ಕಡಬ: ಸರಕಾರಿ ಕಚೇರಿಯಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಪ್ರಶ್ನಿಸಿದ್ದೇ ತಪ್ಪು ಎಂಬ ಭಾವನೆ ಮೂಡಿಸುವ ರೀತಿಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ರಾಜ್ಯ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಬಿಳಿನೆಲೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಚಂದ್ರಾವತಿ ಅವರು ನೀಡಿದ ದೂರಿನ ಆಧಾರದ ಮೇಲೆ ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಉಚ್ಚ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ (Interim Stay) ನೀಡಿದೆ.
ಬಿಳಿನೆಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ಥಳೀಯ ಸಾರ್ವಜನಿಕರಾದ ಪ್ರಸಾದ್ ಕೆ.ಜಿ., ಜೂಲಿಯಾನ ಹಾಗೂ ಸಜಿತ್ ಕುಮಾರ್ ಅವರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಲಾದ ಅಕ್ರಮ ಹಾಗೂ ಅವ್ಯವಹಾರಗಳ ಕುರಿತು ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ಆರೋಪಿತರು ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣದ ಹಿನ್ನೆಲೆ:
ಬಿಳಿನೆಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಟ್ಟಣ ವಾರ್ಡ್‌ನ ನಿವಾಸಿಗಳು ಕಳೆದ 11 ತಿಂಗಳುಗಳಿಂದ ನಿರಂತರವಾಗಿ ಮಾಹಿತಿ ಹಕ್ಕು (RTI) ಅರ್ಜಿಗಳು, ದೂರುಗಳು, ವಾಟ್ಸಾಪ್ ಸಂದೇಶಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪಿಡಿಒ ಚಂದ್ರಾವತಿ ಅವರು ದೂರಿನಲ್ಲಿ ಆರೋಪಿಸಿದ್ದರು.
ಕಟ್ಟಡ ನಿರ್ಮಾಣ ಪರವಾನಗಿ, ಖಾಸಗಿ ಜಮೀನಿಗೆ ರಸ್ತೆ ದೃಢೀಕರಣ ಹಾಗೂ ವಾಣಿಜ್ಯ ಪರವಾನಗಿಗಳಿಗೆ ಅಗತ್ಯ ದಾಖಲೆಗಳು ಲಭ್ಯವಿಲ್ಲದ ಕಾರಣ ಅನುಮತಿ ನೀಡದಿರುವುದನ್ನು ಪ್ರಶ್ನಿಸಿ ದ್ವೇಷಪೂರ್ವಕವಾಗಿ ವರ್ತಿಸಲಾಗುತ್ತಿದೆ ಎಂದು ಪಿಡಿಒ ಅವರು ದೂರಿನಲ್ಲಿ ತಿಳಿಸಿದ್ದರು.
ಇದಲ್ಲದೆ, ಜುಲೈ 8ರಂದು ಪಂಚಾಯತ್ ಕಚೇರಿಗೆ ಆಗಮಿಸಿ ವೀಡಿಯೋ ಚಿತ್ರೀಕರಣ ನಡೆಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದರ ಜೊತೆಗೆ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಕಡಬ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

