ಧಾರ್ಮಿಕ ಹಿನ್ನೆಲೆಯ ಜೊತೆಗೆ ಶೈಕ್ಷಣಿಕ–ಸಾಂಸ್ಕೃತಿಕ ಮಹತ್ವ ಸಾರುವ ಹಬ್ಬ: ಗಣೇಶ ಚತುರ್ಥಿ

Shreya Hegde
0

 





ಭಾರತವು ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ರಾಷ್ಟ್ರ. ನಾನಾ ಭಾಷೆಗಳು, ವಿಭಿನ್ನ ವೇಷಭೂಷಣಗಳು, ಆಚಾರ–ವಿಚಾರಗಳು ಹಾಗೂ ಸಂಪ್ರದಾಯಗಳ ವೈವಿಧ್ಯತೆಯೇ ನಮ್ಮ ದೇಶದ ಹೆಮ್ಮೆ. ಈ ವೈವಿಧ್ಯತೆಯ ನಡುವೆಯೂ ಏಕತೆ ಮತ್ತು ಸೌಹಾರ್ದದ ಸಂದೇಶವನ್ನು ಸಾರುವ ಶಕ್ತಿಯೇ ನಮ್ಮ ಹಬ್ಬಗಳ ವಿಶೇಷತೆ. ಹಬ್ಬ– ಹರಿದಿನಗಳು ಕುಟುಂಬಗಳನ್ನು ಬೆಸೆಯುತ್ತವೆ, ಸಮಾಜದಲ್ಲಿ ಆತ್ಮೀಯತೆಯನ್ನು ಬೆಳೆಸುತ್ತವೆ ಹಾಗೂ ಬದುಕಿನಲ್ಲಿ ಹೊಸ ಉತ್ಸಾಹವನ್ನು ತುಂಬುತ್ತವೆ.


ಅಂತಹ ಪ್ರಮುಖ ಹಬ್ಬಗಳಲ್ಲಿ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯಂದು ಆಚರಿಸಲ್ಪಡುವ ಗಣೇಶ ಚತುರ್ಥಿ ಅತ್ಯಂತ ಶ್ರದ್ಧಾ–ಭಕ್ತಿಯಿಂದ ಆಚರಿಸಲ್ಪಡುವ ಹಬ್ಬವಾಗಿದೆ. ವಿದ್ಯೆ, ಬುದ್ಧಿ, ಜ್ಞಾನ, ಸಿದ್ಧಿ ಹಾಗೂ ಶುಭದ ಅಧಿದೇವನಾದ ಶ್ರೀ ಗಣೇಶನ ಆರಾಧನೆಯೊಂದಿಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನು ವಿನಾಯಕ ಚತುರ್ಥಿ, ಗಣೇಶ ಚತುರ್ಥಿ ಅಥವಾ ಚೌತಿ ಎಂದೂ ಕರೆಯುತ್ತಾರೆ. ದೇಶದಾದ್ಯಂತ ಆಚರಿಸಲ್ಪಡುವ ಈ ಹಬ್ಬವು ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ವಿಶೇಷ ಸಂಭ್ರಮವನ್ನು ಪಡೆದುಕೊಂಡಿದೆ.


ಗಣೇಶನ ಅವತಾರದ ಹಿನ್ನೆಲೆ

ಶಿವಪುರಾಣದ ಪ್ರಕಾರ, ದೇವಿ ಪಾರ್ವತಿಯು ತನ್ನ ಮೈಕೊಳೆಯಿಂದ ಬಾಲಕನನ್ನು ಸೃಷ್ಟಿಸಿ ಜೀವ ತುಂಬಿದಳು. ತಾನು ಸ್ನಾನಕ್ಕೆ ತೆರಳುವಾಗ ಮನೆ ಕಾಯುವ ಜವಾಬ್ದಾರಿಯನ್ನು ಆ ಬಾಲಕನಿಗೆ ವಹಿಸಿದಳು. ಆಗ ಶಿವನು ಮನೆಗೆ ಬಂದಾಗ, ಪಾರ್ವತಿಯ ಆದೇಶದಂತೆ ಬಾಲಕನು ಅವರನ್ನು ಒಳಗೆ ಬಿಡಲಿಲ್ಲ. ಇದರಿಂದ ಕೋಪಗೊಂಡ ಶಿವನು ಅವನ ಶಿರಚ್ಛೇದ ಮಾಡಿದನು.


