ಭೋಜನ ಯುದ್ಧ- ದ್ವಾಪರದ ಹಸ್ತಿನೆಯ ಶೃಂಗಸಭೆಯಿಂದ ಕಲಿಯುಗದ ಬ್ರಿಕ್ಸ್ ಶೃಂಗಸಭೆಯವರೆಗೆ!

Shreya Hegde
0

ಕೃಷ್ಣ ಸಂಧಾನ ಪ್ರಸಂಗ (ಸುಮಾರು 5000 ವರ್ಷಗಳ ಹಿಂದೆ) 

ಪಾಂಡವರ ಪರವಾಗಿ ಸಂಧಾನದ ಹೊಣೆ ಹೊತ್ತು ಕೃಷ್ಣ ಹಸ್ತಿನಾವತಿಗೆ ಬಂದಿದ್ದಾನೆ.  


ದುರ್ಯೋಧನನ ಆಹ್ವಾನದ ಮೇರೆಗೆ ಹಸ್ತಿನಾವತಿಯ ಸಂಧಾನದ ಶೃಂಗಸಭೆಗೆ ನೂರಾರು ರಾಜರು ಮತ್ತು ಸಾಮಂತ ಅರಸರು ಬಂದಿದ್ದರು.  ಮದ್ರ ದೇಶದ ರಾಜ ಶಲ್ಯ, ಪ್ರಾಜ್ಯೋತಿಷಪುರದ ರಾಜ ಭಗದತ್ತ, ಸಿಂಧು ದೇಶದ ಜಯದ್ರಥ, ಅವಂತಿಯ ರಾಜರಾದ ವಿಂಧ, ಅನುವಿಂಧ, ಕಳಿಂಗದ ರಾಜ.... ಹೀಗೆ ರಾಜ ಮಹಾರಾಜರ ಸಂಕುಲವೇ ಸೇರಿತ್ತು.  ನಾರದ, ಕಣ್ವ, ಪರಶುರಾಮಾದಿಗಳ ಮನಿಗಡಣವೂ ಸಭೆಯಲ್ಲಿ ಉಪಸ್ಥಿತರಿದ್ದರು.


ಕೌರವನ ಶೃಂಗಸಭೆಗೆ ಬಂದ ಕೃಷ್ಣನನ್ನು ಕುರಿತು ಕೌರವ ಮಾತು ಶುರು ಮಾಡಬೇಕಾಗಿದ್ದು ಉಭಯ ಪಕ್ಷಗಳ (ಪಾಂಡವ-ಕೌರವ) ನಡುವೆ ಏರ್ಪಡಬೇಕಾಗಿದ್ದು ಶಾಂತಿ ಮಾತುಕತೆ,  ಅರ್ಧ ರಾಜ್ಯದ ಅಧಿಕಾರ ಹಸ್ತಾಂತರ, ಈ ಹಿಂದೆ ಆಗಿದ್ದ ಒಪ್ಪಂದಗಳ ನಿರ್ಣಾಯಕ ಅನುಷ್ಠಾನ ಅಥವಾ ಯುದ್ಧ ನಿರ್ಣಯ.


ಆದರೆ....


ಕೌರವ ಪ್ರಾರಂಭಿಸಿದ್ದು,  ಸಂಧಾನದ ಹಿಂದಿನ ದಿನ ಕೌರವನ ಅರಮನೆಯಲ್ಲಿ ರಾಜೋಪಚಾರದ ಚಪ್ಪರ ಹಾಕಿ, ನಾನಾ ಭಕ್ಷ್ಯ-ಭೋಜ್ಯಗಳನ್ನು ಸಿದ್ಧಪಡಿಸಿ ಕಾಯುತ್ತಿದ್ದರೂ, ಕೃಷ್ಣ ವಿದುರನ ಮನೆಯ ಊಟ ಮಾಡಿದ ವಿಚಾರವನ್ನು.  "ನಮ್ಮವರ ಮನೆಗಳಿಗೆ ಭೋಜನಕ್ಕೆ ಯಾಕೆ ಬರಲಿಲ್ಲ?" ಎಂಬ ಪ್ರಶ್ನೆಯ ಅವಹೇಳನದ ಮಾತುಗಳೊಂದಿಗೆ.  


