ಪರ್ಕಳ: ಸಾಕ್ಷರತಾ ಮಾಸಾಚರಣೆಯ ಅಂಗವಾಗಿ ರೋಟರಿ ಐಸಿರಿ ಪರ್ಕಳ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಸರಕಾರಿ ಸಂಯುಕ್ತ ಪ್ರೌಢಶಾಲೆ ಶೆಟ್ಟಿಬೆಟ್ಟು ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿಯ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಸೆ.17ರಂದು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ., ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮನೆಯೇ ಗ್ರಂಥಾಲಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದಲ್ಲದೇ ಸುಮಾರು 220ಕ್ಕೂ ಅಧಿಕ ಗ್ರಂಥಾಲಯಗಳ ರೂಪಿಸಿ ಪುಸ್ತಕಗಳನ್ನು ನೀಡಲಾಗಿದೆ. ಶಾಲೆಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿರುವುದು ಶ್ಲಾಘನೀಯ ಎಂದರು.
ರೋಟರಿ ಐಸಿರಿ ಪರ್ಕಳ ಅಧ್ಯಕ್ಷ ಸಂದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕ.ಸಾ.ಪ. ಗೌರವ ಕಾರ್ಯದರ್ಶಿ ಜನಾದ೯ನ್ ಕೊಡವೂರು, ಕಾರ್ಯದರ್ಶಿ ರಾಜೇಶ್ ಡಿ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕರುಗಳಾದ ರಾಮಕೃಷ್ಣ ನಾಯಕ್ ಮತ್ತು ಸರಸ್ವತಿಯವರು ಪುಸ್ತಕ ಕೊಡುಗೆಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೋಟರಿ ಐಸಿರಿ ಪರ್ಕಳಕ್ಕೆ ಕೃತಜ್ಞತೆ ಸಲ್ಲಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಘಟಕದ ಗೌರವ ಕಾರ್ಯದರ್ಶಿ ರಂಜಿನಿ ವಸಂತ್, ಸಾಂಸ್ಕೃತಿಕ ಕಾರ್ಯದರ್ಶಿ ವಸಂತ್, ಮನೆಯೇ ಗ್ರಂಥಾಲಯ ಅಭಿಯಾನ ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು, ದೀಪಾ ಕರ್ಕಿ, ರೋಟರಿ ಲೀಡರ್ಶಿಪ್ ಇನ್ಸ್ಟಿಟ್ಯೂಟ್ ಜಿಲ್ಲಾ ಸಭಾಪತಿ ಮಂಜುನಾಥ ಉಪಾಧ್ಯ, ಉಪಾಧ್ಯಕ್ಷ ಕೆ. ಪ್ರಕಾಶ್ ಶೆಣೈ, ಕ್ರೀಡಾ ಸಂಯೋಜಕ ಅಶೋಕ್ ನಾಯಕ್ ಮತ್ತು ಶಾಲಾ ಅಧ್ಯಾಪಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