ಬಾಲಕನನ್ನು ಕಳೆದುಕೊಂಡ ಪಾರ್ವತಿಯ ದುಃಖವನ್ನು ಕಂಡ ಶಿವನು, ತನ್ನ ಗಣಗಳಿಗೆ ಉತ್ತರ ದಿಕ್ಕಿನಲ್ಲಿ ಮೊದಲು ಕಾಣುವ ಜೀವಿಯ ತಲೆಯನ್ನು ತರಲು ಆದೇಶಿಸಿದನು. ಅವರು ತಂದ ಆನೆಯ ತಲೆಯನ್ನು ಬಾಲಕನ ದೇಹಕ್ಕೆ ಜೋಡಿಸಿ ಪುನರ್ಜೀವ ನೀಡಿದರು. ಹೀಗೆ ಬಾಲಕನು ಗಜಾನನನಾಗಿ, ಗಣಗಳ ಅಧಿಪತಿಯಾಗಿ ಹಾಗೂ ಪ್ರಥಮ ಪೂಜೆಗೆ ಅರ್ಹನಾಗಿ ಪ್ರಸಿದ್ಧನಾದನು.


ಗಣೇಶನ ರೂಪದಲ್ಲಿರುವ ಜೀವನದ ಸಂದೇಶ

ಶ್ರೀ ಗಣೇಶನು ವಿದ್ಯೆ, ಬುದ್ಧಿ ಮತ್ತು ಜ್ಞಾನದ ಪ್ರತೀಕ. ಪ್ರತಿಯೊಂದು ಶುಭಕಾರ್ಯದ ಆರಂಭದಲ್ಲಿಯೂ ಮೊದಲು ಗಣೇಶನನ್ನು ಪೂಜಿಸುವ ಸಂಪ್ರದಾಯ ಇಂದಿಗೂ ಜೀವಂತವಾಗಿದೆ. ಮಹಾಭಾರತವನ್ನು ವೇದವ್ಯಾಸರ ನಿರ್ದೇಶನದಂತೆ ಲಿಖಿತಗೊಳಿಸಿದ ಕೀರ್ತಿಯೂ ಗಣೇಶನಿಗೆ ಸಲ್ಲುತ್ತದೆ. ಸಂತ ತುಳಸೀದಾಸರು ತಮ್ಮ ಶ್ರೀರಾಮಚರಿತಮಾನಸ ಕೃತಿಯ ಆರಂಭದಲ್ಲಿಯೇ ಗಣೇಶನನ್ನು ಸ್ಮರಿಸಿದ್ದಾರೆ. ಅನೇಕ ಸಂತರು ಹಾಗೂ ಋಷಿಗಳು ಗಣಪತಿಯ ಮಹಿಮೆಯನ್ನು ಕೊಂಡಾಡಿದ್ದಾರೆ.


ಗಣೇಶನ ಪ್ರತಿಯೊಂದು ಅಂಗವೂ ಒಂದೊಂದು ಜೀವನ ಮೌಲ್ಯವನ್ನು ಸಾರುತ್ತದೆ. ಕೈಯಲ್ಲಿರುವ ಅಂಕುಶ ಅಹಂಕಾರವನ್ನು ನಿಯಂತ್ರಿಸುವ ಸಂಕೇತವಾದರೆ, ಪಾಶ ಚಂಚಲ ಮನಸ್ಸನ್ನು ಸಂಯಮಿಸುವ ಸಂದೇಶ ನೀಡುತ್ತದೆ. ವಿಶಾಲವಾದ ತಲೆ ವಿಶಾಲ ಚಿಂತನೆಗೆ, ದೊಡ್ಡ ಕಿವಿಗಳು ಉತ್ತಮ ಆಲಿಸುವ ಗುಣಕ್ಕೆ, ಸಣ್ಣ ಕಣ್ಣುಗಳು ಏಕಾಗ್ರತೆಗೆ, ದೊಡ್ಡ ಹೊಟ್ಟೆ ಸಹನಶೀಲತೆಗೆ ಹಾಗೂ ಮೂಷಿಕ ವಾಹನ ವಿನಯಕ್ಕೆ ಸಂಕೇತವೆಂದು ಅರ್ಥೈಸಲಾಗುತ್ತದೆ.


