ಎಸ್‌ಡಿಎಂನಲ್ಲಿ ‘ಕ್ಷಮತ್ವಂ–2026’ ಆರನೇ ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಭವ್ಯ ಚಾಲನೆ

Shreya Hegde
0

ಆಟೋಇಮ್ಯೂನ್‌ ಕಾಯಿಲೆಗಳ ನಿರ್ವಹಣೆಯಲ್ಲಿ ಆಯುರ್ವೇದ ಸಂಶೋಧನೆಗೆ ಆದ್ಯತೆ ಅಗತ್ಯ



ಉಡುಪಿ:  ಆಟೋಇಮ್ಯೂನ್‌ ಕಾಯಿಲೆಗಳ ನಿರ್ವಹಣೆಯಲ್ಲಿ ಆಯುರ್ವೇದದ ವೈಜ್ಞಾನಿಕ ಸಾಧ್ಯತೆಗಳನ್ನು ಅನ್ವೇಷಿಸುವುದು ಹಾಗೂ ಶಾಸ್ತ್ರೀಯ ಜ್ಞಾನವನ್ನು ಆಧುನಿಕ ರೋಗನಿರೋಧಕ ವಿಜ್ಞಾನ ಮತ್ತು ಜಾಗತಿಕ ಆರೋಗ್ಯ ರಕ್ಷಣೆಯೊಂದಿಗೆ ಬೆಸೆಯುವ ಉದ್ದೇಶದಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್‌ಡಿಎಂ) ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಉಡುಪಿ ಆಯೋಜಿಸಿರುವ ‘ಕ್ಷಮತ್ವಂ–2026’ ಆರನೇ ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಬುಧವಾರ ಭಾವಪ್ರಕಾಶ ಸಭಾಂಗಣದಲ್ಲಿ ಭವ್ಯ ಚಾಲನೆ ದೊರೆಯಿತು.


ನ್ಯಾಷನಲ್ ಕಮಿಷನ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ ಅಧ್ಯಕ್ಷೆ ಪ್ರೊ. (ಡಾ.) ಮನಿಷಾ ಉಪೇಂದ್ರ ಕೊಥೇಕರ್ ಮಾತನಾಡಿ, ಸ್ವಯಂ ನಿರೋಧಕ ಕಾಯಿಲೆಗಳ ನಿರ್ವಹಣೆಯಲ್ಲಿ ಆಯುರ್ವೇದದ ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ವೈಜ್ಞಾನಿಕ ಸಂಶೋಧನೆ ಹಾಗೂ ಜಾಗತಿಕ ಆರೋಗ್ಯ ಸೇವೆಗಳೊಂದಿಗೆ ಸಂಯೋಜಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಆಯುಷ್ ಸಚಿವಾಲಯದ ಆಯುರ್ವೇದ ಸಲಹೆಗಾರ ಡಾ. ಕೌಸ್ತುಭ್ ಉಪಾಧ್ಯಾಯ, ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಯ ಆಯುಕ್ತ ಡಾ. ಸುನಿಲ್ ಪನ್ವಾರ್, ಐಎಫ್‌ಎಸ್, ಹಾಗೂ ಆಯುರ್ವೇದ ರಷ್ಯಾ–ಇಂಡಿಯಾ ಅಸೋಸಿಯೇಷನ್ ಅಧ್ಯಕ್ಷೆ ಡಾ. ಅನಿತಾ ಕರಿಲಿಯೊ ಅರ್ಕಾಸ್ ಉಪಸ್ಥಿತರಿದ್ದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಆಯುರ್ವೇದ ಸಂಸ್ಥೆಗಳ ನಿರ್ದೇಶಕ ಪ್ರೊ. ಡಾ. ಪ್ರಸನ್ನ ಎನ್. ರಾವ್ ಮಾತನಾಡಿ, “ಕ್ಷಮತ್ವಂ–2026 ಒಂದು ಜಾಗತಿಕ ಉಪಕ್ರಮವಾಗಿದ್ದು, ವಿಶ್ವದ ವಿವಿಧ ಭಾಗಗಳಿಂದ ತಜ್ಞರು, ಸಂಶೋಧಕರು ಹಾಗೂ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ್ದಾರೆ. ಆಯುರ್ವೇದವನ್ನು ಜಾಗತಿಕ ಆರೋಗ್ಯ ವ್ಯವಸ್ಥೆಯೊಂದಿಗೆ ಸಂಪರ್ಕಿಸುವ ನಿಟ್ಟಿನಲ್ಲಿ ಇಂತಹ ಅಂತರರಾಷ್ಟ್ರೀಯ ವೇದಿಕೆಗಳು ಮಹತ್ವದ್ದಾಗಿವೆ” ಎಂದು ಹೇಳಿದರು. ಮುಖ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಎಸ್‌ಡಿಎಂ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗಣ್ಯರು ದೀಪ ಬೆಳಗಿಸುವ ಮೂಲಕ ಸಮ್ಮೇಳನಕ್ಕೆ ಅಧಿಕೃತ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಪರಮಪೂಜ್ಯ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಸಂದೇಶವನ್ನು ವಾಚಿಸಲಾಯಿತು. ಕ್ಷಮತ್ವಂ–2026 ಸಮ್ಮೇಳನದ ಆಯೋಜನೆಗೆ ಸಂತಸ ವ್ಯಕ್ತಪಡಿಸಿದ ಅವರು, ಶಾಸ್ತ್ರೀಯ ಆಯುರ್ವೇದ ಜ್ಞಾನವನ್ನು ಜಾಗತಿಕ ಆರೋಗ್ಯ ರಕ್ಷಣೆಯೊಂದಿಗೆ ಬೆಸೆಯುವ ಅನುವಾದಾತ್ಮಕ ಸಂಶೋಧನೆಯ ಮಹತ್ವವನ್ನು ಒತ್ತಿ ಹೇಳಿದರು. ಎಸ್‌ಡಿಎಂನ ವಿಶಾಲ ಆರೋಗ್ಯ, ಶಿಕ್ಷಣ ಮತ್ತು ಸಂಶೋಧನಾ ಜಾಲವು ಆಯುರ್ವೇದವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಸಂದೇಶದಲ್ಲಿ ತಿಳಿಸಿದರು.


