ಪ್ರಸಾದಿನೀ ಆಸ್ಪತ್ರೆ: ಪ್ರಥಮ ಚಿಕಿತ್ಸೆ ಹಾಗೂ ಜೀವ ರಕ್ಷಕ ಕೌಶಲ್ಯಗಳ ಕುರಿತು ಪ್ರಾಯೋಗಿಕ ಕಾರ್ಯಾಗಾರ

Upayuktha
0

 


ಪುತ್ತೂರು: ನರಿಮೊಗರುವಿನ ಪ್ರಸಾದಿನೀ ಆಯುರ್ ನಿಕೇತನ ಆಯುರ್ವೇದ ಆಸ್ಪತ್ರೆ ವತಿಯಿಂದ “ಪ್ರಥಮ ಚಿಕಿತ್ಸೆ ಮತ್ತು ಜೀವ ರಕ್ಷಕ ಕೌಶಲ್ಯಗಳು” ಎಂಬ ವಿಷಯದ ಕುರಿತು ವಿಶೇಷ ಕಾರ್ಯಾಗಾರವು ಸೆ. 15ರಂದು ಆಸ್ಪತ್ರೆಯ ಆವರಣದಲ್ಲಿ ನಡೆಯಿತು.


ಪ್ರಸಾದಿನಿ ಆಯುರ್‌ನಿಕೇತನದ ಮೆಡಿಕಲ್ ಡೈರೆಕ್ಟರ್ ಹಾಗೂ ಖ್ಯಾತ ಆಯುರ್ವೇದ ನೇತ್ರ ತಜ್ಞರಾದ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರು ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಪರಿಚಯಿಸಿದರು.


ಕಾರ್ಯಾಗಾರದಲ್ಲಿ KIOCLನ ನಿವೃತ್ತ ವೈದ್ಯಕೀಯ ಅಧೀಕ್ಷಕರಾದ ಡಾ. ಬಿ. ರಾಮಚಂದ್ರ ಭಟ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲು ಅಗತ್ಯವಿರುವ ಪ್ರಥಮ ಚಿಕಿತ್ಸೆ ಹಾಗೂ ಮೂಲಭೂತ ಜೀವ ರಕ್ಷಕ ಕೌಶಲ್ಯಗಳ ಕುರಿತು ಮಾಹಿತಿ ನೀಡಿದರು.


ಕಾರ್ಯಾಗಾರದಲ್ಲಿ ಗಾಯಗಳಿಗೆ ನೀಡಬೇಕಾದ ಪ್ರಥಮ ಚಿಕಿತ್ಸೆ ಮತ್ತು ವಿವಿಧ ರೀತಿಯ ಬ್ಯಾಂಡೇಜ್‌ಗಳ ವಿಧಾನ, ಮೂಳೆ ಮುರಿತದ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಅಂಗಾಂಗಗಳನ್ನು ಸ್ಥಿರಗೊಳಿಸುವ (Immobilisation) ವಿಧಾನ, ಸುಟ್ಟ ಗಾಯಗಳಿಗೆ ಪ್ರಥಮ ಚಿಕಿತ್ಸೆ, ಅಪಸ್ಮಾರ (Epilepsy) ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಅಪಘಾತ ಸಂದರ್ಭಗಳಲ್ಲಿ ತುರ್ತು ನೆರವು ಕುರಿತು ವಿವರವಾಗಿ ತಿಳಿಸಲಾಯಿತು.


ಇದರ ಜೊತೆಗೆ ಮಾನವ ದೇಹದ ಮೂಲಭೂತ ಅಂಗರಚನೆ (Basic Anatomy), ತುರ್ತು ಪರಿಸ್ಥಿತಿಯನ್ನು ಗುರುತಿಸುವ ವಿಧಾನ ಹಾಗೂ ಹೃದಯ-ಶ್ವಾಸಕೋಶ ಪುನಶ್ಚೇತನ (Cardiopulmonary Resuscitation – CPR) ಕುರಿತು ಪ್ರಾಯೋಗಿಕವಾಗಿ ವಿವರಿಸಲಾಯಿತು.


ಕಾರ್ಯಾಗಾರದ ವಿಶೇಷತೆಯಾಗಿ ಭಾಗವಹಿಸಿದವರಿಗೆ ವಿವಿಧ ತುರ್ತು ಪರಿಸ್ಥಿತಿಗಳಲ್ಲಿ ಹೇಗೆ ತಕ್ಷಣ ಸ್ಪಂದಿಸಬೇಕು ಎಂಬುದನ್ನು ಪ್ರಾಯೋಗಿಕ ಪ್ರದರ್ಶನ ಮತ್ತು ಕೈಯಾರೆ ಅಭ್ಯಾಸದ ಮೂಲಕ ತರಬೇತಿ ನೀಡಲಾಯಿತು. CPR ಸೇರಿದಂತೆ ಜೀವ ರಕ್ಷಕ ತಂತ್ರಗಳನ್ನು ಪ್ರಾತ್ಯಕ್ಷಿಕೆಯೊಂದಿಗೆ ಕಲಿಸಲಾಯಿತು.


ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ, ಚಿಕಿತ್ಸಕರು, ವೈದ್ಯಕೀಯೇತರ ಸಿಬ್ಬಂದಿ ಹಾಗೂ ಇತರರು ಕಾರ್ಯಾಗಾರದಲ್ಲಿ ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದರು. ತುರ್ತು ಸಂದರ್ಭಗಳಲ್ಲಿ ಸೂಕ್ತ ಸಮಯದಲ್ಲಿ ಸರಿಯಾದ ಪ್ರಥಮ ಚಿಕಿತ್ಸೆ ನೀಡುವುದರಿಂದ ಜೀವಹಾನಿಯನ್ನು ತಡೆಗಟ್ಟಲು ಸಾಧ್ಯವಾಗುವುದರಿಂದ ಇಂತಹ ತರಬೇತಿಗಳು ಸಾರ್ವಜನಿಕರು ಹಾಗೂ ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ಅತ್ಯಂತ ಉಪಯುಕ್ತವಾಗಿವೆ ಎಂದು ತಿಳಿಸಲಾಯಿತು.


ಕಾರ್ಯಾಗಾರವು “ಕಲಿಯೋಣ, ಅಭ್ಯಾಸ ಮಾಡೋಣ, ಸನ್ನದ್ಧರಾಗೋಣ, ಜೀವ ಉಳಿಸೋಣ” ಎಂಬ ಸಂದೇಶದೊಂದಿಗೆ ಯಶಸ್ವಿಯಾಗಿ ನಡೆಯಿತು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top