ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ.ಯ ಮಾದರಿ ಹೆಜ್ಜೆ
ಬೆಂಗಳೂರು: ಜಯನಗರದ ಸಂಜಯ್ ಗಾಂಧಿ ಆಸ್ಪತ್ರೆಯ ಆವರಣದಲ್ಲಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು (RGUHS) ಸ್ವಚ್ಛ ಭಾರತ ಅಭಿಯಾನದಡಿ ತನ್ನ ಮುಂದಿರುವ ಪಾದಚಾರಿ ಮಾರ್ಗವನ್ನು ಅತ್ಯಂತ ಸುಂದರವಾಗಿ ನವೀಕರಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಆಗಸ್ಟ್ 15 ಸ್ವಾತಂತ್ರ್ಯೋತ್ಸವದ ದಿನದಂದು 'ಕ್ಯಾಂಪಸ್ ಟು ಕಮ್ಯೂನಿಟಿ' ಪ್ರಕಲ್ಪದ ಅಂಗವಾಗಿ ಆರ್.ವಿ. ಎಂಜನಿಯರಿಂಗ್ ಕಾಲೇಜಿನ ಸ್ವಯಂಸೇವಕ ವಿದ್ಯಾರ್ಥಿಗಳು ಈ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದ್ದರು. ನಗರ ಪಾಲಿಕೆಯ ಸಹಕಾರದಿಂದ ಇಲ್ಲಿನ ಬಸ್ ತಂಗುದಾಣವನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಇದರಿಂದ ಈ ಹಿಂದೆ ಆಸ್ಪತ್ರೆಗೆ ಆಗಮಿಸುವ ರೋಗಿಗಳು ಹಾಗೂ ಅವರ ಸಂಬಂಧಿಗಳಿಗೆ ಎದುರಾಗುತ್ತಿದ್ದ ಕಿರುಕುಳ ಹಾಗೂ ತೊಂದರೆಗಳು ಸಂಪೂರ್ಣವಾಗಿ ತಪ್ಪಿದಂತಾಗಿದೆ.
ಈ ಪಾದಚಾರಿ ಮಾರ್ಗದಲ್ಲಿ ಈಗ ಕೇವಲ ಸ್ವಚ್ಛತೆ ಮಾತ್ರವಲ್ಲದೆ, ಆಕರ್ಷಕ ಬಣ್ಣಗಳು ಮತ್ತು ಅರ್ಥಪೂರ್ಣ ಗೋಡೆ ಬರಹಗಳನ್ನು ಅಳವಡಿಸಲಾಗಿದೆ. ಇದು ನೋಡುಗರ ಮನ ಸೆಳೆಯುತ್ತಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ವಿಶೇಷವೆಂದರೆ, ಈ ಸುಂದರ ವಾತಾವರಣವನ್ನು ಕಾಪಾಡಿಕೊಳ್ಳಲು ವಿಶ್ವವಿದ್ಯಾಲಯದ ಸಿಬ್ಬಂದಿ ಪ್ರತಿದಿನವೂ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುತ್ತಿದ್ದಾರೆ.
"ನಾವು ಬಯಸುವ ಬದಲಾವಣೆ ನಮ್ಮಿಂದಲೇ ಪ್ರಾರಂಭವಾಗಬೇಕು" ಎಂಬ ಮಾತಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಈ ಉಪಕ್ರಮವು ಅಕ್ಷರಶಃ ಸಾಕ್ಷಿಯಾಗಿದೆ.
- ಡಾ. ಹೆಚ್. ಎಸ್.ಸುರೇಶ್.
