ವಿಜೃಂಭಣೆಯಿಂದ ಜನ್ಮಾಷ್ಟಮಿ, ಓಣಂ ಹಾಗೂ ಶಿಕ್ಷಕರ ದಿನಾಚರಣೆ
ಮಂಗಳೂರು: ಇಲ್ಲಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಪ್ರಾಂಶುಪಾಲರಾದ ಶ್ರೀ ಸಂದೀಪ್ ಆಚಾರ್ಯ ಅವರ ನಿರ್ದೇಶನದಂತೆ ಸೆಪ್ಟೆಂಬರ್ 4ರಂದು ದಿನವಿಡೀ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಹಬ್ಬದ ವಾತಾವರಣದೊಂದಿಗೆ ವಿಜೃಂಭಣೆಯಿಂದ ನೆರವೇರಿದವು.
ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಗೋಪೂಜೆ:
ಬೆಳಿಗ್ಗೆ ಶಂಕರಶ್ರೀ ಸಭಾಭವನದಲ್ಲಿ ಕನ್ನಡ ಶಿಕ್ಷಕಿ ಶ್ರೀಮತಿ ಗಾಯತ್ರೀ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ವಿಶೇಷ ಭಜನೆ, ಪೂಜೆ ಹಾಗೂ ಮಂಗಳಾರತಿಯ ಮೂಲಕ ಶ್ರೀಕೃಷ್ಣನನ್ನು ಆರಾಧಿಸಲಾಯಿತು. ಬಳಿಕ ನಡೆದ ಗೋಪೂಜೆಯಲ್ಲಿ ಶ್ರೀ ಸತೀಶ ಶಾಸ್ತ್ರಿಗಳು ಗೋವುಗಳ ಮಹತ್ವವನ್ನು ಪರಿಚಯಿಸಿದರು. ಪ್ರಾಂಶುಪಾಲರು, ಬೋಧಕ-ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಗೋಆರತಿ ಬೆಳಗಿ, ಗೋಗ್ರಾಸ ನೀಡಿ ಧನ್ಯತೆ ಮೆರೆದರು.
ಓಣಂ ಸಂಭ್ರಮ ಹಾಗೂ ಮೊಸರು ಕುಡಿಕೆ:
ಬಳಿಕ ಓಣಂ ಹಬ್ಬದ ಅಂಗವಾಗಿ ವರ್ಣರಂಜಿತ 'ಪೂಕಳಂ' (ಹೂವಿನ ರಂಗೋಲಿ) ರಚನೆ, ಸಾಂಪ್ರದಾಯಿಕ ನೃತ್ಯ ಹಾಗೂ ಮಾವೇಲಿ ರಾಜನ ಆಕರ್ಷಕ ಪ್ರವೇಶ ಎಲ್ಲರ ಗಮನ ಸೆಳೆಯಿತು. ತದನಂತರ ನಡೆದ ಮೊಸರು ಕುಡಿಕೆ ಉತ್ಸವದಲ್ಲಿ ವಿದ್ಯಾರ್ಥಿನಿಯರು ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆದರೆ, ವಿದ್ಯಾರ್ಥಿಗಳು ಸಾಹಸಮಯ ಮಾನವ ಪಿರಮಿಡ್ ನಿರ್ಮಿಸಿ ಮಡಿಕೆ ಒಡೆದು ಸಂಭ್ರಮಿಸಿದರು.
ಶಿಕ್ಷಕರ ದಿನಾಚರಣೆ:
ಮಧ್ಯಾಹ್ನದ ನಂತರ ಬೋಧಶ್ರೀ ಸಭಾಭವನದಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು ಆಯೋಜಿಸಿದ್ದರು. ಶಿಕ್ಷಕರಿಗಾಗಿ ವಿವಿಧ ವಿನೋದಾವಳಿ ಸ್ಪರ್ಧೆಗಳನ್ನು ನಡೆಸಿ, ಆಕರ್ಷಕ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಮ್ಮ ಗುರುಗಳಿಗೆ ಗೌರವ ಸಲ್ಲಿಸಿದರು.
ದಿನವಿಡೀ ನಡೆದ ಈ ಸಾಂಸ್ಕೃತಿಕ ಹಬ್ಬದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


