* ಪುಸ್ತಕ ಪರಿಚಯ
* ಕೃತಿ ಸಂಸ್ಕೃತಿ
* ಲೇಖನಗಳ ಸಂಕಲನ
* ರಘು ಇಡ್ಕಿದು
ತುಳು ಮತ್ತು ಕನ್ನಡ ದ ಸಾಹಿತಿ ಮತ್ತು ವಿಮರ್ಶಕ ರಘು ಇಡ್ಕಿದು ಅವರ 33 ನೇ ಪುಸ್ತಕ 'ಕೃತಿ ಸಂಸ್ಕೃತಿ ' ವ್ಯಕ್ತಿ, ಕೃತಿ, ಸಂಸ್ಕೃತಿಗೆ ಪಟ್ಟ ಕೃತಿ. ವಿವಿಧ ಸಂದರ್ಭಗಳಲ್ಲಿ ಮಾಡಿದ ಭಾಷಣ ಗಳು ಮತ್ತು ಲೇಖನಗಳು ಈ ಕೃತಿಯಲ್ಲಿವೆ. ಕೃತಿಗಳಿಗೆ, ಸಂಸ್ಕೃತಿ ಗೆ ಮತ್ತು ಸಂಸ್ಕೃತಿ ಯ ವಾಹಕರಾಗಿ ತಮ್ಮನ್ನು ತೊಡಗಿಸಿ ಕೊಂಡ ವ್ಯಕ್ತಿತ್ವ ಗಳಿಗೆ ಸಂಬಂಧ ಪಟ್ಟ ಬರಹ ಗಳು ಇರುವುದರಿಂದ ಇದು 'ಕೃತಿ ಸಂಸ್ಕೃತಿ ' ಎಂದು ಲೇಖಕರು ಮೊದಲ ಮಾತಿನಲ್ಲಿ ಹೇಳಿ ಕೊಂಡಿದ್ದಾರೆ.
ತಾಯಿ ಬೇರು,ತಂದೆ ನೀರು,ಬದುಕು ಹಸಿರು.. ಈ ಕೃತಿ ಯ ಮುಖ್ಯ ಲೇಖನ. ಲೇಖಕರ ಬಾಲ್ಯ ಜೀವನ, ಬದುಕು ಕಟ್ಟಿಕೊಡಲು ತಂದೆ ತಾಯಿ ಪಟ್ಟ ಶ್ರಮವನ್ನು ಲೇಖಕರು ಕಟ್ಟಿಕೊಡುತ್ತಾರೆ. ಅಸಮಾನತೆಯ ಸಮಾಜ ವ್ಯವಸ್ಥೆಯಲ್ಲಿ ತಳ ಸಮುದಾಯದ ನೋವುಗಳ ಅದನ್ನು ಮೆಟ್ಟಿ ನಿಲ್ಲುವ ಛಲ, ಮಕ್ಕಳ ಬದುಕು ಸುಖಕರವಾಗಿರಲಿ ಎಂಬ ಹಿರಿಯರ ತ್ಯಾಗ ಚಿತ್ರಿತವಾಗಿದೆ. ತಂದೆ ಹೇಳಿದ ಮಾತು 'ಹೇಳುವವರು ಹೇಳಲಿ, ಮಾಡುವ ನಾವು ನಮ್ಮ ಕೆಲಸ ಮಾಡುತ್ತಲೇ ಇರೋಣ' ಎಂಬ ಮಾತನ್ನು ಪಾಲಿಸುತ್ತಲೇ ರಘು ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ.
ಭೂತರಾಧನೆಗೆ ಸಂಬಧಿಸಿದಂತೆ 'ತುಳುವರ ಭೂತಾರಾಧನೆ' ಮತ್ತು 'ಇಡ್ಕಿದು- ಪಿಲಿ ಚಾಮುಂಡಿ ಶಿರಾಡಿ, ಧೂಮಾವತಿ ಭೂತ ಗಳು -ಒಂದು ಪರಿಚಯ ' ಎಂಬ ಲೇಖನಗಳಿವೆ. ಭೂತಾರಾಧನೆಯನ್ನು ವಿವಿಧ ಮಗ್ಗುಲುಗಳಲ್ಲಿ ಕಾಣುವ ಲೇಖಕರು ಅದರ ಹಿಂದಿನ ಕರಾಳವಾದ ಇನ್ನೊಂದು ಮುಖವನ್ನು ತೋರಿಸಿ ಅದರ ನಿವಾರಣೆಯಾದಾಗ ಭೂತಾರಾಧಾನೆ ಹೊಸ ತಿರುವು ಪಡೆಯಲು ಸಾಧ್ಯ ಎಂಬ ಆಶಯ ವ್ಯಕ್ತಪಡಿಸುತ್ತಾರೆ.
ಹಿರಿಯ ಸಂಶೋಧಕ ಎ. ವಿ. ನಾವಡ, ಕವಿ ಪೇಜಾವರ ಸದಾಶಿವ ರಾವ್, ಕರ್ಪೂರ ಶ್ರೀನಿವಾಸ ರಾವ್, ಕೆನರಾ ಶಿಕ್ಷಣ ಸಂಸ್ಥೆ ಮತ್ತು ಕೆನರಾ ಬ್ಯಾಂಕ್ ಸಂಸ್ಥಾಪಕ ಅಮ್ಮೆಂಬಳ ಸುಬ್ಬ ರಾವ್ ಪೈ, ಹಿರಿಯ ರಂಗಭೂಮಿ ಕಲಾವಿದೆ ಜಯಶೀಲ ಮರೋಳಿ ಅವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸೊಗಸಾಗಿ ಚಿತ್ರಿಸಿದ್ದಾರೆ.