ಸಮ್ಮೇಳನದ ಅಂಗವಾಗಿ ಡಾ. ಪದ್ಮಕಿರಣ್ ಸಿ. ಅವರ ‘ಪಂಚಕರ್ಮ ಶ್ಲೋಕ ಮಂಜರಿ’ ಹಾಗೂ ಡಾ. ಅರ್ಹಂತ್ ಕುಮಾರ್ ಎ. ಅವರ ‘English Translation of Sushruta Samhita – Part 1’ ಕೃತಿಗಳನ್ನು ಗಣ್ಯರು ಬಿಡುಗಡೆ ಮಾಡಿದರು. ಶಾಸ್ತ್ರೀಯ ಆಯುರ್ವೇದ ಜ್ಞಾನವನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಯ ವಿದ್ಯಾರ್ಥಿಗಳು, ವೈದ್ಯರು ಮತ್ತು ಸಂಶೋಧಕರಿಗೆ ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಈ ಕೃತಿಗಳ ಮಹತ್ವವನ್ನು ಬಿಂಬಿಸಲಾಯಿತು.


ಸಮ್ಮೇಳನದ *ಮುಖ್ಯ ಭಾಷಣವನ್ನು ಪ್ರೊಫೆಸರ್ ಎಮೆರಿಟಸ್ ಡಾ. ಶ್ರೀನಿವಾಸ್ ಹೆಜಮಾಡಿ ನೀಡಿದರು. ಆಟೋಇಮ್ಯೂನ್‌ ಕಾಯಿಲೆಗಳ ಹೆಚ್ಚುತ್ತಿರುವ ಸವಾಲುಗಳು, ರೋಗನಿರೋಧಕ ವ್ಯವಸ್ಥೆಯ ಸಂಕೀರ್ಣತೆ ಹಾಗೂ ಈ ಕ್ಷೇತ್ರದಲ್ಲಿ ಆಯುರ್ವೇದ ಸಂಶೋಧನೆಗೆ ಇರುವ ಅವಕಾಶಗಳ ಕುರಿತು ಅವರು ಬೆಳಕು ಚೆಲ್ಲಿದರು. ಸಮ್ಮೇಳನದ ಸಂಘಟನಾ ಕಾರ್ಯದರ್ಶಿಗಳಾದ ಡಾ. ಪ್ರಸನ್ನ ಎನ್. ಮೊಗಸಾಲೆ ಹಾಗೂ ಡಾ. ಅರ್ಹಂತ್ ಕುಮಾರ್ ಎ. ಉಪಸ್ಥಿತರಿದ್ದರು.


