ಶ್ರೀ ವಿಶ್ವೇಶತೀರ್ಥ ಜನ್ಮ ಶತಾಬ್ದ ಪಂಚವಾರ್ಷಿಕ ಯೋಜನೆ ಲಾಂಛನ ಬಿಡುಗಡೆಗೊಳಿಸಿದ ಪ್ರಧಾನಿ
ಪ್ರಧಾನಿಗೆ ಯಕ್ಷಗಾನ ರಾಜಕಿರೀಟ ತೊಡಿಸಿ ಸ್ವಾಮೀಜಿಯವರಿಂದ ಗೌರವ ಸಂಮಾನ
ನವದೆಹಲಿ: ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಚಾರಿತ್ರಿಕ ಇಂದ್ರಪ್ರಸ್ಥ ಚಾತುರ್ಮಾಸ್ಯ ವ್ರತ ಸಮಾಪ್ತಿಯ ಶುಭ ಸಂದರ್ಭದಲ್ಲಿ, ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನವದೆಹಲಿಯಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಅವರನ್ನು ಭೇಟಿಯಾದರು. ಸ್ವಾಮೀಜಿಯವರನ್ನು ಅತ್ಯಂತ ಆದರದಿಂದ ಬರಮಾಡಿಕೊಂಡ ಪ್ರಧಾನಿಯವರು ಕುಶಲೋಪರಿ ನಡೆಸಿದರು.
ಜನ್ಮ ಶತಾಬ್ದ ಪಂಚವಾರ್ಷಿಕ ಯೋಜನೆ ಲಾಂಛನ ಬಿಡುಗಡೆ:
ಪೂಜ್ಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಜನ್ಮ ಶತಮಾನೋತ್ಸವವು 2031 ರಲ್ಲಿ ನಡೆಯಲಿದ್ದು, ಈ ಅಂಗವಾಗಿ ಪೇಜಾವರ ಮಠವು ಹಮ್ಮಿಕೊಂಡಿರುವ ಪಂಚವಾರ್ಷಿಕ ಯೋಜನೆಯ ಅಧಿಕೃತ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿಯವರು ಈ ಸಂದರ್ಭದಲ್ಲಿ ಅನಾವರಣಗೊಳಿಸಿದರು. ಈ ಲಾಂಛನವನ್ನು ಶ್ರೀಗಳ ಮಾರ್ಗದರ್ಶನದಲ್ಲಿ ವಾಸುದೇವ ಭಟ್ ವಿನ್ಯಾಸಗೊಳಿಸಿದ್ದು, ಉಡುಪಿಯ ನಿಧಿಗ್ರಾಫಿಟೆಕ್‌ನ ಮುರಲಿಕೃಷ್ಣ ರಾವ್ ರೂಪಿಸಿದ್ದಾರೆ.
ಯಕ್ಷಗಾನ ರಾಜಕಿರೀಟ ತೊಡಿಸಿ ಸಂಮಾನ:
ಪ್ರಧಾನಮಂತ್ರಿಯವರಿಗೆ ಯಕ್ಷಗಾನದ ಸಾಂಪ್ರದಾಯಿಕ ರಾಜಕಿರೀಟ ತೊಡಿಸಿ, ಶಾಲು ಹೊದಿಸಿ, ಸ್ವರ್ಣ ಲೇಪಿತ ಕಾಲೀಯ ಕೃಷ್ಣನ ಪ್ರತಿಮೆ, ಫಲ ಹಾಗೂ ಮಂತ್ರಾಕ್ಷತೆ ನೀಡಿ ಶ್ರೀಪಾದರು ಆಶೀರ್ವದಿಸಿ ಸಂಮಾನಿಸಿದರು. ಕಳೆದ ವಾರ ಪ್ರಧಾನಿ ಮೋದಿಯವರ ಜನ್ಮದಿನದಂದು ಅವರ ಶ್ರೇಯಸ್ಸಿಗಾಗಿ ವೇದವ್ಯಾಸ ಗುರುಕುಲದಲ್ಲಿ ನೆರವೇರಿಸಲಾದ ಪೂರ್ಣ ನವಗ್ರಹ ಹೋಮ ಹಾಗೂ ರಾಷ್ಟ್ರಸೂಕ್ತ ಹೋಮದ ವಿಶೇಷ ಪ್ರಸಾದವನ್ನು ಇದೇ ವೇಳೆ ಪ್ರಧಾನಿಯವರಿಗೆ ತಲುಪಿಸಿ ಶುಭ ಹಾರೈಸಲಾಯಿತು.
ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಸಂದೇಶ:
"ಇಂದ್ರಪ್ರಸ್ಥದಲ್ಲಿ ನಡೆಸಿದ ಚಾತುರ್ಮಾಸ್ಯ ವ್ರತ ಅತ್ಯಂತ ಸಂತೋಷ ತಂದಿದೆ. ದೆಹಲಿಯಲ್ಲಿ ರಾಷ್ಟ್ರ ಹಾಗೂ ಧರ್ಮದ ಒಳಿತಿಗಾಗಿ ಹೋಮ-ಹವನಗಳು, ಜಪಯಜ್ಞಗಳು, ಸತ್ಸಂಗಗಳ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಮಂತ್ರೋಪದೇಶ ನೀಡಿರುವುದು ತೃಪ್ತಿ ನೀಡಿದೆ. ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿ ದೇಶವನ್ನು ಪ್ರಗತಿಯತ್ತ ಮುನ್ನಡೆಸುತ್ತಿರುವ ಪ್ರಧಾನಿ ಮೋದಿಯವರಿಂದ ಗುರುಗಳ ಜನ್ಮಶತಾಬ್ದ ಯೋಜನೆಯ ಲಾಂಛನ ಅನಾವರಣಗೊಂಡಿರುವುದು ಅರ್ಥಪೂರ್ಣ. ಪ್ರಧಾನಿಗಳು ಇನ್ನು ಸುದೀರ್ಘ ಕಾಲ ದೇಶವನ್ನು ಯಶಸ್ವಿಯಾಗಿ ಮುನ್ನಡೆಸಲಿ" ಎಂದು ಶ್ರೀಗಳು ಆಶೀರ್ವದಿಸಿದರು.
ಪ್ರಧಾನಿ ನರೇಂದ್ರ ಮೋದಿ ಮಾತು:
"ಶ್ರೀ ವಿಶ್ವೇಶತೀರ್ಥರು ಹಾಗೂ ಪೇಜಾವರ ಮಠವು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಸದಾ ಪ್ರೇರಣಾದಾಯಿ. ಉಡುಪಿ ಮತ್ತು ಬಿಜೆಪಿ ನಡುವಿನ ಸಂಬಂಧ ಯಾವತ್ತೂ ಸ್ಮರಣೀಯ. ಗುರುಗಳ ಜನ್ಮಶತಾಬ್ದ ಯೋಜನೆಗಳು ದೇಶಕ್ಕೆ ಮತ್ತಷ್ಟು ಬಲ ನೀಡಲಿ. ಉಡುಪಿ ಹಾಗೂ ದ್ವಾರಕೆಗೆ ಗಾಢವಾದ ಧಾರ್ಮಿಕ ಸಂಬಂಧವಿರುವುದರಿಂದ ಜನ್ಮಶತಾಬ್ದ ಯೋಜನೆಯಲ್ಲಿ ದ್ವಾರಕೆಯನ್ನೂ ಸೇರಿಸಿಕೊಂಡು ವಿಶೇಷ ಯೋಜನೆ ರೂಪಿಸಿ," ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು.
ಗಣ್ಯರ ಉಪಸ್ಥಿತಿ:
ಈ ವಿಶೇಷ ಭೇಟಿಯ ಸಂದರ್ಭದಲ್ಲಿ ಅಖಿಲ ಭಾರತ ಮಾಧ್ವ ಮಹಾಮಂಡಲದ ಅಧ್ಯಕ್ಷ ಗೌತಮ್, ಚೆನ್ನೈ ಉಡುಪಿ ಹೋಮ್ಸ್ ಮಾಲಕ ಪಿ. ರಾಮ್ ಪ್ರಸಾದ್, ಎಂ.ಆರ್.ಜಿ. ಗ್ರೂಪ್ ಮುಖ್ಯಸ್ಥ ಕೆ. ಪ್ರಕಾಶ್ ಶೆಟ್ಟಿ, ಕೊಯಮುತ್ತೂರಿನ ಉದ್ಯಮಿ ರವಿ ಶ್ಯಾಮ್, ನವದೆಹಲಿ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ, ಬೆಂಗಳೂರಿನ ಕೈಗಾರಿಕೋದ್ಯಮಿ ಹರೀಶ್ ರಾಯಸ್, ಮೈಸೂರಿನ ವಿಜಯ ವಿಠಲ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹೆಚ್. ವಾಸುದೇವ ಭಟ್, ಬದರಿ ನಾರಾಯಣ ಲಡ್ಡಾ, ಶ್ರೀನಿವಾಸ ಪ್ರಸಾದ್ (ಮೈಸೂರು), ಟಿ.ಪಿ. ಅನಂತ್ (ಬೆಂಗಳೂರು), ವೇದವ್ಯಾಸ ಗುರುಕುಲದ ಪ್ರಾಚಾರ್ಯ ಡಾ. ವಿಠೋಬಾಚಾರ್ಯ ಹಾಗೂ ಸ್ವಾಮೀಜಿಯವರ ಕಾರ್ಯದರ್ಶಿ ಕೃಷ್ಣಮೂರ್ತಿ ಭಟ್ ಉಪಸ್ಥಿತರಿದ್ದರು.
ಮಠದ ಪಿ.ಆರ್.ಒ ವಾಸುದೇವ ಭಟ್ ಪೆರಂಪಳ್ಳಿ ಅವರು ಕಾರ್ಯಕ್ರಮ ಸಂಯೋಜಿಸಿ, ಪ್ರಧಾನಿಯವರಿಗೆ ಗಣ್ಯರನ್ನು ಪರಿಚಯಿಸಿದರು.




