ನವದೆಹಲಿ: ಪೇಜಾವರ ಶ್ರೀಗಳ ಚಾರಿತ್ರಿಕ 39ನೇ ಚಾತುರ್ಮಾಸ್ಯ ವ್ರತಕ್ಕೆ ವೈಭವದ ತೆರೆ

Upayuktha
0


ನವದೆಹಲಿ: ಇಲ್ಲಿನ ವೇದವ್ಯಾಸ ಗುರುಕುಲದಲ್ಲಿ ಶುಕ್ರವಾರ ಸಂಜೆ ನಡೆದ ಭಕ್ತಿಪೂರ್ಣ ಕಾರ್ಯಕ್ರಮದೊಂದಿಗೆ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಚಾರಿತ್ರಿಕ 39ನೇ ಚಾತುರ್ಮಾಸ್ಯ ವ್ರತವು ಅತ್ಯಂತ ವೈಭವದಿಂದ ಭಗವದರ್ಪಣಗೊಂಡಿತು.


ಮೇಘಾಲಯ ರಾಜ್ಯಪಾಲ ಸಿ. ಹೆಚ್. ವಿಜಯಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರೋಪ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ವಾಮೀಜಿಯವರಿಗೆ ಭಕ್ತಾದಿಗಳು ಪುಷ್ಪಾಭಿಷೇಕದ ಮೂಲಕ ಗುರುವಂದನೆ ಸಲ್ಲಿಸಿದರು.


ದೆಹಲಿ ಸರ್ಕಾರದಿಂದ ಕ್ರಿಯಾತ್ಮಕ ಹೆಜ್ಜೆ:

ಚಾತುರ್ಮಾಸ್ಯದ ಸಂದರ್ಭದಲ್ಲಿ ಸ್ವಾಮೀಜಿಯವರು ನೀಡಿದ 'ಸಂತ ಸಂಗಮ'ದ ನಿರ್ಣಯವನ್ನು ಸ್ವೀಕರಿಸಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, "ಶ್ರೀಗಳು ಅತ್ಯಂತ ಉತ್ತಮವಾದ ಸೂಚನೆಗಳನ್ನು ನೀಡಿದ್ದು, ದೆಹಲಿ ಸರ್ಕಾರವು ಈ ಬಗ್ಗೆ ನಿಶ್ಚಿತವಾಗಿ ಕ್ರಿಯಾತ್ಮಕ ಹೆಜ್ಜೆ ಇಡಲಿದೆ. ನನ್ನ ಅಧಿಕಾರಾವಧಿಯಲ್ಲಿ ಈ ದಿವ್ಯ ಸತ್ರ ನಡೆದಿರುವುದು ಅತೀವ ಸಂತಸ ತಂದಿದೆ. ಕಳೆದ ಎರಡು ತಿಂಗಳುಗಳಲ್ಲಿ ನಡೆದ ಉತ್ತಮ ಕಾರ್ಯಗಳ ಫಲವು ದೆಹಲಿಯ ಸುಖ-ಸಮೃದ್ಧಿಗೆ ದೊರೆಯಲಿದೆ ಎಂಬ ಪೂರ್ಣ ವಿಶ್ವಾಸವಿದೆ," ಎಂದು ಹೇಳಿದರು.


ಈಶಾನ್ಯ ರಾಜ್ಯಗಳಿಗೆ ಪೇಜಾವರ ಮಠದ ಸೇವೆ ವಿಸ್ತರಿಸಲು ಆಹ್ವಾನ:

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೇಘಾಲಯ ರಾಜ್ಯಪಾಲ ಸಿ. ಹೆಚ್. ವಿಜಯಶಂಕರ್ ಮಾತನಾಡಿ, "ದೇಶಾದ್ಯಂತ ದಶಕಗಳಿಂದ ಸಮಾಜೋನ್ನತಿಯ ಕಾರ್ಯಗಳನ್ನು ಮಾಡುತ್ತಿರುವ ಪೇಜಾವರ ಮಠವು ಈಶಾನ್ಯ ರಾಜ್ಯಗಳಿಗೂ ತನ್ನ ಸೇವಾ ಕಾರ್ಯಗಳನ್ನು ವಿಸ್ತರಿಸಬೇಕು. ಇದನ್ನು ಪೇಜಾವರ ಮಠ ಮಾತ್ರ ಮಾಡಲು ಸಾಧ್ಯ. ಈ ಕುರಿತು ನಾನು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರೊಂದಿಗೆ ಖಂಡಿತವಾಗಿ ಚರ್ಚಿಸುತ್ತೇನೆ," ಎಂದು ಶ್ರೀಗಳಿಗೆ ಆಹ್ವಾನ ನೀಡಿದರು.


ಗಣ್ಯರ ಉಪಸ್ಥಿತಿ ಹಾಗೂ ಸನ್ಮಾನ:

ಚಾತುರ್ಮಾಸ್ಯ ಸೇವಾ ಸಮಿತಿಯ ಅಧ್ಯಕ್ಷ ಅಲೋಕ್ ಕುಮಾರ್ ಅವರು ಎರಡು ತಿಂಗಳ ಅವಧಿಯಲ್ಲಿ ನಡೆದ ಕಾರ್ಯಕ್ರಮಗಳ ಅವಲೋಕನ ವರದಿಯನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ಗುರುಕುಲದ ಪ್ರಾಚಾರ್ಯ ಡಾ. ವಿಠೋಬಾಚಾರ್ಯ ದಂಪತಿಯನ್ನು ಗೌರವಿಸಿ ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಶಾಸಕರಾದ ಅನಿಲ್ ಶರ್ಮಾ, ಕೈಲಾಶ್ ಗೆಹ್ಲೋಟ್, ಕಾರ್ಪೋರೇಟರ್ ಇಂದ್ರಜಿತ್ ಸೆರಾವತ್, ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ವರಖೇಡಿ ಶ್ರೀನಿವಾಸ್, ಪ್ರಾಚಾರ್ಯ ಡಾ. ವಿಠೋಬಾಚಾರ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


ಸವಿತಾ ಅವರು ಕಾರ್ಯಕ್ರಮ ನಿರೂಪಿಸಿದರೆ, ವಾಸುದೇವ ಭಟ್ ಪೆರಂಪಳ್ಳಿ ಅವರು ಸಂಯೋಜನೆಯ ನೇತೃತ್ವ ವಹಿಸಿದ್ದರು. ರಾಕೇಶ್ ಗೌರ್, ಕೃಷ್ಣ ಭಟ್, ಶ್ರೀನಿಧಿ ಜೋಶಿ, ಅಶ್ವಿನ್ ಕುಮಾರ್, ನೀರಜ್ ಟ್ರೆಗಾನ್, ದೀಪಕ್, ದೇವೇಂದರ್ ಹಾಗೂ ನವನೀತ್ ಕಠಾನ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top