ಹಿರಿಯರ ಸ್ಮರಣಸೂಚಕ 'ಶ್ರಾದ್ಧ' ಮತ್ತು 'ಪಿತೃ ಪಕ್ಷ'

Upayuktha
0


ಶ್ರಾದ್ಧ ಎಂದರೇನು?: ಒಬ್ಬ ವ್ಯಕ್ತಿ ತೀರಿಹೋದಾಗ, ಆ ವ್ಯಕ್ತಿಯ ನೆನಪಿನಲ್ಲಿ ವರ್ಷದಲ್ಲಿ ಎರಡು ಬಾರಿ ಎಳ್ಳು (ಕರಿಎಳ್ಳು), ಅನ್ನ ಹಾಗೂ ನೀರನ್ನು (ತರ್ಪಣ) ಶ್ರದ್ಧೆಯಿಂದ ಸಮರ್ಪಿಸಬೇಕಾಗುತ್ತದೆ.


ಕಾಲಶ್ರಾದ್ಧ: ವ್ಯಕ್ತಿ ತೀರಿಹೋದ ತಿಥಿಗೆ ಅನುಗುಣವಾಗಿ ಪ್ರತಿ ವರ್ಷ ಮಾಡುವ ಶ್ರಾದ್ಧ. ಇಲ್ಲಿ ತೀರಿಹೋದ ವ್ಯಕ್ತಿಯ ಜೊತೆಗೆ ಅವರ ಹಿಂದಿನ ಮೂರು ತಲೆಮಾರಿನ ಹಿರಿಯರನ್ನು ಶ್ರದ್ಧೆಯಿಂದ ಸ್ಮರಿಸಲಾಗುತ್ತದೆ.


ಶ್ರಾದ್ಧವನ್ನು ಏಕೆ ಮಾಡಬೇಕು?

ನಮ್ಮ ಮನೆತನದ ಹಿರಿಯರು ಎಷ್ಟೋ ವರ್ಷಗಳ ಹಿಂದೆಯೇ ಇಹಲೋಕ ತ್ಯಜಿಸಿರುತ್ತಾರೆ. ಶಾಸ್ತ್ರಗಳ ಪ್ರಕಾರ ಎಂಬತ್ತನಾಲ್ಕು ಲಕ್ಷ ಯೋನಿಗಳಲ್ಲಿ ಮನುಷ್ಯ ಜನ್ಮವೇ ಅತ್ಯಂತ ಶ್ರೇಷ್ಠವಾದದ್ದು. ಏಕೆಂದರೆ ಮನುಷ್ಯನಿಗೆ ಅರಿವು, ಸಾಮರ್ಥ್ಯ ಹಾಗೂ ಯೋಗ್ಯತೆಗಳಿವೆ. ನಮಗೆ ಜನ್ಮ ನೀಡಿದ, ನಮ್ಮ ಏಳಿಗೆಗೆ ಕಾರಣರಾದ ಹಿರಿಯರನ್ನು ಸ್ಮರಿಸಿ ಮಾಡುವ ಈ ಕಾರ್ಯವು ಅತ್ಯಂತ ಪುಣ್ಯದಾಯಕ. ಇದು ನಾವು ಅವರಿಗೆ ಸಲ್ಲಿಸುವ ಕೃತಜ್ಞತೆಯ ಭಾವನಾತ್ಮಕ ಸಂಕೇತ.


ನಾವು ಮಾಡುವ ಶ್ರಾದ್ಧ ಹಿರಿಯರಿಗೆ ಹೇಗೆ ತಲುಪುತ್ತದೆ?

