ಬಾಗಲಕೋಟೆ: ಸಂಸ್ಥೆಯ ಜನ್ಮದಿನವೇ ನಮ್ಮೆಲ್ಲರ ಜನ್ಮದಿನ ಎಂದು ಬಾಗಲಕೋಟೆ ಶಾಖೆಯ ಶಾಖಾಧಿಕಾರಿ ಎಂ.ಡಿ. ರಕ್ಷಿತ್ ಭಾವನಾತ್ಮಕವಾಗಿ ನುಡಿದರು.
ನಗರದ ಎಲ್.ಐ.ಸಿ. ಶಾಖೆಯಲ್ಲಿ ಸೋಮವಾರ ಆಯೋಜಿಸಿದ್ದ ಭಾರತೀಯ ಜೀವ ವಿಮಾ ನಿಗಮದ 70ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ಇತಿಹಾಸ ಮತ್ತು ರಾಷ್ಟ್ರ ನಿರ್ಮಾಣದಲ್ಲಿನ ಪಾತ್ರವನ್ನು ವಿವರಿಸಿದರು.
"ನಮ್ಮ ಹುಟ್ಟುಹಬ್ಬವನ್ನು ನಾವು ಆಚರಿಸುತ್ತೇವೆ, ಆದರೆ ನಮಗೆ ಜನ್ಮ ನೀಡಿದ ತಾಯಿಯ ಹುಟ್ಟುಹಬ್ಬವನ್ನು ಮರೆಯುತ್ತೇವೆ. ಮಗುವಿಗೆ ಜನ್ಮ ನೀಡಿದಾಗ ತಾಯಿ ಮರುಜನ್ಮ ಪಡೆಯುತ್ತಾಳೆ. ಅದೇ ರೀತಿ ನಮಗೆಲ್ಲರಿಗೂ ಬದುಕು, ಆಸರೆ ನೀಡಿದ ಈ ಸಂಸ್ಥೆ ನಮ್ಮ ತಾಯಿ ಇದ್ದಂತೆ" ಎಂದು ಹೇಳಿದರು.
1947ರಲ್ಲಿ ಸ್ವಾತಂತ್ರ್ಯ ನಂತರ ಆಂತರಿಕ ಹಣಕಾಸು ಸಂಪನ್ಮೂಲದ ಅವಶ್ಯಕತೆ ಇತ್ತು. 1870ರಿಂದ ವಿಮಾ ಪದ್ಧತಿ ಇದ್ದರೂ ಅದು ಶ್ರೀಮಂತರಿಗೆ ಮಾತ್ರ ಸೀಮಿತವಾಗಿತ್ತು. ಇದನ್ನು ಮನಗಂಡ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಮತ್ತು ಹಣಕಾಸು ಸಚಿವ ಸಿ.ಡಿ. ದೇಶಮುಖ್ ಅವರು ಎಲ್.ಐ.ಸಿ. ಕಾಯ್ದೆ ಜಾರಿಗೆ ತಂದರು.
1956ರ ಸೆಪ್ಟೆಂಬರ್ 1ರಂದು 174 ಖಾಸಗಿ ವಿಮಾ ಕಂಪನಿ ಮತ್ತು 74 ಪ್ರಾವಿಡೆಂಟ್ ಸಂಸ್ಥೆಗಳನ್ನು ವಿಲೀನಗೊಳಿಸಿ, ಮುಂಬೈನ ಯೋಗಕ್ಷೇಮ ಕಟ್ಟಡದಲ್ಲಿ ಕೇವಲ 5 ಕೋಟಿ ರೂ. ಮೂಲ ಬಂಡವಾಳದೊಂದಿಗೆ ಎಲ್.ಐ.ಸಿ. ಆರಂಭವಾಯಿತು. ಅಂದಿನಿಂದ ಲಾಭದಲ್ಲಿ ಶೇ.5ರಷ್ಟನ್ನು ಸರ್ಕಾರಕ್ಕೆ ಡಿವಿಡೆಂಡ್ ಆಗಿ ನೀಡುತ್ತಾ ಬಂದಿದೆ.
