ಉಡುಪಿ: 'ರಾಗಧನ'ದ 53ನೇ 'ರಾಗರತ್ನ ಮಾಲಿಕೆ' ಕಚೇರಿ– ಕಲಾ ರಸಿಕರಿಗೆ ದಿವ್ಯ ಅನುಭೂತಿ

Shreya Hegde
0



ಉಡುಪಿ,: ನಗರದ ಪ್ರಸಿದ್ಧ ಸಾಂಸ್ಕೃತಿಕ ಸಂಸ್ಥೆ 'ರಾಗಧನ' ಆಯೋಜಿಸಿದ್ದ 53ನೇ 'ರಾಗರತ್ನ ಮಾಲಿಕೆ' ಕಾರ್ಯಕ್ರಮವು ಇತ್ತೀಚೆಗೆ ಹೆಬ್ರಿ-ಗಿಲ್ಲಾಳಿಯ 'ಶ್ರೀ ವಿಶ್ವೇಶಕೃಷ್ಣ' ಗೋಶಾಲೆಯ ಪ್ರಕೃತಿ ಮಡಿಲಿನಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು. ವಿದುಷಿ ರಂಜನಿ ಹೆಬ್ಬಾರ್ ಅವರ ಸಂಸ್ಮರಣಾರ್ಥವಾಗಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ವಿಶ್ವೇಶಕೃಷ್ಣ ಗೋಶಾಲೆ ಟ್ರಸ್ಟ್ ಹಾಗೂ ಹೆಬ್ರಿಯ ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್‌ನ ಸಹಯೋಗದೊಂದಿಗೆ ಜರುಗಿತು.


ಗೋವುಗಳು ಮತ್ತು ಕರುಗಳ ಸಾನ್ನಿಧ್ಯದಲ್ಲಿ ಸುವ್ಯವಸ್ಥಿತ ವೇದಿಕೆಯಲ್ಲಿ ಮೂಡಿಬಂದ ಈ ನಾದೋಪಾಸನೆಯನ್ನು ಕಲಾ ರಸಿಕರಷ್ಟೇ ಅಲ್ಲದೆ ಗೋಸಂಕುಲವೂ ಶಾಂತವಾಗಿ ಆಲಿಸುತ್ತಿದ್ದ ದೃಶ್ಯ ಸಭಿಕರಲ್ಲಿ ಧನ್ಯತಾ ಭಾವವನ್ನು ಮೂಡಿಸಿತು.


ನಾಟ್ಯಮಯ ಕೊಳಲು ವಾದನ:

ಅಂದಿನ ಪ್ರಧಾನ ಕಚೇರಿಯಲ್ಲಿ ಶಿವಮೊಗ್ಗದ ಯುವ ವಿದ್ವಾನ್ ಶ್ರೀ ಅಭಿರಾಮ ಭಾಗವತ್ ಕೆ. ಅವರ ಕೊಳಲು ವಾದನ ಸಭಿಕರನ್ನು ಮಂತ್ರಮುಗ್ಧಗೊಳಿಸಿತು. ಹಸನ್ಮುಖಿ ಕಲಾವಿದರ ಶುದ್ಧ ರಾಗ ಹಾಗೂ ನಿರಂತರ ಶ್ರುತಿ ಲೀನತೆ ಕಚೇರಿಯ ಪ್ರಮುಖ ಆಕರ್ಷಣೆಯಾಗಿತ್ತು. ವಲಜಿ ರಾಗದ ವರ್ಣದೊಂದಿಗೆ ಆರಂಭವಾದ ಕಚೇರಿಯಲ್ಲಿ, ಸರಸ್ವತಿ ರಾಗದ 'ಸರಸ್ವತಿ ನಮೋಸ್ತುತೆ', ರವಿಚಂದ್ರಿಕ ರಾಗದ 'ನೀರವದಧಿ ಸುಖದಾ' ಹಾಗೂ ಅಭೇರಿ ರಾಗದ 'ನಗುಮೋಮು' ಕೃತಿಗಳ ಗತ್ತಿನ ನಿರೂಪಣೆ ರಸಿಕರಿಗೆ ಮುದ ನೀಡಿತು. 'ವಾತಾಪಿ ಗಣಪತಿಂ' (ಹಂಸಧ್ವನಿ) ಚೈತನ್ಯಪೂರ್ಣವಾಗಿ ಮೂಡಿಬಂತು.


