ದ.ಕ. ಜಿಲ್ಲಾ ರೆಡ್‌ಕ್ರಾಸ್‌ನಿಂದ ರಾಷ್ಟ್ರೀಯ ಪೋಷಣ್ ಮಾಸಾಚರಣೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು (ನಗರ), ಭಾರತೀಯ ರೆಡ್ ಕ್ರಾಸ್ ಸೊಸೈಟಿ ದ.ಕ ಘಟಕ, ಆಯುಷ್ ಇಲಾಖೆ, ಭಗಿನಿ ಸಮಾಜ ಮಂಗಳೂರು, ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ವತಿಯಿಂದ ಮಂಗಳೂರು ತಾಲೂಕು ಮಟ್ಟದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಂಗಳವಾರ ನಗರದ ರೆಡ್‌ಕ್ರಾಸ್ ಶತಮಾನೋತ್ಸವ ಭವನದ ಪ್ರೇರಣಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ "ಪೌಷ್ಟಿಕ ಆಹಾರ ಆರೋಗ್ಯಕರ ಸಮಾಜದ ಅಡಿಪಾಯವಾಗಿದ್ದು, ಮಕ್ಕಳ ಪೋಷಣೆ ಹಾಗೂ ಪೌಷ್ಟಿಕಾಂಶದ ಕುರಿತು ಅರಿವು ಮೂಡಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಅಂಗನವಾಡಿ ಶಿಕ್ಷಕಿಯರು ಮತ್ತು ಆಶಾ ಕಾರ್ಯಕರ್ತೆಯರು ಮಹತ್ವದ ಕೆಲಸ ಮಾಡುತ್ತಿದ್ದಾರೆ" ಎಂದರು.
ಮಕ್ಕಳ ರಕ್ಷಣಾ ನಿರ್ದೇಶನಾಲಯದ ಯೋಜನಾ ನಿರ್ದೇಶಕ ಪರಶುರಾಮ್ ವೈ ಶೆಟ್ಟೆಪ್ಪನವರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಧರ್.ಎಂ.ಎಸ್., ಜಿಲ್ಲಾ ನಿರೂಪಣಾಧಿಕಾರಿ ರಶ್ಮಿ.ಕೆ.ಎಂ, ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳಾದ ಡಾ.ಹೇಮವಾಣಿ ಪಿ. ಮತ್ತು ಡಾ. ಶೋಭಾರಾಣಿ ಪೋಷಣ್ ಮಾಸಾಚರಣೆಯ ಮಹತ್ವ, ಪೌಷ್ಟಿಕ ಅಹಾರ ಕ್ರಮ ಮತ್ತು ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷೆ ಹೇಮಾ ರಾವ್, ಭಗಿನಿ ಸಮಾಜದ ಅಧ್ಯಕ್ಷೆ ಪ್ರಮೋದ ಸತೀಶ್, ರಶ್ಮಿ ಶಾಂತಾರಾಮ ಶೆಟ್ಟಿ, ಜಿಲ್ಲಾ ರೆಡ್‌ಕ್ರಾಸ್ ಕಾರ್ಯದರ್ಶಿ ಡಾ.ಸತೀಶ್ ಕುಮಾರ್ ಶೆಟ್ಟಿ, ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಪಿ.ಬಿ.ಹರೀಶ್ ರೈ ಉಪಸ್ಥಿತರಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ. ಎನ್. ಸ್ವಾಗತಿಸಿ, ಮೇಲ್ವಿಚಾರಕಿ ಅನುಪಮ ವಂದಿಸಿದರು. ಮೇಲ್ವಿಚಾರಕಿ ಭವ್ಯ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.
ಪೋಷಣ್ ಮಾಸಾಚರಣೆ ಅಂಗವಾಗಿ ಅಂಗನವಾಡಿ ಶಿಕ್ಷಕಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಎಳೆಯ ಮಕ್ಕಳಿಗೆ ಅನ್ನ ಪ್ರಾಶನ, ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿತು.