ಉದ್ಘಾಟನಾ ಕಾರ್ಯಕ್ರಮದ ಬಳಿಕ ನಡೆದ ವೈಜ್ಞಾನಿಕ ಗೋಷ್ಠಿಗಳಲ್ಲಿ ದೇಶ-ವಿದೇಶಗಳ ಖ್ಯಾತ ತಜ್ಞರು ಭಾಗವಹಿಸಿ ವಿವಿಧ ಆಯಾಮಗಳ ಕುರಿತು ವಿಚಾರ ಮಂಡಿಸಿದರು. ಡಾ. ವಿಶ್ವೇಶ್ವರಯ್ಯ ಪ್ರಕಾಶ್, ಡಾ. ಭೂಷಣ್ ಪಾಟವರ್ಧನ್, ಡಾ. ಜಾರ್ಜ್ ಲೂಯಿಸ್ ಬೆರ್ರಾ, ಡಾ. ರಾಮಮನೋಹರ್ ಪುತியேದತ್ ಹಾಗೂ ಡಾ. ಪ್ರಸನ್ನ ಎನ್. ಮೊಗಸಾಲೆ ಅವರು ವೈಜ್ಞಾನಿಕ ಅಧಿವೇಶನಗಳಲ್ಲಿ ಉಪನ್ಯಾಸಗಳನ್ನು ನೀಡಿದರು. ಆಯುರ್ವೇದ ಮತ್ತು ಆಧುನಿಕ ವಿಜ್ಞಾನದ ನಡುವಿನ ಸಂವಾದಕ್ಕೆ ವೇದಿಕೆಯಾದ ಈ ಗೋಷ್ಠಿಗಳಲ್ಲಿ ರೋಗನಿರೋಧಕ ವ್ಯವಸ್ಥೆ, ಆಟೋಇಮ್ಯೂನ್‌ ಕಾಯಿಲೆಗಳ ವೈಜ್ಞಾನಿಕ ತಿಳುವಳಿಕೆ, ಸಂಶೋಧನಾ ವಿಧಾನಗಳು ಹಾಗೂ ಆಯುರ್ವೇದದ ಚಿಕಿತ್ಸಾ ಸಾಧ್ಯತೆಗಳ ಕುರಿತು ವಿಸ್ತೃತ ಚರ್ಚೆಗಳು ನಡೆದವು.


ಇದಾದ ಬಳಿಕ ವಿವಿಧ ಸಂಸ್ಥೆಗಳ ಸಂಶೋಧಕರು ಹಾಗೂ ವಿದ್ವಾಂಸರು ತಮ್ಮ ವೈಜ್ಞಾನಿಕ ಸಂಶೋಧನಾ ಪ್ರಬಂಧಗಳನ್ನು ಸಮಾನಾಂತರ ಗೋಷ್ಠಿಗಳಲ್ಲಿ ಮಂಡಿಸಿದರು. ಸಂಶೋಧನಾ ಪ್ರಸ್ತುತಿಗಳು, ತಜ್ಞರ ಸಂವಾದ ಹಾಗೂ ಪ್ರಶ್ನೋತ್ತರಗಳು ಸಂಶೋಧಕರು, ವೈದ್ಯರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಜ್ಞಾನ ವಿನಿಮಯದ ಉತ್ತಮ ವೇದಿಕೆಯಾದವು. ದಿನದ ಕಾರ್ಯಕ್ರಮಕ್ಕೆ ಎಸ್‌ಡಿಎಂ ಕಲಾವೈಭವ ತಂಡದಿಂದ ನಡೆದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಮೆರುಗು ನೀಡಿತು.


ಕಾರ್ಯಕ್ರಮದ ನಿರೂಪಣೆಯನ್ನು ಡಾ. ಅರುಣ್ ಹಾಗೂ ಡಾ. ಶುಭಾ ಪಿ.ಯು. ನಿರ್ವಹಿಸಿದರು. ಡಾ. ಅಶೋಕ್ ಕುಮಾರ್ ಬಿ.ಎನ್. ಅವರು ವಂದನಾರ್ಪಣೆ ಸಲ್ಲಿಸಿದರು. ಸಮಾರಂಭದಲ್ಲಿ ಎಸ್‌ಡಿಎಂ ಆಯುರ್ವೇದ ಕಾಲೇಜು, ಹಾಸನದ ಪ್ರಾಂಶುಪಾಲೆ ಡಾ. ಶೈಲಜಾ, ಎಸ್‌ಡಿಎಂ ಆಯುರ್ವೇದ ಕಾಲೇಜು, ಬೆಂಗಳೂರಿನ ಪ್ರಾಂಶುಪಾಲ ಡಾ. ಜಗದೀಶ್ ಕೆ., ಎಸ್‌ಡಿಎಂಸಿಎಎಚ್‌ಆರ್‌ಸಿ, ಉಡುಪಿಯ ಉಪಪ್ರಾಂಶುಪಾಲರಾದ ಡಾ. ನಿರಂಜನ್ ರಾವ್ ಹಾಗೂ ಡಾ. ನಾಗರಾಜ್ ಎಸ್. ಸೇರಿದಂತೆ ಗಣ್ಯರು, ಬೋಧಕ ವರ್ಗ, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ದೇಶ-ವಿದೇಶಗಳಿಂದ ಆಗಮಿಸಿದ ಪ್ರತಿನಿಧಿಗಳು ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top