ಗುರುಕುಲ, ಗೋಶಾಲೆಗಳ ಅವಶ್ಯ ಪೋಷಣೆ: ಸಂತ ಸಂಗಮ ಆಗ್ರಹ
ನವದೆಹಲಿ: ಸಂಸ್ಕೃತ ಭಾರತೀಯ ಸಂಸ್ಕೃತಿಯ ಜೀವಾಳ; ವೇದ ಸಂಸ್ಕೃತವನ್ನು ಬಹಳ ಪ್ರಯಾಸದಿಂದ ಬೋಧಿಸಿಕೊಂಡು ಬರುತ್ತಿರುವ ಗುರುಕುಲಗಳಿಗೆ ಅಗತ್ಯ ಆರ್ಥಿಕ ಮತ್ತು ಇತರೆ ಸೌಕರ್ಯಗಳನ್ನು ಒದಗಿಸುವುದು ಮತ್ತು ಗೋರಕ್ಷಣೆಯ ಕಾರ್ಯವನ್ನು ಬಹಳ ಶ್ರಮಪೂರ್ವಕ ನಿರ್ವಹಿಸುತ್ತಿರುವ ಗೋಶಾಲೆಗಳ ಪೋಷಣೆ ಸರ್ಕಾರದ ಆದ್ಯ ಕರ್ತವ್ಯವಾಗಬೇಕು ಎಂದು ಸಂತ ಸಂಗಮ ದೆಹಲಿ ಸರ್ಕಾರವನ್ನು ಆಗ್ರಹಿಸಿದೆ.
ಪೇಜಾವರ ಶ್ರೀಗಳ ದಿವ್ಯ ನೇತೃತ್ವದಲ್ಲಿ ಚಾತಿರ್ಮಾಸ್ಯದ ಅಂಗವಾಗಿ ಬುಧವಾರ ಸಂಜೆ ವಸಂತ್ ಕುಂಜ್ ನಲ್ಲಿ ನಡೆದ ಸಂತ ಸಂಗಮದಲ್ಲಿ ಪಾಲ್ಗೊಂಡ ಸಾಧು ಸಂತರು ಈ ಸಂಬಂಧ ಸರ್ಕಾರವನ್ನು ಒತ್ತಾಯಿಸಿ ಮಾತನಾಡಿದರು.
ವಿಶ್ವ ಹಿಂದು ಪರಿಷತ್ ಸಹಯೋಗದಲ್ಲಿ ನಡೆಸ ಸಮಾವೇಶದಲ್ಲಿ ದೆಹಲಿ ಪ್ರಾಂತದಿಂದ ನೂರಕ್ಕೂ ಅಧಿಕ ಸಂತರು ಭಾಗವಹಿಸಿದರು.
ಸುಮಾರು ಒಂದೂವರೆ ಘಂಟೆಗಳ ಕಾಲ ವರ್ತಮಾನದ ಸನಾತನ ಧರ್ಮ ಹಾಗೂ ರಾಷ್ಟ್ರೀಯ ವಿಚಾರಗಳ ಮೇಲೆ ಸಂತರು ಮಂಥನ ನಡೆಸಿದರು. ಕೊನೆಯಲ್ಲಿ ಹತ್ತು ನಿರ್ಣಯಗಳನ್ನು ಅಂಗೀಕರಿಸಿ ದೆಹಲಿ ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಯಿತು.
ಇದೇ ಸಂದರ್ಭದಲ್ಲಿ ವಿ ಹಿಂ ಪ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಅವರು ದೇಶ ವಿದೇಶಗಳಲ್ಲಿ ಸನಾತನ ಧರ್ಮರಕ್ಷಣೆಗೆ ಸಲ್ಲಿಸಿದ ಸುದೀರ್ಘ ಸೇವೆಯನ್ನು ಮನ್ನಿಸಿ ಪೇಜಾವರ ಮಠ ಸಂಸ್ಥಾನದ ವತಿಯಿಂದ ಧರ್ಮ ಭೂದಣ ಪ್ರಶಸ್ತಿಯನ್ನು ಶ್ರೀಗಳು ನೀಡಿ ಸಂಮಾನಿಸಿದರು.
ಸಂದೇಶ ನೀಡಿದ ಶ್ರೀ ವಿಶ್ವಪ್ರಸನ್ನ ತೀರ್ಥರು ಸಂತರು ಎಂದಿಗೂ ಜಗತ್ತಿನ ಒಳಿತಿಗಾಗಿ ಕರ್ತವ್ಯ ನಿರ್ವಹಿಸುತ್ತಿರುವವರು. ರಾಮ ರಾಜ್ಯ ನಿರ್ಮಾಣದಲ್ಲೂ ಸಂತರ ಪಾತ್ರ ಅಮೂಲ್ಯವಾದುದು. ಅದೇ ರೀತಿ ರಾಮರಾಜ್ಯ ನಿರ್ಮಾಣಕ್ಕೂ ಸಂತರು ನಿರಂತರ ಮಸರ್ಗದರ್ಶನ ಮಾಡುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರನರನ್ನು ಶ್ರೀಗಳು ಸಂಮಾನಿಸಿದರು. ವಿಹಿಂಪ ಧರ್ಮಚಾರ್ಯ ಸಂಪರ್ಕ ಪ್ರಮುಖ್ ದೀಪಕ್ ಜಿ ಕಾರ್ಯಕ್ರಮ ಸಂಯೋಜಿಸಿದರು. ವೇದವ್ಯಾಸ ಗುರುಕುಲದ ಆಡಳಿತಾಧಿಕಾರಿ ರಾಕೇಶ್ ಗೌರ್ ಸ್ವಾಗತಿಸಿದರು. ಮಹಾನಿಧಿ ಆಚಾರ್ಯರು ಉಡುಪಿ ಮಠದ ಇತಿಹಾಸ ಮತ್ತು ಪರಂಪರೆಯ ಕುರಿತು ಮಾತಾಡಿದರು. ಶ್ರೀಗಳ ಆಪ್ತ ಕಾರ್ಯದರ್ಶಿ ಅಶ್ವಿನ್ ಕಕ್ರಣ್ಣಾಯರು ವಂದನಾರ್ಪಣೆಗೈದರು. ವಿಹಿಂಪ ಪ್ರಾಂತ ಸಂಘಟನಾ ಮಂತ್ರಿ ಸುಬೋಧ್ ಜಿ ಉಪಸ್ಥಿತರಿದ್ದರು. ವೇದವ್ಯಾಸ ಗುರುಕುಲದ ಪ್ರಾಚಾರ್ಯ ಡಾ ವಿಠೋಬಾಚಾರ್ಯ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮಕ್ಕೂ ಮೊದಲು ಶ್ರೀ ಕೃಷ್ಣ ಧಾಮದಲ್ಲಿ ಕೃಷ್ಣ ದೇವರಿಗೆ ಮಂಗಳಾರತಿ ಬೆಳಗಿ ಸಂತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಗುರುಕುಲದ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು.
ಪೇಜಾವರ ಮಠದ ಪಿ ಆರ್ ಒ ವಾಸುದೇವ ಭಟ್ ಪೆರಂಪಳ್ಳಿ ಒಟ್ಟು ಕಾರ್ಯಕ್ರಮ ಸಂಯೋಜಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