ಹೀಗಾಗಿ ಗಣೇಶನ ಆರಾಧನೆ ಕೇವಲ ಧಾರ್ಮಿಕ ಆಚರಣೆಯಲ್ಲ; ಅದು ಉತ್ತಮ ವ್ಯಕ್ತಿತ್ವ ನಿರ್ಮಾಣದ ಪಾಠವೂ ಹೌದು.


ರಾಷ್ಟ್ರೀಯ ಚಳವಳಿಯೊಂದಿಗೂ ನಂಟು

ಗಣೇಶ ಚತುರ್ಥಿಗೆ ಭಾರತದ ರಾಷ್ಟ್ರೀಯ ಚಳವಳಿಯೊಂದಿಗೂ ಮಹತ್ವದ ಸಂಬಂಧವಿದೆ. ಲೋಕಮಾನ್ಯ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವಕ್ಕೆ ಉತ್ತೇಜನ ನೀಡುವ ಮೂಲಕ ಜನರಲ್ಲಿ ರಾಷ್ಟ್ರೀಯತೆ, ಸಾಮಾಜಿಕ ಒಗ್ಗಟ್ಟು ಹಾಗೂ ಸ್ವಾತಂತ್ರ್ಯದ ಚೈತನ್ಯವನ್ನು ಮೂಡಿಸಲು ಗಣೇಶೋತ್ಸವವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ಹೀಗೆ ವೈಯಕ್ತಿಕ ಆಚರಣೆಯಾಗಿದ್ದ ಗಣೇಶೋತ್ಸವವು ಸಾರ್ವಜನಿಕ ಮತ್ತು ಸಾಮಾಜಿಕ ಸ್ವರೂಪವನ್ನು ಪಡೆದುಕೊಂಡಿತು.


ಕರಾವಳಿಯ ಗಣೇಶೋತ್ಸವದ ವೈಭವ

ಕರ್ನಾಟಕದ ಕರಾವಳಿ ಭಾಗದಲ್ಲಿ ಗಣೇಶೋತ್ಸವವು ತನ್ನದೇ ಆದ ವಿಶಿಷ್ಟ ವೈಭವವನ್ನು ಹೊಂದಿದೆ. ಡೊಳ್ಳು ಕುಣಿತ, ಹುಲಿವೇಷ, ಯಕ್ಷಗಾನ, ಭಜನೆ, ಸಂಗೀತ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಬ್ಬಕ್ಕೆ ಮೆರುಗು ನೀಡುತ್ತವೆ. ಇದರ ಜೊತೆಗೆ ಅನ್ನದಾನ, ರಕ್ತದಾನ, ಸ್ವಚ್ಛತಾ ಅಭಿಯಾನ, ಪರಿಸರ ಜಾಗೃತಿ ಸೇರಿದಂತೆ ಹಲವು ಸಾಮಾಜಿಕ ಸೇವಾ ಚಟುವಟಿಕೆಗಳೂ ನಡೆಯುತ್ತವೆ.


ಉಡುಪಿ, ಮಂಗಳೂರು, ಕುಂದಾಪುರ, ಶಿರೂರು, ಭಟ್ಕಳ, ಕುಮಟಾ, ಅಂಕೋಲಾ ಹಾಗೂ ಕಾರವಾರ ಸೇರಿದಂತೆ ಕರಾವಳಿಯ ಅನೇಕ ಪ್ರದೇಶಗಳಲ್ಲಿ ಗಣೇಶೋತ್ಸವವು ಭಕ್ತಿ, ಸಂಸ್ಕೃತಿ ಮತ್ತು ಸಮುದಾಯದ ಒಗ್ಗಟ್ಟಿನ ಸಂಕೇತವಾಗಿ ಆಚರಿಸಲ್ಪಡುತ್ತದೆ.


