ಸ್ಮಾರ್ಟ್ ಕಟ್ಟಡಗಳ ನಿರ್ಮಾಣದಲ್ಲಿ ಸುಧಾರಿತ ಹೆಚ್‌ವಿಎಸಿ, ಐಒಟಿ ಮತ್ತು ಎಐ ತಂತ್ರಜ್ಞಾನಗಳು ಅತ್ಯಗತ್ಯ: ಸಾರಾ ಇ. ಮಾಸ್ಟನ್

Upayuktha
0

ಬೆಂಗಳೂರು: ‘ಆಧುನಿಕ ತಾಪನ, ಗಾಳಿ ಬೆಳಕಿನ ವ್ಯವಸ್ಥೆ ಮತ್ತು ಹವಾನಿಯಂತ್ರಣ (HVAC) ವ್ಯವಸ್ಥೆಗಳು ಸುಸ್ಥಿರ ಹಾಗೂ ಸ್ಮಾರ್ಟ್ ಮೂಲಸೌಕರ್ಯದ ಹೃದಯಬಡಿತವಾಗಿವೆ. ಕಠಿಣ ಪರಿಸರ ಗುರಿಗಳನ್ನು ತಲುಪಲು ಕಟ್ಟಡಗಳು ಆಧುನಿಕಗೊಳ್ಳುತ್ತಿರುವಂತೆ, ಉತ್ತಮ ಆಂತರಿಕ ಗಾಳಿಯ ಗುಣಮಟ್ಟ ಹಾಗೂ ಗರಿಷ್ಠ ಇಂಧನ ದಕ್ಷತೆಯನ್ನು ಸಮತೋಲನಗೊಳಿಸಲು ಸುಧಾರಿತ ಹೆಚ್‌ವಿಎಸಿ (HVAC) ತಂತ್ರಜ್ಞಾನವು ಅತ್ಯಂತ ಮುಖ್ಯವಾಗಿದೆ. ಈ ಹವಾಮಾನ ನಿಯಂತ್ರಣ ವ್ಯವಸ್ಥೆಗಳಲ್ಲಿ ಐಒಟಿ (IoT) ಮತ್ತು ಎಐ (AI) ತಂತ್ರಜ್ಞಾನಗಳನ್ನು ಸಂಯೋಜಿಸುವುದರಿಂದ, ಕಟ್ಟಡದ ಬಳಕೆದಾರರ ಮಾದರಿಗಳಿಗೆ ಅನುಗುಣವಾಗಿ ತಕ್ಷಣ ಸ್ಪಂದಿಸಲು ಮತ್ತು ಕಾರ್ಬನ್ ಹೆಜ್ಜೆಗುರುತುಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಾಗುತ್ತದೆ. ನಮ್ಮ ನಿರ್ಮಿತ ಪರಿಸರವನ್ನು ಭವಿಷ್ಯಕ್ಕೆ ಸಜ್ಜುಗೊಳಿಸುವುದು ಸಾಂಪ್ರದಾಯಿಕ ತಾಪನ ಮತ್ತು ತಂಪಾಗಿಸುವ ವ್ಯವಸ್ಥೆಗಳನ್ನು ಬುದ್ಧಿವಂತ, ಡೇಟಾ-ಆಧಾರಿತ ಜಾಲಗಳಾಗಿ ಪರಿವರ್ತಿಸುವುದರ ಮೇಲೆ ಹೆಚ್ಚು ಅವಲಂಬಿತವಾಗಿದೆ’, ಎಂದು ಅಮೆರಿಕದ ‘ಅಮೆರಿಕನ್ ಸೊಸೈಟಿ ಆಫ್ ಹೀಟಿಂಗ್, ರೆಫ್ರಿಜರೇಟಿಂಗ್ ಅಂಡ್ ಏರ್ ಕಂಡೀಷನಿಂಗ್ ಎಂಜಿನಿಯರ್ಸ್’ (ASHRAE) ಅಧ್ಯಕ್ಷರಾದ ಸಾರಾ ಇ. ಮಾಸ್ಟನ್ ಅಭಿಪ್ರಾಯಪಟ್ಟರು. 


ಅವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ‘ಸ್ಮಾರ್ಟ್ ಕಟ್ಟಡಗಳ ಭವಿಷ್ಯ: ಸುಸ್ಥಿರ ಕಟ್ಟಡಗಳಲ್ಲಿ ಬಿಎಂಎಸ್, ಐಒಟಿ, ಎಐ ಮತ್ತು ಇಂಧನ ನಿರ್ವಹಣೆಯ ಪಾತ್ರ’ ಎಂಬ ವಿಷಯದ ಮೇಲಿನ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ವಿಚಾರ ಸಂಕಿರಣವನ್ನು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗವು, ASHRAE ಮತ್ತು ISHRAE ಬೆಂಗಳೂರು ಘಟಕಗಳ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.


ಮುಂದುವರಿದು ಮಾತನಾಡಿದ ಅವರು – ‘ಹವಾಮಾನ ವೈಪರೀತ್ಯ’ದಂತಹ ಪ್ರಮುಖ ಸವಾಲುಗಳನ್ನು ಎದುರಿಸಲು ಸಹಿಷ್ಣುತೆ, ಪರಿಶ್ರಮ ಮತ್ತು ಅಭ್ಯಾಸದ ಅಗತ್ಯವಿದೆ. ಕಟ್ಟಡಗಳಿಂದ ಹೊರಸೂಸಲ್ಪಡುವ ಮಾಲಿನ್ಯ ಮತ್ತು ಸುಸ್ಥಿರತೆಯ ಸಂಕೀರ್ಣತೆಗಳನ್ನು ಪರಿಹರಿಸಲು, ಉದ್ಯಮವು ಮೂರು ಪ್ರಮುಖ ತಂತ್ರಗಳ ಮೇಲೆ ಗಮನ ಹರಿಸಬೇಕು: ಏಕರೂಪದ ಬಿಲ್ಡಿಂಗ್ ಕೋಡ್‌ಗಳನ್ನು ಅಳವಡಿಸಿಕೊಳ್ಳುವುದು, ವಿವಿಧ ಕ್ಷೇತ್ರಗಳ ತಜ್ಞರ ನಡುವೆ ಸಹಕಾರವನ್ನು ಉತ್ತೇಜಿಸುವುದು ಮತ್ತು ನವೀನ ಶಿಕ್ಷಣದ ಮೂಲಕ ಹೊಸ ಪ್ರತಿಭೆಗಳನ್ನು ಆಕರ್ಷಿಸುವುದು. ಅಂತಿಮವಾಗಿ, ನಮ್ಮ ಪ್ರಸ್ತುತ ಮತ್ತು ಭವಿಷ್ಯದ ಕಟ್ಟಡಗಳನ್ನು ಸುಸ್ಥಿರಗೊಳಿಸುವುದು ದೃಢವಾದ ನಿಯಮಗಳು, ಆಯಾ ಕ್ಷೇತ್ರದ ಸಹಯೋಗ ಮತ್ತು ನಿರಂತರ ಅಳವಡಿಕೆಯ ಮೇಲೆ ಅವಲಂಬಿತವಾಗಿರುತ್ತದೆ’, ಎಂದರು.


