ಧರ್ಮಾಭ್ಯುದಯ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳ ಆಯೋಜನೆ

Shreya Hegde
0
ಭಜನೆ ಹಾಗೂ ಶ್ಲೋಕ ಹಿರಿಯರು ಕಲಿಸಿಕೊಟ್ಟ ಅದ್ಭುತ ಶಕ್ತಿ: ಸುಬ್ರಹ್ಮಣ್ಯ ನಟ್ಟೋಜ




ಪುತ್ತೂರು : ಸನಾತನ ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜಾಗೃತರಾಗಬೇಕು. ಭಜನೆ ಇರುವಲ್ಲಿ ವಿಭಜನೆ ಇರುವುದಿಲ್ಲ. ಭಜನೆಯ ಮೂಲಕ ದೇವರನ್ನು ನಮ್ಮಲ್ಲಿ ನೆಲೆಗೊಳಿಸಬಹುದು. ಭಜನೆ ಹಾಗೂ ಶ್ಲೋಕಗಳು ಹಿರಿಯರು ನಮಗೆ ಕಲಿಸಿಕೊಟ್ಟಿರುವ ಅದ್ಭುತ ಶಕ್ತಿಯಾಗಿವೆ ಎಂದು ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.

ಅವರು ಶನಿವಾರ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಪುತ್ತೂರಿನ ಧರ್ಮಾಭ್ಯುದಯ–ಧರ್ಮ ಶಿಕ್ಷಣ ಸಮಿತಿಯ ವತಿಯಿಂದ ಶ್ರೀ ಗಣೇಶ ಚೌತಿ ಪ್ರಯುಕ್ತ ಧರ್ಮ ಶಿಕ್ಷಣ ಕೇಂದ್ರಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ದೇಶವು ಆದಿ–ಅಂತ್ಯವಿಲ್ಲದ ಸನಾತನ ಧರ್ಮವನ್ನು ಹೊಂದಿದ್ದು, ಜಗತ್ತಿಗೆ ಯೋಗವಿದ್ಯೆಯನ್ನು ಪರಿಚಯಿಸಿದೆ. ಸನಾತನ ಧರ್ಮದ ಪರಂಪರೆಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ಹೇಳಿದರು.

ಧರ್ಮ ಶಿಕ್ಷಣ ಪಡೆಯುತ್ತಿರುವ ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ಭಜನೆ, ಭಾಷಣ, ಪ್ರಬಂಧ, ಚಿತ್ರಕಲೆ ಹಾಗೂ ಶ್ಲೋಕ ಕಂಠಪಾಠ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಬೆಳ್ಳಿಪ್ಪಾಡಿ ಧರ್ಮ ಶಿಕ್ಷಣ ಕೇಂದ್ರ, ಅಜ್ಜಿಕಲ್ಲು ಶ್ರೀ ಶಕ್ತಿ ಜಟಾಧಾರಿ ಭಜನಾ ಮಂದಿರ ಧರ್ಮಶಿಕ್ಷಣ ಕೇಂದ್ರ ಹಾಗೂ ಈಶ್ವರಮಂಗಲ ಧರ್ಮಾಭ್ಯುದಯ ಧರ್ಮ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ನಟ್ಟೋಜ ಉಪಸ್ಥಿತರಿದ್ದರು.

ಸ್ಪರ್ಧೆಗಳ ಫಲಿತಾಂಶ

ಭಜನಾ ಸ್ಪರ್ಧೆಯಲ್ಲಿ ಈಶ್ವರಮಂಗಲ ಧರ್ಮಾಭ್ಯುದಯ ಧರ್ಮ ಶಿಕ್ಷಣ ಕೇಂದ್ರ ಪ್ರಥಮ, ಅಜ್ಜಿಕಲ್ಲು ಶ್ರೀ ಶಕ್ತಿ ಜಟಾಧಾರಿ ಭಜನಾ ಮಂದಿರ ಧರ್ಮಶಿಕ್ಷಣ ಕೇಂದ್ರ ದ್ವಿತೀಯ ಹಾಗೂ ಬೆಳ್ಳಿಪ್ಪಾಡಿ ಧರ್ಮ ಶಿಕ್ಷಣ ಕೇಂದ್ರ ತೃತೀಯ ಸ್ಥಾನ ಗಳಿಸಿತು.

ಹಿರಿಯ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಬೆಳ್ಳಿಪ್ಪಾಡಿ ಧರ್ಮಶಿಕ್ಷಣ ಕೇಂದ್ರದ ಭುವನ್ ಎ. ಪ್ರಥಮ ಹಾಗೂ ಅಜ್ಜಿಕಲ್ಲು ಧರ್ಮ ಶಿಕ್ಷಣ ಕೇಂದ್ರದ ಯಶ್ವಿನ್ ರೈ ದ್ವಿತೀಯ ಸ್ಥಾನ ಪಡೆದರು. ಪ್ರೌಢಶಾಲಾ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಬೆಳ್ಳಿಪ್ಪಾಡಿ ಧರ್ಮಶಿಕ್ಷಣ ಕೇಂದ್ರದ ಹೃತಿಕಾ ಕೆ. ಪ್ರಥಮ ಹಾಗೂ ಶ್ರಾವ್ಯ ದ್ವಿತೀಯ ಸ್ಥಾನ ಗಳಿಸಿದರು.

