ಉಡುಪಿ: ಇಂದಿನ ಸಂದರ್ಭದಲ್ಲಿ ಭಾಷಾ ಕಲಿಕೆ ಶಿಕ್ಷಕ ಕೇಂದ್ರಿತವಾಗಿದ್ದು ಅದು ವಿದ್ಯಾರ್ಥಿ ಕೇಂದ್ರೀತವಾಗಬೇಕು. ವಿವಿಧ ಭಾಷೆಗಳನ್ನು ಕಲಿಯುವರ ಆಸಕ್ತಿಗೆ ಅನುಗುಣವಾಗಿ ಭಾಷಾ ಕಲಿಕಾ ವಿನ್ಯಾಸಗಳು ರೂಪುಗೊಳ್ಳ ಬೇಕಾಗಿದೆ ಎಂದು ಮಣಿಪಾಲ ಮಾಹೆ ವಿಶ್ವ ವಿದ್ಯಾನಿಲಯದ ಭಾಷಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪೃಥ್ವೀರಾಜ್ ಕವತ್ತಾರ್ ನುಡಿದರು.
ಅವರು ಮಂಗಳೂರು ವಿಶ್ವ ವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಗಿಳಿವಿಂಡು ಮತ್ತು ಉಡುಪಿ ಎಂ.ಜಿ.ಎಂ ಕಾಲೇಜಿನ ಸಾಹಿತ್ಯ ಸಂಘ, ಕನ್ನಡ ವಿಭಾಗ ಮತ್ತು ಐಕ್ಯುಎಸಿ ಸಹಯೋಗದಲ್ಲಿ ಎಂಜಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ಗಿಳಿವಿಂಡು ಯಾನ ಮರಳಿ ಮನೆಗೆ ಬಾರಿಸು ಕನ್ನಡ ಡಿಂಡಿಮವ ವಿಶೇಷ ಉಪನ್ಯಾಸ ಸರಣಿಯಲ್ಲಿ 'ಭಾಷಾ ಕಲಿಕೆ- ಹೊಸ ಕಾಲದ ಒಲವುಗಳು 'ಕುರಿತು ಮಾತನಾಡಿದರು.
ಗಿಳಿವಿಂಡು ಅಧ್ಯಕ್ಷ ಡಾ. ಬಿ. ಶಿವರಾಮ ಶೆಟ್ಟಿ ಮಾತನಾಡಿ ಭಾಷಾ ಕಲಿಕೆಯ ವಿವಿಧ ಸಾಧ್ಯತೆಗಳನ್ನು ಕಂಡು ಕೊಂಡು ಭಾಷೆಯನ್ನು ವಿದ್ಯಾರ್ಥಿಗಳಿಗೆ ತಲುಪಿಸ ಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ. ಗಾಯತ್ರಿ ಪೈ ಮಾತನಾಡಿ, ವಿದ್ಯಾರ್ಥಿಗಳು ಭಾಷೆ ಕಲಿಕೆಯನ್ನು ಆಸಕ್ತಿಯಿಂದ ಅಧ್ಯಯನ ನಡೆಸಬೇಕು ಎಂದರು.
ಕಾಲೇಜಿನ ಉಪ ಪ್ರಾಂಶುಪಾಲ ಡಾ. ವಿಶ್ವನಾಥ ಎಂ. ಪೈ ಶುಭ ಹಾರೈಸಿದರು. ಗಿಳಿವಿಂಡು ಸದಸ್ಯ ಕೃಷ್ಣಮೂರ್ತಿ ಪ್ರಾಸ್ತಾವಿಕ ಮಾತುಗಳನ್ನು ನುಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಪುತ್ತಿ ವಸಂತ ಕುಮಾರ್ ಸ್ವಾಗತಿಸಿದರು. ಪ್ರಾಧ್ಯಾಪಕ ರಾಘವೇಂದ್ರ ತುಂಗ ಕೆ. ವಂದಿಸಿದರು.
