ರಾಷ್ಟ್ರೀಯ ಅಭಿಯಂತರರ ದಿನ: ನಾನು ಕಂಡ ಮಹಾನ್ ಶಿಲ್ಪಿ ಸರ್ ಎಂ.ವಿ

Shreya Hegde
0


ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಅಭಿಯಂತರರ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 15ರಂದು ರಾಷ್ಟ್ರೀಯ ಅಭಿಯಂತರರ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ನಮ್ಮ ನಾಡಿನ ಹೆಮ್ಮೆಯ ಇಂಜಿನಿಯರ್, ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ.


ಸರ್ ಎಂ.ವಿ. ಎಂದೇ ಜನಪ್ರಿಯರಾದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು 1860ರ ಸೆಪ್ಟೆಂಬರ್ 15ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದರು. ಬಾಲ್ಯದ ಶಿಕ್ಷಣದ ನಂತರ 1881ರಲ್ಲಿ ಬಿ.ಎ. ಪದವಿ ಹಾಗೂ ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದರು. 1907ರವರೆಗೆ ಮುಂಬೈ ಸರ್ಕಾರದಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ಅವರು, ತಮ್ಮ ಅಪ್ರತಿಮ ಪ್ರತಿಭೆಯಿಂದ ದೇಶದಾದ್ಯಂತ ಹಲವಾರು ಮಹತ್ವದ ಕಾರ್ಯಗಳನ್ನು ನಿರ್ವಹಿಸಿದರು.


ಮೈಸೂರಿನ ಕೃಷ್ಣರಾಜ ಸಾಗರ ಅಣೆಕಟ್ಟು, ಹೈದರಾಬಾದ್ ನಗರದ ಪ್ರವಾಹ ನಿಯಂತ್ರಣ ವ್ಯವಸ್ಥೆ, ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು ಅವರ ದೂರದೃಷ್ಟಿಯ ಪ್ರತೀಕಗಳಾಗಿವೆ. ಅವರ ಈ ಅಮೂಲ್ಯ ಸೇವೆಯನ್ನು ಗುರುತಿಸಿ ಭಾರತ ಸರ್ಕಾರವು 1955ರಲ್ಲಿ ಅವರಿಗೆ ದೇಶದ ಅತ್ಯುನ್ನತ ಗೌರವವಾದ 'ಭಾರತ ರತ್ನ' ಪ್ರಶಸ್ತಿಯನ್ನು ನೀಡಿ ಗೌರವಿಸಿತು. 'ಹಣವಿದ್ದರೆ ಸಾಲದು, ಒಳ್ಳೆಯ ವ್ಯಕ್ತಿತ್ವವಿದ್ದರೆ ಮಾತ್ರ ಸಮಾಜ ಗೌರವಿಸುತ್ತದೆ' ಮತ್ತು 'ಪದವಿಯು ಪ್ರಜಾ ಸೇವೆಗಾಗಿ ಹೊರತು ಸ್ವಂತ ಲಾಭಕ್ಕಾಗಿ ಅಲ್ಲ' ಎಂಬುದು ಅವರ ಬದುಕಿನ ಧ್ಯೇಯವಾಕ್ಯವಾಗಿತ್ತು.


ಸರ್ ಎಂ. ವಿಶ್ವೇಶ್ವರಯ್ಯ ಅವರು ಕೇವಲ ಒಬ್ಬ ಇಂಜಿನಿಯರ್ ಆಗಿರಲಿಲ್ಲ, ಅವರು ಒಬ್ಬ ದೂರದೃಷ್ಟಿಯುಳ್ಳ ರಾಷ್ಟ್ರ ನಿರ್ಮಾತೃ. ಅವರ ಪ್ರಾಮಾಣಿಕತೆ, ಶಿಸ್ತು ಮತ್ತು ಸಮಯಪಾಲನೆ ಇಂದಿನ ಯುವಜನತೆಗೆ ದೊಡ್ಡ ಆದರ್ಶ. ದೇಶದ ಅಭಿವೃದ್ಧಿಯಲ್ಲಿ ಅಭಿಯಂತರರ ಪಾತ್ರವನ್ನು ಗೌರವಿಸುವ ಈ ದಿನ, ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಆಚರಣೆಗೆ ನಿಜವಾದ ಅರ್ಥ ಬರುತ್ತದೆ.


- ಹರ್ಷಿಣಿ ಕಾಂಚನ

 ದ್ವಿತೀಯ ಪತ್ರಿಕೋಧ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಕಾಲೇಜು ಪುತ್ತೂರು 





إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top