ಹಿರಿಯ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಅಜ್ಜಿಕಲ್ಲು ಧರ್ಮ ಶಿಕ್ಷಣ ಕೇಂದ್ರದ ಬಿಂದುಶ್ರೀ ಪ್ರಥಮ ಸ್ಥಾನ ಪಡೆದರು. ಪ್ರೌಢಶಾಲಾ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಬೆಳ್ಳಿಪ್ಪಾಡಿ ಧರ್ಮಶಿಕ್ಷಣ ಕೇಂದ್ರದ ಖುಷಿ ಪ್ರಥಮ, ಈಶ್ವರಮಂಗಲ ಧರ್ಮ ಶಿಕ್ಷಣ ಕೇಂದ್ರದ ಮಾನಸ ದ್ವಿತೀಯ ಹಾಗೂ ಬೆಳ್ಳಿಪ್ಪಾಡಿ ಧರ್ಮಶಿಕ್ಷಣ ಕೇಂದ್ರದ ಸೋಕ್ಷಾ ತೃತೀಯ ಸ್ಥಾನ ಗಳಿಸಿದರು.

ಕಿರಿಯ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ಅಜ್ಜಿಕಲ್ಲು ಧರ್ಮಶಿಕ್ಷಣ ಕೇಂದ್ರದ ರಿತ್ವಿನ್ ರೈ ಕೆ. ಪ್ರಥಮ ಸ್ಥಾನ ಪಡೆದರು. ಹಿರಿಯ ವಿಭಾಗದಲ್ಲಿ ಬೆಳ್ಳಿಪ್ಪಾಡಿ ಧರ್ಮಶಿಕ್ಷಣ ಕೇಂದ್ರದ ಗ್ರೀಷ್ಮಾ ಪ್ರಥಮ, ಈಶ್ವರಮಂಗಲ ಧರ್ಮ ಶಿಕ್ಷಣ ಕೇಂದ್ರದ ಪೂರ್ತಿ ಕೆ. ದ್ವಿತೀಯ ಹಾಗೂ ಅಜ್ಜಿಕಲ್ಲು ಧರ್ಮ ಶಿಕ್ಷಣ ಕೇಂದ್ರದ ಧನ್ವಿತ್ ತೃತೀಯ ಸ್ಥಾನ ಗಳಿಸಿದರು.

ಪ್ರೌಢಶಾಲಾ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ಈಶ್ವರಮಂಗಲ ಧರ್ಮ ಶಿಕ್ಷಣ ಕೇಂದ್ರದ ಎನ್.ಕೆ. ಜೀವಜ್ ಪ್ರಥಮ, ಬೆಳ್ಳಿಪ್ಪಾಡಿ ಧರ್ಮ ಶಿಕ್ಷಣ ಕೇಂದ್ರದ ಸೋನಾಲಿ ಕೆ.ಎಸ್. ದ್ವಿತೀಯ ಹಾಗೂ ಅಜ್ಜಿಕಲ್ಲು ಧರ್ಮ ಶಿಕ್ಷಣ ಕೇಂದ್ರದ ಮನ್ವಿತ್ ತೃತೀಯ ಸ್ಥಾನ ಪಡೆದರು.

ಕಿರಿಯ ವಿಭಾಗದ ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ಈಶ್ವರಮಂಗಲ ಧರ್ಮಶಿಕ್ಷಣ ಕೇಂದ್ರದ ಸಮರ್ಥ್ ಪ್ರಥಮ ಹಾಗೂ ಅಜ್ಜಿಕಲ್ಲು ಧರ್ಮ ಶಿಕ್ಷಣ ಕೇಂದ್ರದ ನಿಶ್ವಿ ದ್ವಿತೀಯ ಸ್ಥಾನ ಗಳಿಸಿದರು. ಹಿರಿಯ ವಿಭಾಗದಲ್ಲಿ ಈಶ್ವರಮಂಗಲ ಧರ್ಮಶಿಕ್ಷಣ ಕೇಂದ್ರದ ಸಮೃದ್ಧಿ ಪ್ರಥಮ, ಅಜ್ಜಿಕಲ್ಲು ಧರ್ಮ ಶಿಕ್ಷಣ ಕೇಂದ್ರದ ಮಾನ್ವಿ ದ್ವಿತೀಯ ಹಾಗೂ ಬೆಳ್ಳಿಪ್ಪಾಡಿ ಧರ್ಮ ಶಿಕ್ಷಣ ಕೇಂದ್ರದ ತಾನ್ಯ ತೃತೀಯ ಸ್ಥಾನ ಪಡೆದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲೆ ಮಾಲತಿ ಡಿ., ಉಪಪ್ರಾಂಶುಪಾಲೆ ಸುಜನಿ ಬೋರ್ಕರ್, ಧರ್ಮಶಿಕ್ಷಣ ಸಂಸ್ಥೆಗಳ ಮಾತಾಜಿಯವರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕಿ ಶೈಲಾಶ್ರೀ ಸ್ವಾಗತಿಸಿ, ವಂದಿಸಿದರು. ಶಿಕ್ಷಕಿ ಪ್ರಿಯಾಶ್ರೀ ಕೆ.ಎಸ್. ಬಹುಮಾನಿತರ ಪಟ್ಟಿಯನ್ನು ವಾಚಿಸಿದರು.


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top