇಷಿಸಲು ಪ್ರೇರಣೆ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ ಮಾತನಾಡಿ, ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯವು ಇಂದಿನ ಜಾಗತಿಕ ಸಂದರ್ಭದಲ್ಲಿ ಅತ್ಯಂತ ಮಹತ್ವವನ್ನು ಹೊಂದಿದ್ದು, ವಿಶ್ವದ ವಿವಿಧ ಭಾಗಗಳ ಜನರನ್ನು ಹಾಗೂ ಸಂಸ್ಕೃತಿಗಳನ್ನು ಸಂಪರ್ಕಿಸುವ ಪ್ರಮುಖ ಮಾಧ್ಯಮವಾಗಿದೆ. ಇಂಗ್ಲಿಷ್ ಭಾಷೆಯ ಜ್ಞಾನವು ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಸಂವಹನ ನಡೆಸಲು ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಅವಕಾಶಗಳನ್ನು ಅನ್ವೇಷಿಸಲು ಸಹಕಾರಿಯಾಗುತ್ತದೆ.
ಭಾಷಾ ಜ್ಞಾನವು ಕೇವಲ ಶೈಕ್ಷಣಿಕ ಅರ್ಹತೆಯಲ್ಲದೆ, ವೃತ್ತಿಜೀವನದ ಹಲವು ಹೊಸ ಸಾಧ್ಯತೆಗಳಿಗೆ ದಾರಿ ಮಾಡಿಕೊಡುವ ಪ್ರಮುಖ ಕೌಶಲ್ಯವಾಗಿದೆ.ಈ ರಾಷ್ಟ್ರೀಯ ವಿಚಾರ ಸಂಕಿರಣವು ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಯ ಜೊತೆಗೆ ಸುತ್ತಮುತ್ತಲಿನ ಕಾಲೇಜುಗಳ ವಿದ್ಯಾರ್ಥಿಗಳಿಗೂ ಅತ್ಯಂತ ಉಪಯುಕ್ತವಾಗಿದೆ ಎಂದರು. ಕಾರ್ಯಕ್ರಮದ ಸಂಯೋಜಕರಾಗದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರು ಹಾಗೂ ಐಕ್ಯೂಎಸಿ ಸಂಯೋಜಕರಾದ ಗಜಾನನ ಆರ್. ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಇಎಫ್‌ಎಲ್ ವಿಶ್ವವಿದ್ಯಾಲಯ, ಹೈದರಾಬಾದ್‌ನ ಅನುವಾದ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ತಾರಕೇಶ್ವರ ವಿ. ಬಿ. ಹಾಗೂ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಮಹೇಂದ್ರ ಎಂ., ಇಂಗ್ಲಿಷ್ ವಿಭಾಗದ ಮುಖ್ಯಸ್ಥರು ಹಾಗೂ ಐಕ್ಯೂಎಸಿ ಸಂಯೋಜಕರಾದ ಗಜಾನನ ಆರ್. ಭಟ್, ಇಂಗ್ಲಿಷ್ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆಷಡಾ. ಮಂಜುಶ್ರೀ ಆರ್. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಕುಲಸಚಿವ ಪ್ರೊ ಶ್ರೀಧರ್ ಎನ್ ಭಟ್ಟ, ಪರೀಕ್ಷಾಂಗ ಕುಲಸಚಿವ ಪ್ರೊ ಗಣೇಶ್ ನಾಯಕ್, ಉಪಪ್ರಾಂಶುಪಾಲೆ ಕೆ ಪಿ ನಂದಕುಮಾರಿ, ಪಿಜಿ ವಿಭಾಗದ ಡೀನ್ ಡಾ. ಸೌಮ್ಯ ಬಿ ಪಿ ಸೇರಿದಂತೆ ಪ್ರಮುಖರು ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.
"ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯ ಹಾಗೂ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಅನುಕೂಲವಾಗುವಂತಹ ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ಮತ್ತು ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳನ್ನು ಎಸ್‌ಡಿಎಂ ಕಾಲೇಜಿನಲ್ಲಿ ನಿರಂತರವಾಗಿ ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಜ್ಞಾನ ಮತ್ತು ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು"
- ಪ್ರೊ. ವಿಶ್ವನಾಥ್ ಪಿ
ಪ್ರಾಂಶುಪಾಲರು, ಎಸ್.ಡಿ.ಎಂ ಕಾಲೇಜು ಉಜಿರೆ