ನಾವು ಶ್ರಾದ್ಧದಲ್ಲಿ ಕೊಡುವ ಅನ್ನ, ತರ್ಪಣ ಮತ್ತು ಪಿಂಡಗಳು ಹಿರಿಯರು ಈಗ ಪಡೆದಿರುವ ಜನ್ಮಕ್ಕೆ ತಕ್ಕಂತೆ ಅವರಿಗೆ ತಲುಪುತ್ತವೆ. ಅಂದರೆ, ಅವರು ಈ ಜನ್ಮದಲ್ಲಿ ಪ್ರಾಣಿ, ಪಕ್ಷಿ ಅಥವಾ ಇನ್ಯಾವುದೇ ಜೀವಿಯಾಗಿ ಹುಟ್ಟಿದ್ದರೂ, ನಾವು ನೀಡುವ ತರ್ಪಣವು ಅವರು ತಿನ್ನುವ ಹುಲ್ಲು, ಹಣ್ಣು ಅಥವಾ ಆಹಾರದ ರೂಪಕ್ಕೆ ಪರಿವರ್ತನೆಯಾಗಿ ಅವರಿಗೆ ತಲುಪುತ್ತದೆ. ಇದರಿಂದ ಅವರ ಪ್ರಸ್ತುತ ಜನ್ಮದ ಜೀವನ ಸುಖಮಯವಾಗುತ್ತದೆ.


ಶ್ರಾದ್ಧದ ಹಿನ್ನೆಲೆ

ಮಹಾಭಾರತ ಯುದ್ಧದಲ್ಲಿ ಅರ್ಜುನನ ಕೈಯಿಂದ ಕರ್ಣನು ಮೃತನಾದಾಗ, ಅವನ ಆತ್ಮವು ಸ್ವರ್ಗಕ್ಕೆ ತೆರಳುತ್ತದೆ. ಆದರೆ ಅಲ್ಲಿ ಕರ್ಣನಿಗೆ ಕೇವಲ ಚಿನ್ನ ಮತ್ತು ಬೆಳ್ಳಿ ಮಾತ್ರ ಸಿಗುತ್ತದೆ; ಆಹಾರ ಸಿಗುವುದಿಲ್ಲ. ಆಗ ಕರ್ಣನು ನೊಂದುಕೊಂಡು ಯಮಧರ್ಮರಾಯನಲ್ಲಿ, "ನಾನು ಭೂಮಿಯಲ್ಲಿದ್ದಾಗ ಅಪಾರ ದಾನ-ಧರ್ಮಗಳನ್ನು ಮಾಡಿದ್ದೇನೆ, ನನಗೇಕೆ ಈ ಗತಿ?" ಎಂದು ಕೇಳುತ್ತಾನೆ.


ಆಗ ಯಮಧರ್ಮರಾಯನು, "ನೀನು ಎಲ್ಲವನ್ನೂ ದಾನ ಮಾಡಿದ್ದೀಯಾ, ಆದರೆ ಅನ್ನದಾನ ಮತ್ತು ಪಿತೃಕರ್ಮಗಳನ್ನು ಮಾಡಲಿಲ್ಲ. ಆ ಕಾರಣಕ್ಕಾಗಿಯೇ ನಿನಗೆ ಈ ಸ್ಥಿತಿ ಬಂದಿದೆ" ಎನ್ನುತ್ತಾನೆ. ಅದಕ್ಕೆ ಪರಿಹಾರವೇನೆಂದು ಕರ್ಣ ಕೇಳಿದಾಗ, ಯಮಧರ್ಮರಾಯನು ಭಾದ್ರಪದ ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗೆ (ಮಹಾಲಯ ಅಮಾವಾಸ್ಯೆ) ಭೂಮಿಗೆ ಮರಳಲು ಸಮಯ ನೀಡುತ್ತಾನೆ. ಆ ಹದಿನೈದು ದಿನಗಳಲ್ಲಿ ಕರ್ಣನು ಭೂಮಿಗೆ ಬಂದು ಅನ್ನದಾನ, ವಸ್ತ್ರದಾನ ಹಾಗೂ ಪಿತೃ ತರ್ಪಣಗಳನ್ನು ನೀಡಿ ಸ್ವರ್ಗಕ್ಕೆ ಹಿಂತಿರುಗುತ್ತಾನೆ. ತದನಂತರ ಅವನಿಗೆ ಸ್ವರ್ಗದಲ್ಲಿ ಆಹಾರ ದೊರೆಯುತ್ತದೆ.


ಪಕ್ಷಮಾಸ (ಪಿತೃಮಾಸ)

ಭಾದ್ರಪದ ಕೃಷ್ಣ ಪಕ್ಷ ಪಾಡ್ಯಮಿಯಿಂದ ಆಶ್ವಯುಜ ಶುಕ್ಲ ಪಾಡ್ಯಮಿಯವರೆಗಿನ 16 ದಿನಗಳನ್ನು 'ಮಹಾಲಯ ತಿಥಿ' ಎನ್ನಲಾಗುತ್ತದೆ.


