ಹಾಸನ: ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಇಂದು ದೇಶದ ವಿವಿಧ ಉನ್ನತ ಹುದ್ದೆಗಳಲ್ಲಿರುವ ಪ್ರತಿಯೊಬ್ಬರ ಸಾಧನೆಯ ಹಿಂದೆಯೂ ಅವರ ಶಿಕ್ಷಕರ ಮಾರ್ಗದರ್ಶನವಿರುತ್ತದೆ. ಆದ್ದರಿಂದ ನಮಗೆ ನಿತ್ಯವೂ ಪಾಠ ಕಲಿಸುವ ಗುರುಗಳನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಉಪಪ್ರಾಂಶುಪಾಲ ಮಂಜುನಾಥ್ ಹೇಳಿದರು.
ನಗರದ ಆರ್.ಸಿ. ರಸ್ತೆಯಲ್ಲಿರುವ ಜಿ.ಜಿ.ಜೆ.ಸಿ. (ಪ್ರಧಾನ) ಪ್ರೌಢಶಾಲಾ ವಿಭಾಗದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಉತ್ತಮ ಆರೋಗ್ಯದ ಅಗತ್ಯತೆಯನ್ನು ಪ್ರತಿಪಾದಿಸಿದ ಅವರು, "ಸದೃಢ ಶರೀರದಲ್ಲಿ ಮಾತ್ರ ಸತ್ಚಿಂತನೆಯ ಮನಸ್ಸಿರುತ್ತದೆ. ವಿದ್ಯಾರ್ಥಿಗಳು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವ ಮೂಲಕ ಆತ್ಮವಿಶ್ವಾಸದಿಂದ ಅಭ್ಯಾಸ ಮಾಡಿ, ಶಾಲೆಗೆ ಕೀರ್ತಿ ತರಬೇಕು" ಎಂದು ಕರೆ ನೀಡಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸಮಾಜ ವಿಜ್ಞಾನ ಶಿಕ್ಷಕ ಕೆ.ಎನ್. ಚಿದಾನಂದ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಮತ್ತು ಎ.ಐ. (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳು ಸರ್ವತೋಮುಖ ಜ್ಞಾನವನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ ಎಂದರು. ಭಾರತದ ಎರಡನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನಾದರ್ಶಗಳನ್ನು ನೆನಪಿಸಿದ ಅವರು, ಅವರ ಗುಣಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಗೀತ ಶಿಕ್ಷಕ ಸತ್ಯನಾರಾಯಣ ಮುರಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಗುರು ಕೃಪೆಯ ಮಹತ್ವವನ್ನು ವಿವರಿಸಿದರು. ಕನ್ನಡ ಶಿಕ್ಷಕ ರುದ್ರೇಶ್ ಮಾತನಾಡಿ, ಹಿರಿಯರನ್ನು ಹಾಗೂ ಗುರು-ಹಿರಿಯರನ್ನು ಗೌರವಿಸುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಲು ತಿಳಿಸಿದರು. ವಿಜ್ಞಾನ ಶಿಕ್ಷಕ ಪಿ. ಮಧು ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆ ಮೂಡಬೇಕೆಂದು ಆಶಿಸಿದರು.
ಕು. ಸಮೀನಾ ಸ್ವಾಗತಿಸಿದರೆ, ಕು. ನೂರ್ ಫಾತೀಮಾ ಮತ್ತು ಕು. ಮೇಘ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿಯರ ತಂಡದಿಂದ ಪ್ರಾರ್ಥನೆ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕಿಯರಾದ ಎ.ವಿ. ಗೀತಾರಾಣಿ, ಎಂ.ಆರ್. ರಂಗಾಮಣಿ, ಎಸ್. ಕೆ. ಪೂರ್ಣಿಮಾ, ತೈಬಾ ಕೌಸರ್, ಅಹಲ್ಯ, ಬಿ.ಎಡ್. ಪ್ರಶಿಕ್ಷಣಾರ್ಥಿಗಳು, ಬೋಧಕೇತರ ಸಿಬ್ಬಂದಿ ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


