ಹುನಗುಂದ: ಗಣೇಶ ಹಬ್ಬವನ್ನು ಅತ್ಯಂತ ಶಾಂತಿ, ಸೌಹಾರ್ದದಿಂದ ಆಚರಿಸುವುದರ ಜೊತೆಗೆ ಪೊಲೀಸ್ ಇಲಾಖೆ ಸೂಚಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಡಿಜೆ ಅವಕಾಶವಿರುವುದಿಲ್ಲ ಎಂದು ಪಿಎಸ್ಐ ಸಿದ್ದಾರೂಢ ಆಲದಕಟ್ಟಿ ಖಡಕ್ ಸೂಚನೆ ನೀಡಿದರು.
ಸಂಜೆ ಪಟ್ಟಣದಲ್ಲಿ ಪೊಲೀಸ್ ಠಾಣೆ ಆವರಣದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಮೆರವಣಿಗೆ ಸಂಬಂಧ ಕರೆಯಲಾಗಿದೆ ಸಾರ್ವಜನಿಕ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಗಣಪತಿ ವಿಸರ್ಜನಾ ಮೆರವಣಿಗೆಗೆ ಆಯೋಜಕರು ಅರ್ಜಿಯಲ್ಲಿ ಸೂಚಿಸುವ ಮಾರ್ಗವನ್ನು ಪೊಲೀಸ್ ಇಲಾಖೆ ನೀಡಬೇಕು. ಅದನ್ನು ಪರಿಶೀಲಿಸಿ, ಸ್ಥಳೀಯ ಪರಿಸ್ಥಿತಿ ಹಾಗೂ ಸೂಕ್ಷ್ಮ ಪ್ರದೇಶಗಳನ್ನು ಪರಿಗಣಿಸಿ ಮಾರ್ಗವನ್ನು ತಿಳಿಸಲಾಗುವುದು. ಇಲಾಖೆ ಸೂಚಿಸುವ ಮಾರ್ಗದಲ್ಲಿಯೇ ಮೆರವಣಿಗೆ ನಡೆಸಬೇಕು. ಮೆರವಣಿಗೆ ಸಂದರ್ಭದಲ್ಲಿ ಪ್ರಚೋದನಾತ್ಮಕ ಚಟುವಟಿಕೆಗಳಿಗೆ, ಡಿಜೆ ಸೌಂಡ್, ಪಟಾಕಿ ಸಿಡಿಸಲು ಅವಕಾಶವಿಲ್ಲ. ಸ್ಪೀಕರ್ ಮತ್ತು ಮೈಕ್ ಬಳಸಲಿಕ್ಕೆ ಅವಕಾಶವಿದೆ. ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಧ್ವನಿವರ್ಧಕ ಬಳಕೆ ಮಾಡಬೇಕು, ಅನುಮತಿ ಇಲ್ಲದೆ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಬಾರದು. ನಿಗದಿತ ಸಮಯ ಹಾಗೂ ನಿಯಮಗಳನ್ನು ಉಲ್ಲಂಘಿಸಿ ಧ್ವನಿವರ್ಧಕ ಬಳಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಮುಖಂಡ ಮಹಾಂತೇಶ ಹಳ್ಳೂರ ಮತ್ತು ವಿಜಯ ದಳವಾಯಿ ಮಾತನಾಡಿ ಹನಗುಂದ ಪಟ್ಟಣ ಸೌಹಾರ್ದತೆಗೆ ಹೆಸರುವಾಸಿಯಾದುದ್ದು. ಎಲ್ಲರೂ ಶಾಂತಿ ಸ್ವಹಾರ್ದತೆಯಿಂದ ಹಬ್ಬವನ್ನು ಆಚರಿಸೋಣ. ಡಿಜೆ ಬದಲು ಸ್ಪೀಕರ್ ಹಚ್ಚಲು ಅವಕಾಶ ಮಾಡಿಕೊಡಿ. ಪಟಾಕಿಗಳನ್ನು ಹೆಚ್ಚಾಗಿ ಬಳಸಬೇಡಿ ಮೊದಲೇ ಪ್ರಕೃತಿ ಮುನಿಸಿಕೊಂಡಿದೆ. ಜೊತೆಗೆ ಮಕ್ಕಳ ಕೈಯಲ್ಲಿ ಪಟಾಕಿ ಕೊಟ್ಟು ಅನಾಹುತಗಳಿಗೆ ಎಡೆಮಾಡಿ ಕೊಡಬೇಡಿ, ಗಣೇಶ ವಿಸರ್ಜನೆಗೆ ಸೂಕ್ತ ಸ್ಥಳಾವಕಾಶವನ್ನು ಪುರಸಭೆಯವರು ಮಾಡಬೇಕು. ಗಣಪತಿ ಇರುವರೆಗೆ ಪದೇಪದೇ ವಿದ್ಯುತ್ತನ್ನು ತೆಗೆಯಬಾರದು ಎಂದರು.
ಈ ಸಂದರ್ಭದಲ್ಲಿ ಗ್ರೇಡ್ -2 ತಹಶೀಲ್ದಾರ ಮಹೇಶ ಸಂದಿಗವಾಡ, ಮುಖಂಡರಾದ ಶೇಖರಪ್ಪ ಬಾಗವಾಡಗಿ, ಮಹಾಂತೇಶ ಚಿತ್ತವಾಡಗಿ, ಮಲ್ಲಣ್ಣ ಲೆಕ್ಕಿಹಾಳ, ಸಂಗಮೇಶ್ ಚೂರಿ, ಸಮೀರ ದೇಶಪಾಂಡೆ, ಸಿದ್ದಪ್ಪ ಜಾಲಿಗಿಡದ, ಮುನ್ನಾ ಭಗವಾನ, ನಬಿಸಾಬ ವಾಲಿಕಾರ, ಪೊಲೀಸ್ ಸಿಬ್ಬಂದಿ ನಾಗರಾಜ ಕುಂದರಗಿ ಸೇರಿದಂತೆ ವಿವಿಧ ಗಣಪತಿ ಮೂರ್ತಿ ಪ್ರತಿಷ್ಠಾಪನ ಸಂಘಟಕರು ಭಾಗವಹಿಸಿದ್ದರು. ಪೊಲೀಸ್ ಯಲ್ಲಪ್ಪ ಡೋಣಿ ನಿರೂಪಿಸಿ ವಂದಿಸಿದರು.
ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ:
ಪ್ರತಿಷ್ಠಾಪನೆ ಮುನ್ನ ಪೊಲೀಸ್ ಠಾಣೆ, ಪುರಸಭೆ ಹಾಗೂ ಹೆಸ್ಕಾಂ ಇಲಾಖೆಯ ಅನುಮತಿ ಪಡೆದು, ಶಾಮಿಯಾನ ಹಾಗೂ ಚಪ್ಪರಗಳಲ್ಲಿ ಅನುಮೋದಿತ ಮತ್ತು ಸುರಕ್ಷಿತ ವಿದ್ಯುತ್ ವೈರಿಂಗ್ ಬಳಸಬೇಕು.
- ಸಿದ್ದಾರೂಢ ಆಲದಕಟ್ಟಿ. ಪಿಎಸ್ಐ ಹುನಗುಂದ.