ಸೂರ್ಯನು ಕನ್ಯಾರಾಶಿಯನ್ನು ಪ್ರವೇಶಿಸಿ, ಮುಂದೆ ವೃಶ್ಚಿಕ ರಾಶಿಗೆ ಹೋಗುವವರೆಗಿನ ಈ ಕಾಲದಲ್ಲಿ ಪಿತೃಲೋಕವು ಭೂಮಿಗೆ ಅತ್ಯಂತ ಸಮೀಪದಲ್ಲಿರುತ್ತದೆ. ಈ ದೃಷ್ಟಿಯಿಂದ ಭಾದ್ರಪದದ ಅಪರ ಪಕ್ಷ (ಕೃಷ್ಣ ಪಕ್ಷ)ದ ಹದಿನೈದು ದಿನಗಳನ್ನು 'ಮಹಾಲಯ' ಅಥವಾ 'ಪಿತೃ ಪಕ್ಷ' ಎಂದು ಕರೆಯಲಾಗುತ್ತದೆ.


ಇಲ್ಲಿ ತೀರಿಹೋದ ವ್ಯಕ್ತಿಯ ಜೊತೆಗೆ, ತಮ್ಮ ಸಮಸ್ತ ವಂಶಜರ ಹಾಗೂ ಸರ್ವ ಪಿತೃಗಳ ಸ್ಮರಣೆ ಮಾಡಿ ತಿಲೋದಕ (ಎಳ್ಳು-ನೀರು) ಬಿಡಲಾಗುತ್ತದೆ.


ಪಕ್ಷಮಾಸದ ನಿಯಮಗಳು

ಪಿತೃ ಪಕ್ಷದಲ್ಲಿ ಮಾಡುವ ಶ್ರಾದ್ಧದಲ್ಲಿ ಸರ್ವ ಪಿತೃಗಳನ್ನು ಸ್ಮರಿಸಿ ತರ್ಪಣ ನೀಡಲಾಗುತ್ತದೆ. ಈ ಕಾರ್ಯದ ಅಧಿಪತಿ ದೇವತೆಗಳು 'ಧೂರಿ' ಮತ್ತು 'ವಿಲೋಚನ'. ಇಲ್ಲಿ ಮೂರು ತಲೆಮಾರಿನ ಪಿತೃಗಳನ್ನು ಸ್ಮರಿಸಿ ಸಾಮೂಹಿಕವಾಗಿ ಎಳ್ಳು, ಜಲ, ತರ್ಪಣ ಹಾಗೂ ಪಿಂಡ ಪ್ರದಾನ ಮಾಡಲಾಗುತ್ತದೆ.


ಈ ಮೂರು ತಲೆಮಾರಿನ ಪಿತೃಗಳ ಸೂಕ್ಷ್ಮ ಶರೀರಗಳು ಭೂಮಿ ಮತ್ತು ಸ್ವರ್ಗದ ಮಧ್ಯದ ಲೋಕದಲ್ಲಿರುತ್ತವೆ. ಈ ಶ್ರಾದ್ಧ ಕಾಲದಲ್ಲಿ ಜನಾರ್ದನ ರೂಪಿಯಾದ ಪರಮಾತ್ಮನು 3555 ರೂಪಗಳಲ್ಲಿ ಇರುತ್ತಾನೆ. ಹಾಗೆಯೇ ಭಗವಂತನು ಅನಿರುದ್ಧ, ಪ್ರದ್ಯುಮ್ನ, ಸಂಕರ್ಷಣ, ವಾಸುದೇವ ಹಾಗೂ ನಾರಾಯಣ ಎಂಬ ಪಂಚ ರೂಪಗಳಲ್ಲಿಯೂ ನೆಲೆಸಿರುತ್ತಾನೆ.


