ಮಂಗಳೂರು : ಕೆನರಾ ಕಾಲೇಜು (ಸ್ವಾಯತ್ತ)ದ ಹಿಂದಿ ವಿಭಾಗದ ವತಿಯಿಂದ ‘ಹಿಂದಿ ದಿವಸ್’ ಕಾರ್ಯಕ್ರಮವನ್ನು ಕಾಲೇಜಿನ ಶ್ರೀಮತಿ ರತ್ನ ಎಸ್. ಶೆಣೈ ಮೆಮೋರಿಯಲ್ ಹಾಲ್‌ನಲ್ಲಿ ಬುಧವಾರ (ಸೆ.16) ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರಿನ ಭವಿಷ್ಯ ನಿಧಿ ಕಚೇರಿಯ ನಿವೃತ್ತ ಹಿಂದಿ ಅಧಿಕಾರಿ ಡಾ. ಅನುರಾಧಾ ಕೆ., ಸಮಾಜ ಮತ್ತು ಸಾಹಿತ್ಯದಲ್ಲಿ ಹಿಂದಿ ಭಾಷೆಗೆ ವಿಶಿಷ್ಟ ಹಾಗೂ ಗೌರವದ ಸ್ಥಾನವಿದೆ ಎಂದರು. ಭಾಷೆಯ ಮಹತ್ವ ಹಾಗೂ ಲಿಪಿ ಮತ್ತು ಭಾಷೆಯ ನಡುವಿನ ಅನನ್ಯ ಬಾಂಧವ್ಯವನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ತಿಳಿಸಿದರು. ಹಿಂದಿ ಭಾಷೆಯ ಸ್ಥಾನಮಾನ, ರಾಷ್ಟ್ರಭಾಷೆ ಮತ್ತು ರಾಜ್ಯಭಾಷೆಯ ಪರಿಕಲ್ಪನೆ, ವಿವಿಧ ಕ್ಷೇತ್ರಗಳಲ್ಲಿ ಹಿಂದಿ ಭಾಷೆಯ ಬೆಳವಣಿಗೆ ಹಾಗೂ ಅದರ ಪ್ರಸ್ತುತ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.
ಪ್ರಸ್ತುತ ಸಂದರ್ಭದಲ್ಲಿ ಹಿಂದಿ ಭಾಷೆಯ ಮೂಲಕ ಅನೇಕ ವೃತ್ತಿ ಹಾಗೂ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಭಾಷಾ ಜ್ಞಾನವನ್ನು ವೃತ್ತಿಜೀವನದೊಂದಿಗೆ ಸಮನ್ವಯಗೊಳಿಸಿಕೊಂಡು ಉನ್ನತ ಪ್ರಗತಿ ಸಾಧಿಸಬೇಕು ಎಂದು ಅವರು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಹಿಂದಿ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುಜಾತಾ ಜಿ. ನಾಯಕ್, ಉಪನ್ಯಾಸಕಿ ಡಾ. ನಮಿತಾ ಕೆ. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಥಮ ಬಿ.ಎಸ್‌ಸಿ ವಿದ್ಯಾರ್ಥಿಗಳಿಂದ ಸರಸ್ವತಿ ವಂದನೆ ಹಾಗೂ ದೋಹಾ ಗಾಯನ ನಡೆಯಿತು. ದ್ವಿತೀಯ ಬಿ.ಎಸ್‌ಸಿ ವಿದ್ಯಾರ್ಥಿನಿ ಗೌತಮಿ ಸ್ವಾಗತಿಸಿದರು. ಪೂಜಾ ಅತಿಥಿ ಪರಿಚಯ ಮಾಡಿದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಆರ್ಯಾ ಭಟ್ ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ಬಿ.ಎಸ್‌ಸಿ ವಿದ್ಯಾರ್ಥಿ ಜ್ಞಾನೇಶ್ವರ ವಂದನಾರ್ಪಣೆ ಸಲ್ಲಿಸಿದರು.