ಕವಿ ಕುಮಾರವ್ಯಾಸನ ಮಾತಿನಲ್ಲಿ ದುರ್ಯೋಧನನ ಮಾತುಗಳು ಹೀಗಿದ್ದವು:

"ನೀವು ಬಿಜಯಂಗೈವಿರೆಂದು ಮ

ಹಾ ವಿಳಾಸದೊಳಳವಡಿಸಿ ನಾ

ನಾ ವಿಧದ ಷಡುರಸವ ಗರುಡಿಯಲಿಂದು ಸವೆಸಿದೆನು

ದೇವ ನಮ್ಮರಮನೆಗೆ ಬಾರದೆ

ನೀವು ವಿದುರನ ಮನೆಯಲುಂಡಿರೆ

ಗೋವಳಿಗತನ ನಿಮ್ಮ ಮೈ ಸಿರಿ ತಪ್ಪದಾಯ್ತೆಂದ"


"ಈ ಕೃಪನನೀ ದ್ರೋಣನೀ ಗಂ

ಗಾ ಕುಮಾರನ ಮನೆಯ ಹೊಗದವಿ

ವೇಕಿ ತೊತ್ತಿನ ಮಗನ ಮನೆಯಲಿ ಹಸಿವನೂಕಿದಿರಿ

ಸಾಕಿದಾತನು ನಂದಗೋಪನು

ಕಾಕ ಬಳಸಲು ಸಲ್ಲದೇ ನಿಮ

ಗೇಕೆ ರಾಯರ ನೀತಿಯೆಂದನು ನಗುತ ಕುರುರಾಯ"


("ನೀವು ಆಗಮಿಸುವಿರೆಂದು ನಾನು ನಮ್ಮ ಮನೆಯನ್ನು ನಿಮ್ಮ ವಾಸಕ್ಕಾಗಿ ಸಿದ್ಧಪಡಿಸಿ ಷಡ್ರಸಭರಿತ ಊಟವನ್ನು ತಯಾರು ಮಾಡಿಸಿದ್ದೆ. ಆದರೆ ನೀವು ನಮ್ಮ ಅರಮನೆಗೆ ಬಾರದೆ ಕುಲಹೀನ ವಿದುರನ ಮನೆಗೆ ಹೋದಿರಿ.  ದನಕಾಯುವವನಿಗೆ ಕುಲ ಹೀನನ ಮನೆಯ ಊಟವೇ ಸರಿ.  ಹಸ್ತಿನಾವತಿಯಲ್ಲಿ ಕೃಪ, ದ್ರೋಣ, ಭೀಷ್ಮರ ಮನೆಗೆ ಹೋಗದೆ ಅವಿವೀಕಿಯಾದ ದಾಸಿಯ ಮಗನಾದ ವಿದುರನ ಮನೆಗೆ ಹೋಗಿ ನಿಮ್ಮ ಹಸಿವನ್ನು ನೀಗಿಸಿಕೊಂಡಿರಿ, ನಿಮ್ಮನ್ನು ಸಾಕಿದವ ನಂದಗೋಪನು, ನಿಮ್ಮ ಕ್ಷುಲ್ಲಕು ಬುದ್ಧಿಯನ್ನು ಬಳಸುವುದು ಸರಿಯೇ? ನಿಮಗೇಕೆ ರಾಜರ ನೀತಿಮಾತುಗಳು ಎಂದು ದುರ್ಯೋಧನನು ಕೃಷ್ಣನಿಗೆ ವ್ಯಂಗ್ಯವಾಗಿ ಹೀಯಾಳಿಸಿ ನುಡಿದ)


****


ಬ್ರಿಕ್ಸ್ ಶೃಂಗಸಭೆ ಸಮ್ಮೇಳನ  (ಸೆಪ್ಟೆಂಬರ್ 2026 AD)


