ಸುರತ್ಕಲ್: ಗೋವಿಂದ ದಾಸ ಕಾಲೇಜು ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಕ್ಷೇತ್ರಗಳಲ್ಲಿ ಅನೇಕ ಉನ್ನತ ಸಾಧನೆಗಳನ್ನು ಸಾಧಿಸಿ ಮನ್ನಣೆ ಗಳಿಸಿದೆ. ಶ್ರೇಷ್ಠ ಕ್ರೀಡಾ ಪರಂಪರೆಯನ್ನು ಹೊಂದಿದ ಈ ಕಾಲೇಜಿನ ಅನೇಕ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲೂ ಸಾಧನೆಗೈದಿದ್ದಾರೆ. ಭವಿಷ್ಯದಲ್ಲಿಯೂ ಇಲ್ಲಿನ ವಿದ್ಯಾರ್ಥಿಗಳು ಈ ಪರಂಪರೆಯನ್ನು ಮುಂದುವರೆಸಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸಾಧನೆಗೈಯಬೇಕು ಎಂದು ಮಾಜಿ ಕುಸ್ತಿಪಟು ಮತ್ತು ಕಾಲೇಜಿನ ಹಳೆ ವಿದ್ಯಾರ್ಥಿ ಪುಂಡಲೀಕ ಹೊಸಬೆಟ್ಟು ನುಡಿದರು.
ಅವರು ಹಿಂದು ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‌ನ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜು ಸುರತ್ಕಲ್‌ನಲ್ಲಿ ಆಯೋಜಿಸಲಾದ ಮಂಗಳೂರು ವಿ.ವಿ ಮಟ್ಟದ ಅಂತರ್ ಕಾಲೇಜು ಕುಸ್ತಿ ಪಂದ್ಯಾಟವನ್ನು ಉದ್ಘಾಟಿಸುತ್ತಾ ಮಾತನಾಡಿದರು. ಕ್ರೀಡಾ ಸ್ಪೂರ್ತಿ, ಶಿಸ್ತು, ನಿರಂತರ ಪರಿಶ್ರಮವಿದ್ದರೆ ಯಾವುದೇ ಸ್ಪರ್ಧಾತ್ಮಕ ಕ್ಷೇತ್ರದಲ್ಲಿಯೂ ಯಶಸ್ಸು ಸಾಧ್ಯವೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿಂದು ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಶ್ರೀರಂಗ ಹೆಚ್. ಅವರು ಮಾತನಾಡಿ ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ತಂಡಭಾವ ಮತ್ತು ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವವನ್ನು ಉತ್ತೇಜಿಸುವ ಜೊತೆಗೆ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವುದು ವಿದ್ಯಾರ್ಥಿಗಳ ಬೆಳವಣಿಗೆಗೆ ಅಗತ್ಯವೆಂದು ನುಡಿದರು.
ವಿಶೇಷ ಅತಿಥಿಗಳಾಗಿ ಗೋವಿಂದ ದಾಸ ಕಾಲೇಜು ಅಲ್ಯಮ್ನಿ ಅಸೋಸಿಯೇಶನ್‌ನ ಕಾರ್ಯದರ್ಶಿ ಶಿರೀಶ್ ಕುಮಾರ್, ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕುಸ್ತಿ ಪಂದ್ಯಾಟದ ಪರೀವೀಕ್ಷಕ ಡಾ. ಹರಿದಾಸ್ ಕೂಳೂರು ಮಣಿಪಾಲ್, ಪ್ಯಾರದೀಪ್ ಫಾಸ್ಪೇಟ್ಸ್‌ನ ಹೆಚ್.ಆರ್. ವಿಭಾಗದ ವ್ಯವಸ್ಥಾಪಕ ವಿವೇಕ್ ಕೋಟ್ಯಾನ್, ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಭಟ್ ಎಸ್.ಜಿ., ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅತಿಥಿಗಳು ಕುಸ್ತಿಕ್ರೀಡೆ ಶಾರೀರಿಕ ಶಕ್ತಿಯ ಜೊತೆಗೆ ಮಾನಸಿಕ ದೃಢತೆಯನ್ನು ಪರೀಕ್ಷಿಸುವ ಸ್ಪರ್ಧೆಯಾಗಿದ್ದು ಶಿಸ್ತುಬದ್ಧ ತರಬೇತಿಯೊಂದಿಗೆ ರಾಷ್ಟ್ರ ಅಂತರ್‌ರಾಷ್ಟ್ರ ಮಟ್ಟದಲ್ಲೂ ಸಾಧನೆಗೆ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಶಾಂತ್ ಎಂ.ಡಿ. ಕಾರ್ಯಕ್ರಮ ಸಂಘಟಿಸಿದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಹರೀಶ ಆಚಾರ್ಯ ಪಿ. ಸ್ವಾಗತಿಸಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಆಶಾ ವಂದಿಸಿದರು. ದ್ವಿತೀಯ ಬಿ.ಎ. ವಿದ್ಯಾರ್ಥಿನಿ ತೇಜಸ್ವಿ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು. ಸುಮಾರು 27 ಕಾಲೇಜುಗಳು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ನೀಲಪ್ಪ ವಿ ಸೇರಿದಂತೆ ಕುಸ್ತಿ ಪಂದ್ಯಾಟದ ಆಯೋಜನೆಗೆ ನೆರವು ನೀಡಿದ ಪ್ರಾಯೋಜಕರು, ಕಾಲೇಜಿನ ಶಿಕ್ಷಕರು ಮತ್ತು ಆಡಳಿತಾತ್ಮಕ ಸಿಬ್ಬಂದಿಗಳು, ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರು ಮತ್ತು ತರಬೇತುದಾರರು ಉಪಸ್ಥಿತರಿದ್ದರು.
