
ಮಂಗಳೂರು : ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗದ ಆಶ್ರಯದಲ್ಲಿ ‘ಬದಲಾಗುತ್ತಿರುವ ಜಗತ್ತಿನಲ್ಲಿ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವುದು: ಉದಯೋನ್ಮುಖ ಸವಾಲುಗಳು ಮತ್ತು ಸುಸ್ಥಿರ ಪ್ರತಿಕ್ರಿಯೆಗಳು’ ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸೆಪ್ಟೆಂಬರ್ 16 ಮತ್ತು 17, 2026 ರಂದು ಆಯೋಜಿಸಲಾಗಿದೆ.
ವಿಶ್ವವಿದ್ಯಾಲಯದ ಮಾಫೇ ಬ್ಲಾಕ್‌ನಲ್ಲಿರುವ ಎರಿಕ್ ಮಥಾಯಸ್ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಯೆನಪೊಯ (ಡೀಮ್ಡ್ ಯೂನಿವರ್ಸಿಟಿ) ಪ್ರೊ ಚಾನ್ಸೆಲರ್ ಹಾಗೂ ಜುಲೇಖಾ ಯೆನೆಪೊಯ ಆಂಕೊಲಾಜಿ ಸಂಸ್ಥೆಯ ನಿರ್ದೇಶಕ ಡಾ. ಎಂ. ವಿಜಯಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಮಾರೋಪ ಕಾರ್ಯಕ್ರಮದಲ್ಲಿ ಪೇಪರ್ ರಾಕೆಟ್ ಬುಕ್ಸ್ ಸಂಸ್ಥಾಪಕಿ ಹಾಗೂ ಶಿಕ್ಷಕಿ ಡಾ. ರೂಪಶ್ರೀ ಶೆಣೈ ಮುಖ್ಯ ಅತಿಥಿಯಾಗಿ ಉಪಸ್ಥಿತರಿರಲಿದ್ದಾರೆ.
ಎರಡು ದಿನಗಳ ಈ ವಿಚಾರ ಸಂಕಿರಣದಲ್ಲಿ 4 ವಿಭಿನ್ನ ಗೋಷ್ಠಿಗಳು ನಡೆಯಲಿವೆ. ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಸುಧೀರ್ ಪ್ರಭು ‘ಬದಲಾಗುತ್ತಿರುವ ಜಗತ್ತಿನಲ್ಲಿ ಆರೋಗ್ಯ ಮತ್ತು ಯೋಗಕ್ಷೇಮ’ ವಿಷಯದ ಕುರಿತು ಮೊದಲ ಗೋಷ್ಠಿ ನಡೆಸಿಕೊಡಲಿದ್ದಾರೆ. NITTE ವಿಶ್ವವಿದ್ಯಾಲಯದ ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಡಾ. ಶಯೀಶ್ ಮೊರಾಜ್ಕರ್ ‘ಹವಾಮಾನ ಬದಲಾವಣೆ, ಪರಿಸರ ಅಪಾಯಗಳು ಮತ್ತು ಮಾನವ ಆರೋಗ್ಯ’ ವಿಷಯವಾಗಿ ಎರಡನೇ ಗೋಷ್ಠಿ ನಡೆಸಲಿದ್ದಾರೆ.
ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್ (CFAL) ಪ್ರಾಂಶುಪಾಲರಾದ ಡಾ. ಸ್ಮಿತಾ ಹೆಗ್ಡೆ ‘ಪರಿಸರ ಆರೋಗ್ಯಕ್ಕಾಗಿ ನಡವಳಿಕೆ ಬದಲಾವಣೆ ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆ’ ಹಾಗೂ ಬೆಂಗಳೂರಿನ ನಿಮ್ಹಾನ್ಸ್‌ನ ಹೆಚ್ಚುವರಿ ಪ್ರಾಧ್ಯಾಪಕ ಡಾ. ಅನೀಶ್ ವಿ. ಚೆರಿಯನ್ ‘ಯುವಜನರ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ: ಅಪಾಯಗಳನ್ನು ಪರಿಹರಿಸುವುದು ಮತ್ತು ಆತ್ಮಹತ್ಯೆ ತಡೆಗಟ್ಟುವಿಕೆ’ ಎಂಬ ವಿಷಯಗಳ ಕುರಿತು ಗೋಷ್ಠಿಗಳನ್ನು ನಡೆಸಲಿದ್ದಾರೆ.
ಸೆಪ್ಟೆಂಬರ್ 17 ರಂದು ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಸಂಶೋಧಕರಿಂದ ಪ್ರಬಂಧ ಪ್ರಸ್ತುತಿಗಳು ನಡೆಯಲಿವೆ. ಸಮಕಾಲೀನ ಆರೋಗ್ಯ ಸವಾಲುಗಳನ್ನು ಎದುರಿಸುವ ನವೀನ ತಂತ್ರಗಳ ಚರ್ಚೆ, ಸಂಶೋಧನಾ ವಿನಿಮಯ ಮತ್ತು ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳುವ ಉದ್ದೇಶದಿಂದ ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದ್ದು, ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು, ಶಿಕ್ಷಕರು, ಸಂಶೋಧಕರು ಹಾಗೂ ಆರೋಗ್ಯ ವೃತ್ತಿಪರರು ಭಾಗವಹಿಸಲಿದ್ದಾರೆ.