ಈ ವಿಚಾರ ಸಂಕಿರಣದಲ್ಲಿ ಮೂವರು ಹೆಸರಾಂತ ಉಪನ್ಯಾಸಕರು ಹಾಗೂ ಉದ್ಯಮ ತಜ್ಞರಾದ ಬೆಂಗಳೂರಿನ ಸಿಮನ್ಸ್ ಟೆಕ್ನಾಲಜಿ ಅಂಡ್ ಸರ್ವಿಸಸ್ ಪ್ರೈಂ. ಲಿಮಿಟೆಡ್‌ನ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಶರ್ಮಿಳಾ ಎಸ್.ಎಂ.; ಬೆಂಗಳೂರಿನ ಜಾನ್ಸನ್ ಕಂಟ್ರೋಲ್ಸ್‌ನ ಕಂಟ್ರೋಲ್ಸ್ ಡೊಮೇನ್ ಲೀಡರ್ ನವೀನ್ ಹಿರೇಮಗಳೂರು; ಮತ್ತು ಚೆನ್ನೈ ನ ಟ್ರೇನ್ ಟೆಕ್ನಾಲಜೀಸ್‌ನ ಕಂಟ್ರೋಲ್ಸ್ ಸ್ಟ್ರೀಮ್ ಲೀಡರ್ ದೇಬಶ್ರೀ ದಿಂಡಾ ಭಾಗವಹಿಸಿದ್ದರು. ಇಂಧನ ದಕ್ಷತೆಯನ್ನು ಉತ್ತಮಗೊಳಿಸಲು ಕ್ಲೌಡ್ ಕಂಪ್ಯೂಟಿಂಗ್, ಎಐ ಮತ್ತು ಡಿಜಿಟಲ್ ಟ್ವಿನ್ಸ್‌ಗಳಂತಹ ಸುಧಾರಿತ ತಂತ್ರಜ್ಞಾನಗಳನ್ನು ಸಂಯೋಜಿಸುವ ಬುದ್ಧಿವಂತ, ಕಡಿಮೆ ಕಾರ್ಬನ್ ಹೊರಸೂಸುವ ಸ್ಮಾರ್ಟ್ ಕಟ್ಟಡಗಳನ್ನು ವಿನ್ಯಾಸಗೊಳಿಸುವುದರಲ್ಲಿ ಸುಸ್ಥಿರ ಮೂಲಸೌಕರ್ಯದ ಭವಿಷ್ಯವಿದೆ ಎಂದು ಅವರು ಹೇಳಿದರು. ಕಟ್ಟಡ ನಿರ್ಮಾಣ ಉದ್ಯಮವು ಸ್ವಾಯತ್ತ, ಮಾನವ-ಕೇಂದ್ರೀತ ಮತ್ತು ಶೂನ್ಯ-ಕಾರ್ಬನ್ (Net-Zero) ಅಥವ ನಿವ್ವಳ ಶೂನ್ಯ ಭವಿಷ್ಯದತ್ತ ಸಾಗುತ್ತಿರುವುದರಿಂದ, 2034ರ ವೇಳೆಗೆ ಇದು ಹೇರಳವಾದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಈ ಬದಲಾಗುತ್ತಿರುವ ವಲಯದಲ್ಲಿ ಯಶಸ್ವಿಯಾಗಲು, ವಿದ್ಯಾರ್ಥಿಗಳು ಮತ್ತು ಯುವ ಎಂಜಿನಿಯರ್‌ಗಳು ತಮ್ಮ ಮೂಲ ವಿಷಯದ ಜ್ಞಾನದ ಜೊತೆಗೆ ಡೇಟಾ, ಸಾಫ್ಟ್ವೇರ್ ಮತ್ತು ಸೈಬರ್ ಸೆಕ್ಯುರಿಟಿಯಂತಹ ಇತರ ಬಹುಶಿಸ್ತೀಯ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಟೆಕ್ನೋಗ್ರೀನ್ ಸಿಇಒ ಅಮರನಾರಾಯಣ್, ರಿಲಯನ್ಸ್ ರಿಟೇಲ್ ಲಿಮಿಟೆಡ್‌ನ ವೈಸ್ ಪ್ರೆಸಿಡೆಂಟ್ ಸಂಪತ್ ಕುಮಾರ್, ವಿ ಕೆ ಎ ಪವರ್‌ಮಾಸ್ಟರ್‌ನ ಅಸೋಸಿಯೇಟ್ ಡೈರೆಕ್ಟರ್ ನಿಶಾ ನಾಯರ್, ಟ್ರೇನ್ ಟೆಕ್ನಾಲಜೀಸ್ ಸಂಸ್ಥೆಯ ಅಧಿಕಾರಿಗಳು, ವಿಚಾರ ಸಂಕಿರಣದ ಸಂಚಾಲಕ ಹಾಗೂ ಪ್ರಾಧ್ಯಾಪಕರಾದ ಡಾ. ಎನ್. ಕಪಿಲನ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ರಮೇಶ್ ಬಾಬು ಎನ್., ಹಾಗೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಿಕಲ್ ಅಂಡ್ ಎಲೆಕ್ಟಾçನಿಕ್ಸ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top