ಮೊನ್ನೆ ದೆಹಲಿಯಲ್ಲಿ (ಅವತ್ತಿನ ಇಂದ್ರಪ್ರಸ್ಥ) ಬ್ರಿಕ್ಸ್ ಶೃಂಗಸಭೆಯ ಔತಣಕೂಟದಲ್ಲಿ ಸಸ್ಯಾಹಾರಿ ಭಕ್ಷ್ಯಗಳನ್ನು ಮಾತ್ರ ವ್ಯವಸ್ಥೆ ಮಾಡಿದ್ದ ಕೇಂದ್ರ ಸರಕಾರದ ನಿಲುವನ್ನು ಕಾಂಗ್ರೆಸ್ ಟೀಕಿಸಿದೆ. “ಬಿಜೆಪಿ ತನ್ನ ಆಹಾರ ಪದ್ಧತಿಯನ್ನು ವಿದೇಶಿ ಗಣ್ಯರ ಮೇಲೆ ಹೇರಿದೆ. ದೇಶದ ವೈವಿಧ್ಯಮಯ ಅಡುಗೆ ಸಂಸ್ಕೃತಿಯನ್ನು ಜಾಗತಿಕ ನಾಯಕರಿಂದ ಬಚ್ಚಿಟ್ಟಿದೆ,'' ಎಂದು ದೂರಿದೆ. “ಭಾರತದಲ್ಲಿ ಶೇ. 80ರಷ್ಟು ಜನರು ಮಾಂಸಾಹಾರಿಗಳು.

ಭಾರತೀಯ ಮಾಂಸಾಹಾರ ಅತ್ಯಂತ ಸ್ವಾದಿಷ್ಟವಾಗಿದೆ.  ಸ್ವಾದಿಷ್ಟ ಮಾಂಸಾಹಾರವನ್ನು ಅತಿಥಿಗಳಿಗೆ ಬಡಿಸದೆ" ಎಂದು, ಬ್ರಿಕ್ಸ್ ಗಣ್ಯರಿಗೆ ನೀಡಲಾದ ಸಸ್ಯಾಹಾರ ಪದ್ಧತಿಯನ್ನು ಪರೋಕ್ಷವಾಗಿ ವಿರೋಧಪಕ್ಷದ ನಾಯಕರು ಟೀಕಿಸಿದ್ದಾರೆ. 


ವಿಶ್ವದ ಬೇರೆ ಬೇರೆ ಭಾಗದಲ್ಲಿ ನೆಡೆಯುತ್ತಿರುವ ಯುದ್ಧ, ಅದರ ಪರಿಣಾಮಗಳು, ಆರ್ಥಿಕ ಮತ್ತು ವ್ಯಾವಹಾರಿಕ ಒಪ್ಪಂದಗಳು, ಹವಾಮಾನ ವೈಪರಿತ್ಯ, ಆಗುತ್ತಿರುವ ಅದರ ಆತಂಕದ ಪರಿಣಾಮಗಳು, ಅದಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು.... ಇತ್ಯಾದಿಗಳ ಬಗ್ಗೆ ಸಭೆಯಲ್ಲಿ ಹೇಗೆ ಚರ್ಚಿಸಬೇಕು? ಏನೆಲ್ಲ ನಿರ್ಣಯಗಳಾಗಬೇಕು?  ಏನೆಲ್ಲ ಆಗಬಾರದು? ಎಂದೆಲ್ಲ ಗಂಭೀರವಾಗಿ ಯೋಚಿಸಿ, ಸಲಹೆ ಸೂಚನೆಗಳನ್ನು ಆಢಳಿತದ ಸರಕಾರಕ್ಕೆ ಕೊಡಬೇಕಾದ ವಿರೋಧ ಪಕ್ಷಗಳು, ತೀರ ಕ್ಷುಲ್ಲಕವಾಗಿ ಮಾತಾಡುತ್ತ, ಸಸ್ಯಾಹಾರಿ ಭಕ್ಷ್ಯಗಳನ್ನು ಮಾತ್ರ ವ್ಯವಸ್ಥೆ ಮಾಡಿ, ಮಾಂಸಾಹಾರ ವ್ಯವಸ್ಥೆ ಮಾಡದಿರುವುದನ್ನು ಅಂತರರಾಷ್ಟ್ರೀಯ ಗಂಭೀರ ವಿಚಾರ ಎನ್ನುವಂತೆ ಪ್ರಾಸ್ತಾಪಿಸಿ, ತನ್ನ ತೂಕವನ್ನು ತಾನೇ ಕಳೆದುಕೊಂಡಿದೆ. 


