ಧಾರವಾಡ: ನಾಡಿನ ಪ್ರಖ್ಯಾತ ಮನೋರೋಗ ತಜ್ಞರು, ಸಮಾಜಮುಖಿ ಹಿತಚಿಂತಕರು ಹಾಗೂ ಧೀಮಂತ ಮನೋವಿಜ್ಞಾನಿ ಡಾ. ಆನಂದ ಪಾಂಡುರಂಗಿ ಅವರು ನಿಧನರಾಗಿದ್ದಾರೆ.
ಉತ್ತರ ಕರ್ನಾಟಕದ ಪ್ರಮುಖ ಮನೋವಿಜ್ಞಾನಿಯಾಗಿ ಗುರುತಿಸಿಕೊಂಡಿದ್ದ ಅವರು, ವೈದ್ಯಕೀಯ ವೃತ್ತಿಯನ್ನು ನಿಸ್ವಾರ್ಥ ಸೇವೆ ಹಾಗೂ ದಾಸೋಹದಂತೆ ಭಾವಿಸಿದ್ದರು. ಮಾನಸಿಕ ಒತ್ತಡ, ಖಿನ್ನತೆ, ವೈವಾಹಿಕ ಬಿಕ್ಕಟ್ಟು ಹಾಗೂ ಅಗಣಿತ ಕೌಟುಂಬಿಕ ಸಮಸ್ಯೆಗಳಿಂದ ಬಳಲುತ್ತಿದ್ದವರಿಗೆ ಅವರು ಆಪ್ತ ಸಮಾಲೋಚನೆ ಹಾಗೂ ಉತ್ತಮ ಚಿಕಿತ್ಸೆ ನೀಡಿ ಬದುಕಿಗೆ ದಾರಿದೀಪವಾಗಿದ್ದರು. ಕಿಶೋರರ ಮಾನಸಿಕ ರೋಗಗಳ ನಿರ್ಮೂಲನೆ ಮತ್ತು ವ್ಯಸನಮುಕ್ತ ಸಮಾಜದ ನಿರ್ಮಾಣಕ್ಕಾಗಿ ಅವರು ನಿರಂತರವಾಗಿ ಶ್ರಮಿಸಿದ್ದರು.
ಉತ್ತಮ ವಾಗ್ಮಿ ಹಾಗೂ ಶ್ರೇಷ್ಠ ಸಾಹಿತ್ಯ ಸೃಜಕರಾಗಿದ್ದ ಡಾ. ಆನಂದ ಪಾಂಡುರಂಗಿ ಅವರು, ಶಿಕ್ಷಣ, ಸಾಮಾಜಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸಂವಹನಕಾರರಾಗಿ ಮತ್ತು ಮಾನಸಿಕ ಆರೋಗ್ಯ ಜಾಗೃತಿ ಪರಿಣಿತರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಸೈಕ್ರಿಯಾಟಿಕ್ ಗಿಲ್ಡ್ ಸಮ್ಮೇಳನದ ಸಲಹಾ ಸಮಿತಿ ಸದಸ್ಯರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಅಂಧ, ಅನಾಥ, ಬಡವರು ಹಾಗೂ ದೀನದುರ್ಬಲರ ಬಾಳಿಗೆ ಆಸರೆಯಾಗಿದ್ದ ಅವರು ಮಾನವೀಯತೆಯ ಸಾಕಾರ ಸ್ವರೂಪರಾಗಿದ್ದರು.
ಅವರ ಈ ಅನನ್ಯ ಸೇವೆಯನ್ನು ಪರಿಗಣಿಸಿ ಬಿ.ಸಿ. ರಾಯ್ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಪುರಸ್ಕಾರಗಳು ಲಭಿಸಿದ್ದವು. ಬಹುಮುಖ ಪ್ರತಿಭೆಯ ಆದರ್ಶ ವೈದ್ಯರ ಅಗಲಿಕೆಯಿಂದ ವೈದ್ಯಲೋಕಕ್ಕೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ನಿಧನಕ್ಕೆ ಅಭಿಮಾನಿಗಳು, ಹಿತೈಷಿಗಳು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