ರಘು ಇಡ್ಕಿದು ಅವರು ವಿವಿಧ ಹಿರಿಯ ಮತ್ತು ಕಿರಿಯ ಸಾಹಿತಿಗಳ ಪುಸ್ತಕಗಳಿಗೆ ಮುನ್ನುಡಿ ಮತ್ತು ಬೆನ್ನುಡಿ ಬರೆದು ಅವರ ಸಾಹಿತ್ಯ ಸೇವೆಯನ್ನು ಪ್ರೋತ್ಸಾಹಕ ನುಡಿಗಳಿಂದ ಬೆಂಬಲಿಸುತ್ತ ಬಂದಿದ್ದಾರೆ.ಸುಮಾರು ಏಳು ಕೃತಿಗಳಿಗೆ ಬರೆದ ಮುನ್ನುಡಿ ಗಳು ಇಲ್ಲಿದ್ದು ಕೃತಿ ಪರಿಚಯದೊಂದಿಗೆ ಸಾಗ ಬೇಕಾದ ಹಾದಿ ಯನ್ನು ತೋರಿಸಿ ಕೊಡುತ್ತದೆ.
ಕನಕದಾಸರ 'ಮೋಹನ ತರಂಗಿಣಿ' ಕಾವ್ಯದ ಕುರಿತು ಬರೆದ ವಿಮರ್ಶೆ ಕಾವ್ಯ ದ ವಿಶೇಷತೆಯನ್ನು ಹೇಳುತ್ತದೆ. ನಮ್ಮ ಬದುಕಿನಲ್ಲಿ ಮೃದು ಮಧುರ ಭಾವ ಗಳ ಅರಳಿಸಿ ತರಂಗಗಳನ್ನು ಎಬ್ಬಿಸುವ ಕಾವ್ಯ ಎಂದು ಅಭಿಪ್ರಾಯ ಪಡುತ್ತಾರೆ. 'ಕುದ್ಮುಲ್ ರಂಗ ರಾಯರನ್ನು ನೆನೆದು ' ಲೇಖನದಲ್ಲಿ ರಂಗ ರಾಯರ ಸೇವೆಯನ್ನು ಗುರುತಿಸುತ್ತಾ ಕನ್ನಡ ಮತ್ತು ತುಳು ಭಾಷೆ ಗಳಲ್ಲಿ ಅವರ ಕುರಿತು ಬಂದ ಕೃತಿ ಗಳನ್ನು ಸಮೀಕ್ಷೆ ಮಾಡುತ್ತಾರೆ.
ಬಂಟ್ವಾಳ ತಾಲೂಕಿನ ಚುಟುಕು ಸಾಹಿತ್ಯದ ಲೇಖನದಲ್ಲಿ ತಾಲೂಕಿನ ಚುಟುಕು ಸಾಹಿತ್ಯ ಕವಿಗಳ ಕೃತಿಗಳು ಮತ್ತು ಅವುಗಳ ಸೊಗಸನ್ನು ವಿವರಿಸುತ್ತಾರೆ. ಪುತ್ತೂರು ಸಾಹಿತ್ಯ ಸಮ್ಮೇಳನದ ಕವಿ ಗೋಷ್ಠಿಯಲ್ಲಿ ಮಾಡಿದ ಭಾಷಣ ಇಲ್ಲಿ ಇದ್ದು 'ಹೊಸದಾಗಿ ಬರೆಯುವವರು ಹೊಸ ಹೊಸ ನೆಲೆಗಳ ಶೋಧಮಾಡಿಕೊಂಡು, ಹೊಸ ವಿನ್ಯಾಸಗಳಲ್ಲಿ ಕಾಲದ ಜೊತೆ ಸ್ಪಂದಿಸುತ್ತ ಕವಿತೆಯನ್ನು ರೂಪಿಸುವ ಕಡೆಗೆ ತುಡಿಯ ಬೇಕಿದೆ ' ಎನ್ನುತ್ತಾರೆ.
ವ್ಯೆವಿಧ್ಯಮಯ ಲೇಖನಗಳು ಈ ಸಂಕಲನದಲ್ಲಿ ಇದ್ದು ಪ್ರತಿಯೊಂದು ಆತ್ಮೀಯ ನೆಲೆಯಲ್ಲಿ ವಿಚಾರಗಳನ್ನು ವ್ಯಕ್ತಪಡಿಸುತ್ತಿವೆ. ಉದಾತ್ತ ಹಿರಿಯರ ಆದರ್ಶಗಳನ್ನು ಪರಿಪಾಲಿಸ ಬೇಕೆನ್ನುವ ಆಶಯವಿದೆ. ಸಹೃದಯಿ ವಿಮರ್ಶೆಯ ಒಳನೋಟಗಳಿವೆ. ಓದು ಮತ್ತು ಬರವಣಿಗೆ ನಿರಂತರವಾಗಿ ನಡೆಯಬೇಕೆನ್ನುವ ಇಚ್ಛೆ ಪ್ರಕಟ ಗೊಂಡಿದೆ. ಕನ್ನಡ ಮತ್ತು ತುಳು ಸಾಹಿತ್ಯ ಮತ್ತು ಸಂಸ್ಕೃತಿ ವಿಚಾರಗಳನ್ನು ಕೃತಿಯ ರೂಪದಲ್ಲಿ ತಂದಿರುವ ಸಾಹಿತಿ ರಘು ಇಡ್ಕಿದು ಅವರ ಕಾರ್ಯ ಅನನ್ಯವಾದುದು.
- ಕೃಷ್ಣ ಮೂರ್ತಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
