ಮಂಗಳೂರು: ಕೆಎಂಸಿ ಆಸ್ಪತ್ರೆ ಅತ್ತಾವರ ಮತ್ತು ಆಯುಷ್ ಫೆಡರೇಷನ್ ಆಫ್ ಇಂಡಿಯಾ (ರಿ) ದಕ್ಷಿಣ ಕನ್ನಡ ಹಾಗೂ ಮಂಗಳೂರು ಘಟಕದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಆಯುರ್ವೇದ ದಿನದ ಪೂರ್ವಭಾವಿಯಾಗಿ CME (ವೈದ್ಯಕೀಯ ನಿರಂತರ ಶಿಕ್ಷಣ) ಕಾರ್ಯಕ್ರಮ ಹಾಗೂ ಐವರು ಸಾಧಕ ವೈದ್ಯರಿಗೆ ಸನ್ಮಾನ ಸಮಾರಂಭವು ನಗರದ ದಿ ಓಷಿಯನ್ ಪರ್ಲ್ ಹೋಟೆಲ್‌ನಲ್ಲಿ ನಡೆಯಿತು.
ಕಾರ್ಯಕ್ರಮವು ದೇವ ಧನ್ವಂತರಿ ಸ್ತುತಿ ಮತ್ತು ಪುಷ್ಪಾರ್ಚನೆಯೊಂದಿಗೆ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಅರ್ಥಪೂರ್ಣವಾಗಿ ಆರಂಭವಾಯಿತು. ಮುಖ್ಯ ಭಾಷಣಕಾರರಾಗಿ ಆಗಮಿಸಿದ ಡಾ. ಭೂಷಣ್ ಶೆಟ್ಟಿ ಅವರು "ಡಯಾಬಿಟಿಕ್ ಕಿಡ್ನಿ ಡಿಸೀಸ್" (ಮಧುಮೇಹ ಸಂಬಂಧಿತ ಮೂತ್ರಪಿಂಡ ಕಾಯಿಲೆ) ಕುರಿತು ಅತ್ಯಂತ ಸರಳ ಮತ್ತು ಪ್ರಾಯೋಗಿಕವಾಗಿ ಉಪನ್ಯಾಸ ನೀಡಿ ಉಪಸ್ಥಿತರಿಗೆ ಉಪಯುಕ್ತ ಮಾಹಿತಿ ಒದಗಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಚಕ್ರಪಾಣಿ ಎಂ. ಅವರು ಮಾತನಾಡಿ, ಸನ್ಮಾನಿತ ವೈದ್ಯರನ್ನು ಅಭಿನಂದಿಸುವುದರ ಜೊತೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಇಂಟಿಗ್ರೇಟೆಡ್ (ಸಮಗ್ರ) ಪದ್ಧತಿಯ ಮಹತ್ವ ಮತ್ತು ಅವಶ್ಯಕತೆಯನ್ನು ವಿವರಿಸಿದರು.
ಐವರು ಅನುಭವಿ ವೈದ್ಯರಿಗೆ ಸನ್ಮಾನ
ಸಮಾರಂಭದಲ್ಲಿ ಆಯುರ್ವೇದ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿರುವ ಅನುಭವಿ ವೈದ್ಯರಾದ ಡಾ. ಶ್ರೀದೇವಿ ಆರ್. ಭಟ್, ಡಾ. ಸಂತೋಷ್ ಕುಮಾರ್ ಶಾಸ್ತ್ರಿ, ಡಾ. ಪ್ರದೀಪ್ ಎ., ಡಾ. ಪ್ರಸಾದ್ ಶೆಟ್ಟಿ ಹಾಗೂ ಡಾ. ವಿನಯ್ ಪ್ರಸಾದ್ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಸನ್ಮಾನಿತರು ತಮ್ಮ ಕುಟುಂಬ ಸಮೇತರಾಗಿ ಉಪಸ್ಥಿತರಿದ್ದು ಗೌರವ ಸ್ವೀಕರಿಸಿದರು.
ಈ ಕಾರ್ಯಕ್ರಮದಲ್ಲಿ ಆಯುಷ್ ಫೆಡರೇಷನ್‌ನ ಉಪಾಧ್ಯಕ್ಷ ಡಾ. ಸುರೇಶ್ ನೆಗಳಗುಳಿ, ಉಡುಪಿ ಘಟಕದ ಅಧ್ಯಕ್ಷ ಡಾ. ನಾರಾಯಣ ಟಿ. ಅಂಚನ್ ಸೇರಿದಂತೆ ಅನೇಕ ಪ್ರಮುಖ ಗಣ್ಯರು ಹಾಗೂ ವೈದ್ಯಕೀಯ ಕ್ಷೇತ್ರದ ಹಿರಿಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.
ಕಾರ್ಯದರ್ಶಿ ಡಾ ಧನಂಜಯ ಅವರು ವರದಿ ವಾಚಿಸಿದರು. ಅಧ್ಯಕ್ಷ ಡಾ ಕೃಷ್ಣ ಗೋಖಲೆ ಅಧ್ಯಕ್ಷ ಭಾಷಣ ಮಾಡಿದರು. ಡಾ ಜ್ಯೋತಿ ಕಾರ್ಣಿಕ ಸ್ವಾಗತ ಭಾಷಣ ಮತ್ತು ಡಾ ವಹೀದ ನಿರೂಪಣೆ ಮಾಡಿದರು.