ಇಂದು ದೇಶಾದ್ಯಂತ 2048 ಶಾಖೆಗಳು, 1086 ಉಪ ಶಾಖೆಗಳು, 14.5 ಲಕ್ಷ ಏಜೆಂಟರು ಮತ್ತು 1 ಲಕ್ಷಕ್ಕೂ ಅಧಿಕ ನೌಕರರನ್ನು ಹೊಂದಿದೆ. ಪಾಲಿಸಿದಾರರ ಸಂಖ್ಯೆಯನ್ನು ಒಂದು ದೇಶವೆಂದು ಪರಿಗಣಿಸಿದರೆ ಅದು ವಿಶ್ವದ ನಾಲ್ಕನೇ ಅತಿ ದೊಡ್ಡ ದೇಶವಾಗುತ್ತದೆ ಎಂದು ಅವರು ಹೇಳಿದರು.
ಜನರ ಸಂಪತ್ತನ್ನು ಕಾಯುವ ಟ್ರಸ್ಟಿಗಳಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಆಲಮಟ್ಟಿ ಆಣೆಕಟ್ಟು, ನವನಗರದ ರಸ್ತೆಗಳಂತಹ ಅಭಿವೃದ್ಧಿ ಕಾಮಗಾರಿಗಳಲ್ಲಿ ಎಲ್.ಐ.ಸಿ.ಯ ಸಿಂಹಪಾಲಿದೆ. ನಾವು ಕುಡಿಯುವ ನೀರು, ಸಂಚರಿಸುವ ರಸ್ತೆಯ ಹಿಂದೆ ಪಾಲಿಸಿದಾರರ ಬೆವರಿನ ಹಣವಿದೆ ಎಂಬುದು ಹೆಮ್ಮೆಯ ವಿಷಯ ಎಂದು ತಿಳಿಸಿದರು., ವೇದಿಕೆಯಲ್ಲಿ ಉಪ ಶಾಖಾಧಿಕಾರಿ ಉಮೇಶ ಬಡಿಗೇರ ಆಡಳಿತ ಅಧಿಕಾರಿ ಶ್ರೀಮತಿ ರೋಹಿಣಿ ಬೀಳಿಗಿ, ವಿಮಾ ನೌಕರರ ಸಂಘದ ಕಾರ್ಯದರ್ಶಿ ಅಶೋಕ ಬಾದಾಮಿ ಅಭಿವೃದ್ಧಿ ಅಧಿಕಾರಿಗಳಾದ ವಿ ಎಸ್ ನಾಯಕ್ ಕೆ ದಯಾನಂದ, ಲಿಯಾಪಿ ಬಾಗಲಕೋಟ ಶಾಖೆಯ ಅಧ್ಯಕ್ಷ ಎಂ ವೈ ಹುಲ್ಲಿಕೇರಿ ಪ್ರತಿನಿಧಿಗಳಾದ ಈಶ್ವರ್ ಕೊಣಪ್ಪನವರ್ ಜಗದೀಶ್ ಹದಿ, ಇತರ ಪ್ರತಿನಿಧಿಗಳು ಹಾಗೂ ಶಾಖೆಯ ಸಿಬ್ಬಂದಿಗಳು ಸೇರಿದಂತೆ ನೂರಾರು ಪಾಲಿಸಿದಾರರು ಸಮ್ಮುಖದಲ್ಲಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು ಉಪ ಶಾಖಾಧಿಕಾರಿ , ಉಮೇಶ ಬಡಿಗೇರ ಸ್ವಾಗತಿಸಿ ವಂದಿಸಿದರು
ಇದೇ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಮೊದಲಿಗರಾಗಿ ವಿಮಾ ಕಂತು ಪಾವತಿಸಿದ ಹಿರಿಯ ಪಾಲಿಸಿದಾರ ಮಾನಪ್ಪ ಗೌಡರ ಹಾಗೂ ಸಂಸ್ಥೆಯ ಬೆಳವಣಿಗೆಯಲ್ಲಿ ಶ್ರಮಿಸಿದ ನಿವೃತ್ತ ನೌಕರರಾದ ಎಂ.ಟಿ. ಬಡಿಗೇರ, ಸಿ.ಸಿ. ಕೋರೆಗಳ, ವಿ.ಬಿ. ಪಾಟೀಲ ಮತ್ತು ಕೆ.ಕೆ. ಪತಂಗೆ ಅವರನ್ನು ಸನ್ಮಾನಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

