ಬಸ್ರೂರು: ಮಂಗಳೂರು ವಿಶ್ವವಿದ್ಯಾನಿಲಯದ ಎಂ.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ‘ಗಿಳಿವಿಂಡು’ ವತಿಯಿಂದ ಹಮ್ಮಿಕೊಳ್ಳಲಾದ ‘ಗಿಳಿವಿಂಡು ಯಾನ: ಮರಳಿ ಮನೆಗೆ ಬಾರಿಸು ಕನ್ನಡ ಡಿಂಡಿಮವ’ ಸರಣಿ ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀಕಾಂತ ರಾವ್ ಸಿದ್ದಾಪುರ ಅವರು ‘ಕುಂದಾಪುರ ಕನ್ನಡದ ಸೊಗಸು’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕುಂದಾಪುರ ಪ್ರದೇಶದ ಶ್ರಮ ಸಂಸ್ಕೃತಿಯ ಪ್ರತೀಕವಾಗಿ ಇಲ್ಲಿನ ಭಾಷೆ ಮತ್ತು ಜಾನಪದ ಸಾಹಿತ್ಯ ರೂಪುಗೊಂಡಿದೆ. ಇದರ ಉಚ್ಚಾರಣಾ ಕ್ರಮಗಳು, ವಿಶಿಷ್ಟ ಪದಪ್ರಯೋಗಗಳು ಹಾಗೂ ಜಾನಪದ ಗೀತೆಗಳು ವಿಶಿಷ್ಟವಾಗಿದ್ದು, ಪ್ರತಿಯೊಬ್ಬರೂ ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.
ಗಿಳಿವಿಂಡಿನ ಅಧ್ಯಕ್ಷ ಡಾ. ಬಿ. ಶಿವರಾಮ ಶೆಟ್ಟಿ ಮಾತನಾಡಿ, ಕುಂದಾಪುರ ಭಾಷೆ ಮತ್ತು ಸಂಸ್ಕೃತಿಯು ಪ್ರಕೃತಿ ಹಾಗೂ ಪರಿಸರದೊಂದಿಗೆ ಆಳವಾಗಿ ಬೆಸೆದುಕೊಂಡಿದೆ. ಇಂದಿನ ವಿದ್ಯಾರ್ಥಿಗಳು ತಮ್ಮ ಆಡುಭಾಷೆಯಾದ ಕುಂದಾಪುರ ಕನ್ನಡದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳುವುದು ಅತ್ಯಗತ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ದಯಾನಂದ ಎನ್. ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಕುಮಾರ್ ಪಿ. ಸ್ವಾಗತಿಸಿದರು. ಗಿಳಿವಿಂಡು ಸದಸ್ಯ ಕೃಷ್ಣಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಐ.ಕ್ಯೂ.ಎ.ಸಿ. ಸಂಯೋಜಕ ಸಂದೀಪ್ ಕೆ. ವಂದಿಸಿದರು. ಪ್ರಾಧ್ಯಾಪಕಿ ಪ್ರಮೀಳಾ ಕಾರ್ಯಕ್ರಮವನ್ನು ನಿರೂಪಿಸಿದರು.
