ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿಯಲ್ಲಿ 'ಐಸ್ಯಾಪ್-2026' ತಾಂತ್ರಿಕ ವಿಚಾರ ಸಂಕಿರಣ

Upayuktha
0


ಸುರತ್ಕಲ್: ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಸಭಾಂಗಣದಲ್ಲಿ ಇತ್ತೀಚೆಗೆ 'ಐಸ್ಯಾಪ್-2026' (ಇಂಫಾರ್ಮೇಷನ್ ಸರ್ಚ್ ಅನಾಲಿಸಿಸ್ ಆಂಡ್ ಪ್ರೆಸೆಂಟೇಷನ್) ತಾಂತ್ರಿಕ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಯಿತು. ಕಾಲೇಜಿನ ಮುಖ್ಯಸ್ಥರಾದ ಡಾ. ರಾಮಕೃಷ್ಣ ಎನ್. ಹೆಗಡೆ ಯವರು ಸಾಂಪ್ರದಾಯಿಕವಾಗಿ ದೀಪವನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವಿಚಾರ ಸಂಕಿರಣದಲ್ಲಿ ಸಂಸ್ಥೆಯ ದ್ವಿತೀಯ ವರ್ಷದ ಸುಮಾರು 270ಕ್ಕೂ ಅಧಿಕ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಿ, ವಿವಿಧ ಆಧುನಿಕ ತಾಂತ್ರಿಕ ವಿಷಯಗಳ ಕುರಿತು ತಮ್ಮ ಅಧ್ಯಯನ ಪೂರ್ಣ ಪ್ರಸ್ತುತಿಗಳನ್ನು ಮಂಡಿಸಿದರು.


ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ. ಪ್ರವೀಣ್ ಬಿ. ಎಂ. ರವರು, ಕಳೆದ 16 ವರ್ಷಗಳಿಂದ ಕಾಲೇಜಿನಲ್ಲಿ ಯಶಸ್ವಿಯಾಗಿ ಆಯೋಜಿಸಲ್ಪಡುತ್ತಿರುವ ಐಸ್ಯಾಪ್ ವಿಚಾರ ಸಂಕಿರಣದಲ್ಲಿ ಈಗಾಗಲೇ ಸಾವಿರಾರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಪ್ರಬಂಧಗಳನ್ನು ಮಂಡಿಸಿದ್ದಾರೆ ಎಂದರು. ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿಪರ ಅಭಿವೃದ್ಧಿಯಲ್ಲಿ ಸಂಶೋಧನೆಯು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿಷ್ಠಿತ ಜರ್ನಲ್‌ಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ರಚಿಸಿ ಪ್ರಕಟಿಸಲು ಐಸ್ಯಾಪ್ ಚಟುವಟಿಕೆಯು ಸೂಕ್ತ ಮಾರ್ಗದರ್ಶನ ನೀಡಲಿದ್ದು, ವಿದ್ಯಾರ್ಥಿಗಳಲ್ಲಿ ಬಲವಾದ ಸಂಶೋಧನಾ ಮನೋಭಾವ ಬೆಳೆಸಲು ಇದು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.


ಬೆಳೆಯುತ್ತಿರುವ ತಂತ್ರಜ್ಞಾನದ ಮಹತ್ವದ ಕುರಿತು ಅಧ್ಯಕ್ಷೀಯ ಭಾಷಣ ಮಾಡಿದ ಡಾ. ರಾಮಕೃಷ್ಣ ಎನ್. ಹೆಗಡೆ ಯವರು, ಜಗತ್ತಿನ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳ ಪಾತ್ರ ಹಿರಿದಾದುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪೇಟೆಂಟ್‌ಗಳು ಹಾಗೂ ಸಂಶೋಧನಾ ಪ್ರಕಟಣೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಈ ಬಾರಿಯ ಐಸ್ಯಾಪ್ ಕಾರ್ಯಕ್ರಮವನ್ನು ಜಾಗತಿಕ ಮಟ್ಟದ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ (SDGs) ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ವಿಶ್ವಸಂಸ್ಥೆ ಗುರುತಿಸಿರುವ 17 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ವಿಷಯಗಳನ್ನು ಆಯ್ಕೆ ಮಾಡಿಕೊಂಡು, ಐಇಇಇ ಅಥವಾ ಸ್ಕೂಪಸ್ ಸೂಚ್ಯಂಕಿತ ಜರ್ನಲ್‌ಗಳಲ್ಲಿ ಪ್ರಕಟಗೊಂಡ ಲೇಖನಗಳ ಆಧಾರದ ಮೇಲೆ ಪ್ರಸ್ತುತಿ ನೀಡಲು ಸೂಚಿಸಲಾಗಿದೆ. ಇದು ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನಾ ಕೌಶಲ್ಯವನ್ನು ಹೆಚ್ಚಿಸಲಿದೆ ಎಂದು ಅವರು ತಿಳಿಸಿದರು.


ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿ ಕುಮಾರಿ ಧನ್ಯಶ್ರೀ ರಾವ್ ಪ್ರಾರ್ಥಿಸಿದರು. ಐಸ್ಯಾಪ್ ಕಾರ್ಯಕ್ರಮದ ಸಂಚಾಲಕರಾದ ಪ್ರೊ. ವರ್ಷಾ ಗಂಗಾಧರ್ ಬಂಗೇರ ರವರು ಎಲ್ಲರನ್ನೂ ಸ್ವಾಗತಿಸಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಸಂಯೋಜಕಿ ಕುಮಾರಿ ಧನ್ಯಶ್ರೀ ರಾವ್ ಉಪಸ್ಥಿತರಿದ್ದರು. ಪ್ರೊ. ರೋಹನ್ ಫೆರ್ನಾಂಡಿಸ್ ಮತ್ತು ಪ್ರೊ. ಅಮೃತಾ ಕಿಂಡಾಲ್ಕರ್ ಕಾರ್ಯಕ್ರಮವನ್ನು ನಿರೂಪಿಸಿದರೆ, ಪ್ರೊ. ವರ್ಷಾ ಶೆಟ್ಟಿ ಅಡ್ಕಸ್ಥಳ ರವರು ವಂದನಾರ್ಪಣೆ ಸಲ್ಲಿಸಿದರು. ಸಮಾರಂಭದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top