ಮಕ್ಕಳಿಗೆ ಸಂಸ್ಕಾರ ನೀಡುವ ವೇದಿಕೆ

ಇಂದಿನ ಯಾಂತ್ರಿಕ ಜೀವನದಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆಗಳಾಗಿ ಉಳಿಯಬಾರದು. ಅವು ಮಕ್ಕಳಲ್ಲಿ ಸಂಸ್ಕಾರ, ಶಿಸ್ತು, ನಾಯಕತ್ವ, ಕಲಾತ್ಮಕ ಪ್ರತಿಭೆ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವ ವೇದಿಕೆಗಳಾಗಬೇಕು.


ಶಾಲೆಗಳು ಮತ್ತು ಸಂಘ–ಸಂಸ್ಥೆಗಳು ಗಣೇಶೋತ್ಸವದ ಸಂದರ್ಭದಲ್ಲಿ ಭಾಷಣ, ಪ್ರಬಂಧ, ಚಿತ್ರಕಲೆ, ಸಂಗೀತ, ನೃತ್ಯ, ಯಕ್ಷಗಾನ, ಭಜನೆ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿ ಮತ್ತು ಯುವಜನರಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸಬಹುದು. ಇಂತಹ ಚಟುವಟಿಕೆಗಳು ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಲು ಮತ್ತು ಬೆಳೆಸಲು ಸಹಕಾರಿಯಾಗುತ್ತವೆ.


ಪರಿಸರ ಸ್ನೇಹಿ ಗಣೇಶೋತ್ಸವ ನಮ್ಮ ಹೊಣೆ

ಸಾವಿರಾರು ವರ್ಷಗಳಿಂದ ಭಾರತೀಯ ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದಿರುವ ಗಣೇಶ ಚತುರ್ಥಿ ಮುಂದಿನ ಪೀಳಿಗೆಗಳಿಗೂ ಆದರ್ಶವಾಗಲಿ. ಭಕ್ತಿ ಮತ್ತು ಸಂಭ್ರಮದ ಜೊತೆಗೆ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನೂ ನಾವು ಮರೆಯಬಾರದು.


ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಬಳಸುವುದು, ನೈಸರ್ಗಿಕ ಬಣ್ಣಗಳಿಗೆ ಆದ್ಯತೆ ನೀಡುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಹಾಗೂ ಜಲಮೂಲಗಳನ್ನು ಕಲುಷಿತಗೊಳಿಸದಂತೆ ವಿಸರ್ಜನಾ ಕ್ರಮಗಳನ್ನು ಅನುಸರಿಸುವುದು ನಮ್ಮೆಲ್ಲರ ಜವಾಬ್ದಾರಿ.


ಭಕ್ತಿ, ಶಿಸ್ತು, ಪರಿಸರ ಸಂರಕ್ಷಣೆ, ಸಾಮಾಜಿಕ ಸೌಹಾರ್ದ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿಕೊಂಡು ಗಣೇಶೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಮಕ್ಕಳನ್ನೂ ಯುವಪೀಳಿಗೆಯನ್ನೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸೋಣ.


ಅದುವೇ ವಿಘ್ನವಿನಾಶಕ ಶ್ರೀ ಗಣೇಶನಿಗೆ ನಾವು ಸಲ್ಲಿಸುವ ನಿಜವಾದ ಗೌರವ.



- ರೇಷ್ಮಾ ಉಮೇಶ್

ಶಿಕ್ಷಕಿ, ಶ್ರೀವಲ್ಲಿ ಪ್ರೌಢಶಾಲೆ, ಚಿತ್ರಾಪುರ, ಭಟ್ಕಳ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top