ಹರಿಕಥಾಮೃತಸಾರದ ಉಲ್ಲೇಖ:

ಜಗನ್ನಾಥ ದಾಸರು ತಮ್ಮ ಹರಿಕಥಾಮೃತಸಾರದ 'ಭೋಜನ ಸಂಧಿ'ಯ 21ನೇ ನುಡಿಯಲ್ಲಿ ಹೇಳಿರುವಂತೆ:


ಶ್ರಾದ್ಧಗತ ಭಗವದ್ರೂಪಗಳಲ್ಲಿ ಅನಿರುದ್ಧ ರೂಪಿಯಾದ ಪರಮಾತ್ಮನು ತ್ರಿನವತಿ (93) ರೂಪಗಳಲ್ಲಿ ಇರುತ್ತಾನೆ (ವಸುಗಳು - 08, ರುದ್ರರು - 11, ಆದಿತ್ಯರು - 12 = ಒಟ್ಟು 31 ರೂಪಗಳು. ಇದನ್ನು ಅನಿರುದ್ಧ, ಪ್ರದ್ಯುಮ್ನ, ಸಂಕರ್ಷಣ ಎಂಬ 3 ನಾಮಗಳಿಂದ ಗುಣಿಸಿದಾಗ 93 ರೂಪಗಳಾಗುತ್ತವೆ).


ಶ್ರಾದ್ಧ ಮಾಡುವ ಯಜಮಾನನಲ್ಲಿ ಈ ವಸು, ಆದಿತ್ಯ ಮತ್ತು ರುದ್ರರ ಮೂಲಕ ಪಿತೃಗಳಿಗೆ ಪ್ರದ್ಯುಮ್ನ ರೂಪದಿಂದ ಭಗವಂತನು ಅನ್ನರೂಪಿಯಾಗಿದ್ದಾನೆ.


ಸಂಕರ್ಷಣ ರೂಪದಿಂದ ದೇವಭಾಗ ಮತ್ತು ಪಿತೃಭಾಗ ಎಂದು ವಿಭಾಗ ಮಾಡುತ್ತಾನೆ. ತುರ್ಯ ನಾಮಕನಾದ ವಾಸುದೇವನ ಮೂಲಕ ತಾನು ಸ್ವೀಕರಿಸಿ, ಸಕಲರಿಗೂ ಉಣಿಸುತ್ತಾನೆ.


ಭೋಜನ ಸಂಧಿಯ 22ನೇ ನುಡಿಯಲ್ಲಿ ವಿವರಿಸಿದಂತೆ, ಭಗವಂತನು ಷಣ್ಣವತಿ (96) ರೂಪದಿಂದ ವಸು, ರುದ್ರ ಮತ್ತು ಭಾಸ್ಕರರಲ್ಲಿ ನಿಂತು ಶರಣಾಗತರನ್ನು ನಿತ್ಯವೂ ಕಾಪಾಡುತ್ತಾ, ಅವರ ಪುಣ್ಯಕರ್ಮಗಳನ್ನು ಸ್ವೀಕರಿಸಿ ಪಿತೃಗಳಿಗೆ ಸುಖ ನೀಡುತ್ತಾನೆ.


ಭಗವಂತನ ಷಣ್ಣವತಿ (96) ರೂಪಗಳ ಲೆಕ್ಕಾಚಾರ:

ವಸುಗಳು (8) + ಏಕಾದಶ ರುದ್ರರು (11) + ದ್ವಾದಶ ಆದಿತ್ಯರು (12) = 31 ರೂಪಗಳು. ಇದನ್ನು ಸಾತ್ವಿಕ (ವೈಕಾರಿಕ), ರಾಜಸ (ತೈಜಸ), ಹಾಗೂ ತಾಮಸ ಎಂಬ 3 ಗುಣಗಳಿಂದ ಗುಣಿಸಿದಾಗ 93 ಬರುತ್ತದೆ. ಈ 93 ರೂಪಕ್ಕೆ ಮೂಲ 3 ಗುಣಗಳನ್ನು ಕೂಡಿಸಿದಾಗ 96 (ಷಣ್ಣವತಿ) ಆಗುತ್ತದೆ.


ಸಪ್ತಾನ್ನಗಳು (ಏಳು ಬಗೆಯ ಅನ್ನ):

ಮನಸ್ಸು, ವಾಕ್, ಪ್ರಾಣ, ಅನ್ನಬಲಿ, ಹೋಮ, ಹಾಲು ಮತ್ತು ಸ್ವಧಾ - ಇವೇ ಸಪ್ತಾನ್ನಗಳು.