ಪ್ರಧಾನ ರಾಗವಾಗಿ 'ಮೋಹನ' ರಾಗದಲ್ಲಿ 'ರಾಮ ನಿನ್ನು ನಮ್ಮಿನ' ಕೃತಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಹಂತ ಹಂತವಾಗಿ ಅರಳಿದ ರಾಗ ವಿಸ್ತಾರ, ಸೂಕ್ತ ಜಾಗಗಳಲ್ಲಿ ನೀಡಿದ ಬಿರ್ಕಾಗಳು ಓರ್ವ ಅನುಭವಿ ಕಲಾವಿದನ ಗಾಂಭೀರ್ಯವನ್ನು ಬಿಂಬಿಸಿದವು. ಕ್ಲಿಷ್ಟವಾದ ನಡೆ ಹಾಗೂ ಗತಿ ಭೇದಗಳಿಂದ ಅಲಂಕೃತವಾಗಿದ್ದ ಕಲ್ಪನಾಸ್ವರಗಳಿಗೆ ಶ್ರೋತೃಗಳು ತಲೆದೂಗಿದರು. ಕಲಾವಿದರ ದೃಷ್ಟಿ ದೋಷವು ಅವರ ಉತ್ಸಾಹ, ಲಯ ಶುದ್ಧತೆ ಹಾಗೂ ರಾಗ ಮಾಧುರ್ಯಕ್ಕೆ ಎಲ್ಲೂ ತೊಡಕಾಗದಿರುವುದು ಅತ್ಯಂತ ಶ್ಲಾಘನೀಯವಾಗಿತ್ತು.


ಇವರಿಗೆ ವಯಲಿನ್‌ನಲ್ಲಿ ಕು. ಧನಶ್ರೀ ಶಬರಾಯ ಹಾಗೂ ಮೃದಂಗದಲ್ಲಿ ಶ್ರೀ ಸೂರಳಿ ಗಣೇಶ ಮೂರ್ತಿ ಉತ್ತಮ ಸಾಥ್ ನೀಡಿ ಕಚೇರಿಯ ಮೆರುಗನ್ನು ಹೆಚ್ಚಿಸಿದರು. ಉತ್ಕೃಷ್ಟ ತನಿ ಆವರ್ತನದ ನಂತರ 'ಗೋವಿಂದ ನಿನ್ನ' (ಜನಸಮ್ಮೋದಿನಿ), 'ಭಾವಯಾಮಿ' (ಯಮುನಾ ಕಲ್ಯಾಣಿ) ಹಾಗೂ ರಾಗೇಶ್ವರಿ ರಾಗದ ತಿಲ್ಲಾನದೊಂದಿಗೆ ಕಚೇರಿ ಮಂಗಲ ಹಾಡಿತು.


ಪ್ರತಿಭಾವಂತ ಕಿಶೋರ ಕಲಾವಿದನ ವಯಲಿನ್ ವಾದನ:

ಉದ್ಘಾಟನೆಗೂ ಮುನ್ನ ನಡೆದ ಪೂರ್ವಾಂಗ ಕಚೇರಿಯಲ್ಲಿ ಮಾ. ಶ್ರೀರಾಗ್ ಪಿ. ರಾವ್ ಅವರ ವಯಲಿನ್ ವಾದನ ಗಮನ ಸೆಳೆಯಿತು. ನಿಖರವಾದ ಸ್ವರಸ್ಥಾನ ಹಾಗೂ ಶ್ರೇಷ್ಠ ಬಿಲ್ಲುಗಾರಿಕೆಯಿಂದ ಮಂದಾರಿ ವರ್ಣದೊಂದಿಗೆ ಕಚೇರಿ ಆರಂಭಿಸಿದ ಇವರು, ನಳಿನಕಾಂತಿ ('ಮನವಿಯಾಲಕಿಂಚರಾ'), ಪೂರ್ವಿಕಲ್ಯಾಣಿ ('ಜ್ಞಾನ ಮೊಸಗರಾದ') ಹಾಗೂ ಶಂಕರಾಭರಣ ('ಸ್ವರರಾಗಸುಧಾ') ರಾಗಗಳನ್ನು ಮನೋಜ್ಞವಾಗಿ ವಿಸ್ತರಿಸಿ ಕಲ್ಪನಾಸ್ವರಗಳನ್ನು ನುಡಿಸಿದರು. ಇವರಿಗೆ ಮೃದಂಗದಲ್ಲಿ ಶ್ರೀ ಶುಭಾಂಗ್ ಪಿ. ಎಸ್ ಹದವರಿತು ಸಹಕರಿಸಿದರು. ರೀತಿಗೌಳ ರಾಗದ ಕಿರು ಪ್ರಸ್ತುತಿಯೊಂದಿಗೆ ಈ ಉದಯೋನ್ಮುಖ ಪ್ರತಿಭೆಯ ಕಚೇರಿ ಸಂಪನ್ನಗೊಂಡಿತು.

– ಸರೋಜಾ ಆರ್. ಆಚಾರ್ಯ, ಉಡುಪಿ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top