**** 


ಕೃಷ್ಣ ಸಂಧಾನದಲ್ಲಿ, ದುರ್ಯೋಧನನ ಊಟದ ಕ್ಷುಲ್ಲಕ ವಿಚಾರದ ವ್ಯಂಗ್ಯಕ್ಕೆ ಕೃಷ್ಣ ಮಾತಿನಲ್ಲೇ ತಪರಾಕಿ ಕೊಟ್ಟು ಸಭೆಯನ್ನು ಗಂಭೀರ ವಿಚಾರದ ಕಡೆಗೆ ಕೊಂಡು ಹೋಗುತ್ತಾನೆ.  ಬ್ರಿಕ್ಸ್ ಸಭೆಯಲ್ಲೂ ಗಂಭೀರ ವಿಚಾರಗಳು ಚರ್ಚೆ ಆಗುತ್ತಿವೆ.  ವಿರೋಧ ಪಕ್ಷಕ್ಕೆ ಮಾತಿನ ತಪರಾಕಿ ಬ್ರಿಕ್ಸ್ ಸಭೆ ಮುಗಿದು, ಅತಿಥಿಗಳು ನಿರ್ಗಮಿಸಿದ ಮೇಲೆ ಸೌಂಡ್ ಆಗಬಹುದು!!?


******


ಇರಲಿ, ಪ್ರಶ್ನೆ ಅದಲ್ಲ, ವಿರೋಧ ಪಕ್ಷ ಅಂದರೆ ಆಡಳಿತ ಪಕ್ಷದ ಪ್ರತಿಯೊಂದನ್ನೂ ವಿರೋಧಿಸುವುದಾ? (ಅದು ಯಾವುದೇ ಪಕ್ಷ ಇರಲಿ, ಯಾವುದೇ ಕಾಲ ಇರಲಿ) ವಿರೋಧಿಸುವಾಗ ನಾನು ವಿರೋಧಿಸುತ್ತಿರುವುದು ಎಷ್ಟು ಸರಿಯಾಗಿದೆ?  ಇಂತಹದೇ ಸಂದರ್ಭದಲ್ಲಿ ನಮ್ಮ ಪಕ್ಷ ಹಿಂದೆ ಹೇಗೆ ನೆಡೆದುಕೊಂಡಿತ್ತು? ನಾನು ವಿರೋಧಿಸುತ್ತಿರುವುದು ಗಂಭೀರವಾದುದೆ?  ಗಂಭೀರವಲ್ಲದ ವಿರೋಧವಾದರೆ ನಾಳೆ ಜನ ಏನು ಮಾತಾಡಿಕೊಳ್ಳುತ್ತಾರೆ? ಬಂದು ಹೋದ ಅತಿಥಿಗಳು ನಾಳೆ ಆ ದೇಶಗಳಲ್ಲಿ ಏನು ಮಾತಾಡಿಕೊಳ್ಳುತ್ತಾರೆ? ಇತ್ಯಾದಿ ಚಂತನೆಗಳು ಬೇಡವಾ? 


ವಿರೋಧ ಪಕ್ಷ ಅಂದರೆ ಅಧಿಕಾರದಲ್ಲಿರುವ ಪಕ್ಷ ಮಾಡಿದ್ದೆಲ್ಲವನ್ನೂ ವಿರೋಧಿಸುವುದು ಮಾತ್ರವೆ!!?  ಒಂದು ವೇಳೆ ಅದೇ ಆಗಿದ್ದರೆ... ಅಕಸ್ಮಾತ್ ಈಗಿನ ಬ್ರಿಕ್ಸ್ ಸಭೆಯ ಔತಣ ಕೂಟದಲ್ಲಿ ಅತಿಥಿಗಳಿಗೆ ಮಾಂಸಹಾರವನ್ನೇ ವ್ಯವಸ್ಥೆ ಮಾಡಿದ್ದರೆ.... 


ವಿರೋಧ ಪಕ್ಷದ ನಾಯಕರು ಮತ್ತು ಸಾಮಾಜಿಕ ಜಾಲತಾಣದ ಕಲಿಗಳು ಮಾಡುವ ಸಂಭಾವ್ಯ ವಿರೋಧದ ಟೀಕೆಗಳು ಹೀಗಿರುತ್ತಿತ್ತಾ!!?:-


​"ಅಹಿಂಸೆಯ ದೇಶದಲ್ಲಿ ರಕ್ತದ ಮಜ್ಜನ!"