ಸ್ವಾಹಾ ಮಾಯಾಪತಿ ವಾಸುದೇವ: ದೇವತೆಗಳಿಗೆ ಅನ್ನವನ್ನು ಕಲ್ಪಿಸಿ ಬಡಿಸುವನು.

ಸ್ವಧಾ ಜಯಾಪತಿ ಸಂಕರ್ಷಣ: ಪಿತೃಗಳಿಗೆ ಅನ್ನ ಕಲ್ಪಿಸಿ ತೃಪ್ತಿಪಡಿಸುವನು.

ಕೃತಿಪತಿ ಪ್ರದ್ಯುಮ್ನ: ಚತುರ್ವಿಧ ರಸಗಳಲ್ಲಿ ಅನ್ನ ಕಲ್ಪಿಸಿ ಮನುಷ್ಯರಿಗೆ ತೃಪ್ತಿ ನೀಡುವನು.

ಶಾಂತಿಪತಿ ಅನಿರುದ್ಧ: ಅನ್ನ ಕಲ್ಪಿಸಿ ಪಶು-ಪಕ್ಷಿಗಳಿಗೆ ತೃಪ್ತಿಪಡಿಸುವನು.

ಮಾಯಾಪತಿ ವಾಸುದೇವ: ಈ ಸಪ್ತಾನ್ನಗಳ ಮೂಲಕ ತಾನೂ ಭುಂಜಿಸಿ ಸಕಲ ಜೀವರಾಶಿಗಳಿಗೂ ಉಣಿಸುವನು.


ವಿಶೇಷ ತಿಥಿಗಳ ಆಚರಣೆ

ಅವಿಧವಾ ನವಮಿ: ಪಿತೃ ಪಕ್ಷದ ಹದಿನೈದು ದಿನಗಳಲ್ಲಿ ಮುತ್ತೈದೆಯಾಗಿ ತೀರಿಕೊಂಡವರಿಗೆ ನವಮಿ ತಿಥಿಯಂದು ಆಚರಿಸಲಾಗುತ್ತದೆ.


ಯತಿ ದ್ವಾದಶಿ: ವಂಶದಲ್ಲಿ ಸನ್ಯಾಸಿ (ಯತಿ)ಗಳಾದವರಿಗೆ ದ್ವಾದಶಿಯಂದು ತರ್ಪಣ ನೀಡಲಾಗುತ್ತದೆ.


ಘಾತ ಚತುರ್ದಶಿ: ಅಪಘಾತ ಅಥವಾ ದುರ್ಮರಣಕ್ಕೀಡಾದವರಿಗೆ ಚತುರ್ದಶಿ ತಿಥಿಯಂದು ತರ್ಪಣ ಕೊಡಲಾಗುತ್ತದೆ.


ಯಾವುದೇ ಕಾರಣದಿಂದ ಈ ಮಾಸದಲ್ಲಿ ಶ್ರಾದ್ಧ ಆಚರಿಸಲು ಸಾಧ್ಯವಾಗದಿದ್ದರೆ, ತುಲಾ ಮಾಸ ಮುಗಿಯುವುದರೊಳಗೆ ಆಚರಿಸಬೇಕು.


ಹೀಗೆ ಸರ್ವಾಂತರ್ಯಾಮಿಯಾದ ಪರಮಾತ್ಮನು ಎಲ್ಲದರಲ್ಲೂ ನಿಂತು ಕಾರ್ಯ ಮಾಡಿಸುತ್ತಾನೆ. ಪ್ರತಿಯೊಬ್ಬರ ಸುಕರ್ಮಗಳನ್ನು ಸ್ವೀಕರಿಸಿ ಸಕಲ ಜೀವರಾಶಿಗಳಿಗೂ, ಪಿತೃಗಳಿಗೂ ಸುಖವನ್ನು ನೀಡುತ್ತಾ ಕರುಣಾಸಾಗರನಾಗಿ ನಮ್ಮನ್ನು ಕಾಯುತ್ತಿದ್ದಾನೆ.


- ಪ್ರಿಯಾ ಪ್ರಾಣೇಶ ಹರಿದಾಸ



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top