ಸುರತ್ಕಲ್: ಹಿಂದಿ ಭಾಷೆಗೆ ದೇಶ ವಿದೇಶಗಳಲ್ಲಿ ಮಾನ್ಯತೆ ಇದ್ದು ರಾಷ್ಟ್ರೀಯ ಭಾಷೆಗಳಲ್ಲಿ ಒಂದಾಗಿದೆ. ಭಾಷೆಯು ತನ್ನ ಸೀಮಿತ ಚೌಕಟ್ಟನ್ನು ಮೀರಿ ಉದ್ಯೋಗಾವಕಾಶಗಳನ್ನು ಕಲ್ಪಿಸಿ ಕೊಡುತ್ತಿದ್ದು ಯುವ ಜನತೆ ಹೊಸ ಅವಕಾಶಗಳ ಬಗ್ಗೆ ಪ್ರಜ್ಞಾವಂತರಾಗ ಬೇಕಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ನಾಗರತ್ನ ಎನ್. ರಾವ್ ಹೇಳಿದರು. ಸುರತ್ಕಲ್ ಹಿಂದೂ ವಿದ್ಯಾದಾಯಿನಿ ಸಂಘದ ಆಡಳಿತಕ್ಕೊಳಪಟ್ಟ ಗೋವಿಂದದಾಸ ಕಾಲೇಜಿನ ಹಿಂದಿ ವಿಭಾಗ ಆಚರಿಸಿದ ರಾಷ್ಟ್ರೀಯ ಹಿಂದಿ ದಿವಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಇವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಹರೀಶ್ ಆಚಾರ್ಯ ಪಿ. ಇವರು ದೇಶಾದ್ಯಂತ ಮನ್ನಣೆ ಪಡೆದ ಹಿಂದಿ ಭಾಷೆಯನ್ನು ಪ್ರತಿಯೊಬ್ಬರು ಪ್ರೀತಿಸಿ ಗೌರವಿಸಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ. ನೀಲಪ್ಪ ವಿ. , ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಧಾ ಯು. ಮತ್ತಿತರ ಉಪನ್ಯಾಸಕರು ಉಪಸ್ಥಿತರಿದ್ದರು. ಹಿಂದಿ ವಿಭಾಗದ ಮುಖ್ಯಸ್ಥೆ ಜ್ಯೋತಿ ಎಸ್ ಕಾಮತ್ ಸ್ವಾಗತಿಸಿದರು, ಕಲಾ ವಿಭಾಗದ ವಿದ್ಯಾರ್ಥಿನಿ ತೇಜಸ್ವಿ ಕರ್ಕೇರ ನಿರೂಪಿಸಿದರು, ಹಿಂದಿ ಪ್ರಾಧ್ಯಾಪಕಿ ರಮಿತಾ ವಂದಿಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.