"ಗಾಂಧೀಜಿ ಹುಟ್ಟಿದ ಈ ಪವಿತ್ರ ನೆಲದಲ್ಲಿ ಜಾಗತಿಕ ನಾಯಕರಿಗೆ ಬಿರಿಯಾನಿ ತಿನ್ನಿಸಿ ದೇಶದ ಸಂಸ್ಕೃತಿಯನ್ನು ಅಡವಿಟ್ಟುಬಿಟ್ಟರು! "


"ಅತಿಥಿಗಳಿಗೆ ಸಾತ್ವಿಕ ಭೋಜನ ನೀಡಬೇಕಿದ್ದ ಸರ್ಕಾರ, ಬ್ರಿಕ್ಸ್ ನಾಯಕರ ಮುಂದೆ ತಾಮಸ ಭೋಜನ ನೀಡಿ, ಭಾರತದ ಶಾಂತಿ-ಅಹಿಂಸೆಯ ಇಮೇಜನ್ನು ಬುಡಮೇಲು ಮಾಡಿದೆ."


​"ವಿದೇಶಿ ಅತಿಥಿಗಳಿಗೆ ಮಾಂಸಾಹಾರ ನೀಡಿ, ದೇಶೀಯ ಆರೋಗ್ಯಕರ ಸಸ್ಯಹಾರ ಪದ್ದತಿಯನ್ನು ಕಡೆಕಣಿಸಿ, ದೇಶದ ಸಮಸ್ತ ಹಿಂದು, ಜೈನ, ಲಿಂಗಾಯತ  ಸಮುದಾಯಗಳಿಗೆ ಅವಮಾನಿಸಲಾಗಿದೆ"


"ದೇಶದಲ್ಲಿ ಕೋಟ್ಯಂತರ ಶುದ್ಧ ಸಸ್ಯಹಾರಿಗಳಿದ್ದಾರೆ. ಅವರ ಧ್ವನಿಯನ್ನು ಹತ್ತಿಕ್ಕಿ ಕೇವಲ ಮಾಂಸದೂಟವನ್ನು ಮಾತ್ರ ಹೇರಿರುವುದು ಯಾವ ನ್ಯಾಯ? ಇದು ಅಸಹಿಷ್ಣುತೆಯ ಪರಮಾವಧಿ."


"ಕೇಂದ್ರ ಸರ್ಕಾರ ತನ್ನ ಹಿಡನ್‌ ಅಜೆಂಡಾವನ್ನು ಅತಿಥಿಗಳ ತಟ್ಟೆಯ ಮೂಲಕ ಜಾರಿಗೆ ತರಲು ನೋಡುತ್ತಿದೆ."


"ಇದು ಜಾಗತಿಕ ನಾಯಕರ ಹೊಟ್ಟೆಯ ಮೇಲಿನ ನೇರ ದಾಳಿ. ಇದರ ಪರಿಣಾಮ ಮುಂದಿನ ಜಿಡಿಪಿ ಮೇಲೂ ಬೀಳಲಿದೆ!"


"ನಾವು ಅನ್ನ ಭಾಗ್ಯ ಕೊಟ್ಟೆವು, ಸರಕಾರದ್ದು ಬಿರಿಯಾನಿ ಭಾಗ್ಯ"

"ಬರೀ ಮಾಂಸದ ವ್ಯಾಪಾರ ಮಾಡುವುದಕ್ಕಾಗಿಯೇ ಶೃಂಗಸಭೆ ನಡೆಸಿದಂತಿದೆ." 

"ಇದು ಬ್ರಿಕ್ಸ್ ಶೃಂಗಸಭೆ ಅಲ್ಲ, ಇದು ಸಂಪೂರ್ಣ 'ಬೀಫ್-ಮಟನ್-ಫೋರ್ಕ್ ಶೃಂಗಸಭೆ'!"


****


​ಅಂದು ದುರ್ಯೋಧನ, ಅತಿಥಿಯಾಗಿ ಬಂದ ಕೃಷ್ಣ ಊಟ ಮಾಡಲಿಲ್ಲ ಅಂತ ಕ್ಷುಲ್ಲಕ ತಕರಾರು ತೆಗೆದರೆ, ಇವತ್ತು ವಿರೋಧ ಪಕ್ಷದ ನಾಯಕರು ಮಾಂಸಹಾರ ಊಟ ಬಡಿಸಲಿಲ್ಲವೆಂದು ತಕರಾರು!! ಒಟ್ಟಿನಲ್ಲಿ ದ್ವಾಪರ ಯುಗದಿಂದ ಕಲಿಯುಗದವರೆಗೆ ರಾಜಕಾರಣ ಬದಲಾಗಬಹುದು, ಆದರೆ 'ಊಟದ ರಾಜಕಾರಣ' ಮಾತ್ರ ಎಂದೂ ಬದಲಾಗುವುದಿಲ್ಲ.  


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top