ಮಂಗಳೂರು: ಮೂವರು ಖ್ಯಾತ ವೈದ್ಯರಿಗೆ ಶಿಕ್ಷಕರ ದಿನಾಚರಣೆ ಪ್ರಶಸ್ತಿ ಪ್ರದಾನ

Upayuktha
0


ಮಂಗಳೂರು: "ಶಿಕ್ಷಕರ ವೃತ್ತಿಯು ಅತ್ಯಂತ ಶ್ರೇಷ್ಠ ಹಾಗೂ ಗೌರವಾನ್ವಿತವಾದದ್ದು. ಅವರ ಪ್ರಾಮಾಣಿಕತೆ, ನಿಸ್ವಾರ್ಥ ಸೇವೆ, ಕರ್ತವ್ಯ ನಿಷ್ಠೆ ಮತ್ತು ಸಮಯಪ್ರಜ್ಞೆ ಸಮಾಜದಲ್ಲಿ ಅವರಿಗೆ ಉನ್ನತ ಸ್ಥಾನವನ್ನು ತಂದುಕೊಟ್ಟಿದೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಶ್ರದ್ಧೆಯಿಂದ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಉತ್ತಮ ಪ್ರಜೆಗಳನ್ನು ರೂಪಿಸುವ ಶಿಕ್ಷಕರ ಪಾತ್ರ ಅಮೂಲ್ಯವಾದದ್ದು," ಎಂದು ಖ್ಯಾತ 'ಕಾಂತಾರ' ಚಲನಚಿತ್ರ ನಟಿ ಹಾಗೂ ಶಾಸ್ತ್ರೀಯ ನೃತ್ಯ ಕಲಾವಿದೆ ಶ್ರೀಮತಿ ಮಾನಸಿ ಸುಧೀರ್ ಅಭಿಪ್ರಾಯಪಟ್ಟರು.


ಭಾರತೀಯ ವೈದ್ಯಕೀಯ ಸಂಘ (IMA) ಮಂಗಳೂರು ಶಾಖೆ ಹಾಗೂ ವೈದ್ಯಕೀಯ ಶಾಸ್ತ್ರ ತಜ್ಞರ ಸಂಘದ ಜಂಟಿ ಆಶ್ರಯದಲ್ಲಿ ಸೆಪ್ಟೆಂಬರ್ 7ರಂದು ನಗರದ ಡಾ. ಎ.ವಿ. ರಾವ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಶಿಕ್ಷಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.




ಕಾರ್ಯಕ್ರಮವನ್ನು ಬೆಂಗಳೂರು (ಪಶ್ಚಿಮ) ಮೂಲದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಉದ್ಘಾಟಿಸಿ ಶುಭಕೋರಿದರು. ಗೌರವ ಅತಿಥಿಯಾಗಿ ಆಗಮಿಸಿದ್ದ ನಗರದ ತೇಜಸ್ವಿನಿ ಆಸ್ಪತ್ರೆಯ ನಿರ್ದೇಶಕ ಡಾ. ಶಾಂತರಾಮ್ ಶೆಟ್ಟಿ ಮಾತನಾಡಿ, "ಶಿಕ್ಷಕರು ವಿದ್ಯಾರ್ಥಿಗಳ ಅಜ್ಞಾನದ ಕತ್ತಲೆಯನ್ನು ಓಡಿಸಿ ಜ್ಞಾನದ ಜ್ಯೋತಿಯನ್ನು ಬೆಳಗಿಸುವ ದಿವ್ಯ ಶಕ್ತಿ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೇಧಾವಿಗಳು" ಎಂದರು.


ಇದೇ ಸಂದರ್ಭದಲ್ಲಿ ಡಾ. ಅನಿಮೇಶ್ ಜೈನ್ ಸಂಪಾದಕತ್ವದ ಗೃಹವಾರ್ತಾ ಪತ್ರಿಕೆ ‘ಮೆಡಿಲೋರ್’ ಅನ್ನು ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ನೆಪ್ರೊ ಯುರೋಲೊಜಿ ಸಂಸ್ಥೆಯ ಪ್ರಾಧ್ಯಾಪಕ ಡಾ. ಶಿವಲಿಂಗಯ್ಯ ಎಂ. ಬಿಡುಗಡೆಗೊಳಿಸಿದರು. ತುಮಕೂರಿನ ಡಾ. ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ನಾಗರಾಜ್ ರಾವ್ ಎ. ಪ್ರಾಸ್ತಾವಿಕವಾಗಿ ಮಾತನಾಡಿದರು.


ಸಾಧಕ ವೈದ್ಯರಿಗೆ ಗೌರವ:

ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆ ಮತ್ತು ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಮೂವರು ಖ್ಯಾತ ವೈದ್ಯರಿಗೆ 'ಶಿಕ್ಷಕರ ದಿನಾಚರಣೆ ಪ್ರಶಸ್ತಿ' ನೀಡಿ ಗೌರವಿಸಲಾಯಿತು:


ಡಾ. ಆನಂದ ಬಂಗೇರ– ಅರಿವಳಿಕೆ ಶಾಸ್ತ್ರ ಪ್ರಾಧ್ಯಾಪಕರು, ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜು.

ಡಾ. ರಂಜಿತ್ ಶೆಟ್ಟಿ– ಮೂತ್ರರೋಗ ಶಾಸ್ತ್ರ ಶಸ್ತ್ರಚಿಕ್ಕಿತ್ಸೆ ಪ್ರಾಧ್ಯಾಪಕರು, ಕೆ.ಎಂ.ಸಿ. ವೈದ್ಯಕೀಯ ಕಾಲೇಜು.

ಡಾ. ಶಾರದಾ ರೈ– ರೋಗಲಕ್ಷಣ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರು, ಕೆ.ಎಂ.ಸಿ. ವೈದ್ಯಕೀಯ ಕಾಲೇಜು.


ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಸದಾನಂದ ಪೂಜಾರಿ ಸ್ವಾಗತಿಸಿ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ವೇದಿಕೆಯಲ್ಲಿ ನಿಯೋಜಿತ ಅಧ್ಯಕ್ಷ ಡಾ. ಉಲ್ಲಾಸ್ ಶೆಟ್ಟಿ, ಕೋಶಾಧಿಕಾರಿ ಡಾ. ಜ್ಯೂಲಿಯನ್ ಸಲ್ಡಾನಾ, ವೈದ್ಯಕೀಯ ಶಾಸ್ತ್ರ ತಜ್ಞರ ಸಂಘದ ಅಧ್ಯಕ್ಷ ಡಾ. ಪ್ರಶಾಂತ್, ಕಾರ್ಯದರ್ಶಿ ಡಾ. ಸನ್ಮನ್ ಕೆ.ಎನ್. ಹಾಗೂ ಕೋಶಾಧಿಕಾರಿ ಡಾ. ಅನುರಾಗ್ ಜೆ. ಶೆಟ್ಟಿ ಉಪಸ್ಥಿತರಿದ್ದರು.


ಸಂಘದ ಕಾರ್ಯದರ್ಶಿ ಡಾ. ಪ್ರಕಾಶ್ ಹರಿಶ್ಚಂದ್ರ ವಂದಿಸಿದರು. ಶ್ರೀಮತಿ ಅಕ್ಷತಾ ಕಾರ್ಯಕ್ರಮವನ್ನು ನಿರೂಪಿಸಿದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top