ಮಂಗಳೂರು: ವಿಶ್ವ ಬಂಟರ ಪ್ರತಿಷ್ಠಾನವು ಡಾ| ಡಿ.ಕೆ. ಚೌಟ ದತ್ತಿ ನಿಧಿಯಿಂದ ವರ್ಷಂಪ್ರತಿ ನೀಡುವ ಯಕ್ಷಗಾನ ಕಲಾ ಪ್ರಶಸ್ತಿಗೆ 2026 ನೇ ಸಾಲಿನಲ್ಲಿ ಬಡಗುತಿಟ್ಟು ಯಕ್ಷಗಾನದ ಪ್ರಸಿದ್ಧ ಭಾಗವತ ಸುರೇಶ್ ಶೆಟ್ಟಿ ಶಂಕರನಾರಾಯಣ ಆಯ್ಕೆಯಾಗಿದ್ದಾರೆ. ಪಂಚ ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ , ಕರ್ನಾಟಕ ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಅರ್ಥದಾರಿ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಅವರನ್ನೊಳಗೊಂಡ ಸಲಹಾ ಸಮಿತಿಯು ಈ ಪ್ರಶಸ್ತಿಗೆ ಅವರ ಹೆಸರನ್ನು ಸೂಚಿಸಿದೆ. ಪ್ರಶಸ್ತಿಯು ರೂ. 25,000 ನಗದು ಹಾಗೂ ಪ್ರಮಾಣ ಫಲಕಗಳನ್ನು ಒಳಗೊಂಡಿದೆ.
ಸುರೇಶ್ ಶೆಟ್ಟಿ ಶಂಕರನಾರಾಯಣ:
ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮದ ಸಂಕಾಪುರ ಶಿವರಾಂ ಶೆಟ್ಟಿ ಹಾಗೂ ಹಿಲಿಯಾಣದ ಕುಸುಮ ಶೆಡ್ತಿ ದಂಪತಿಯ ಪುತ್ರನಾಗಿ 1967 ಫೆಬ್ರವರಿ 17ರಂದು ಜನಿಸಿದ ಸುರೇಶ್ ಶೆಟ್ಟಿಯವರು ಓದಿದ್ದು ತರಗತಿ. ಶಾಲಾ ದಿನಗಳಲ್ಲೇ ಯಕ್ಷಗಾನದಲ್ಲಿ ಆಸಕ್ತಿ ಹೊಂದಿದ್ದ ಅವರು ಡಾ| ಶಿವರಾಮ ಕಾರಂತರ ನಿರ್ದೇಶನದ ಉಡುಪಿ ಯಕ್ಷಗಾನ ಕೇಂದ್ರ ಸೇರಿ ಗುರುಗಳಾದ ನೀಲಾವರ ರಾಮಕೃಷ್ಣಯ್ಯ, ಮಹಾಬಲ ಕಾರಂತ, ಹೆರಂಜಾಲು ವೆಂಕಟರಮಣ ಇವರಿಂದ ತಾಳ, ನಾಟ್ಯ, ಸಭಾ ಲಕ್ಷಣಗಳನ್ನು ಅಭ್ಯಾಸ ಮಾಡಿದರು. ಕಾಳಿಂಗ ನಾವುಡರ ಭಾಗವತಿಕೆಗೆ ಆಕರ್ಷಿತರಾಗಿ ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾ ಕೇಂದ್ರಲ್ಲಿ ಗುರು ಕೆ.ಪಿ. ಹೆಗ್ಡೆಯವರಲ್ಲಿ ಭಾಗವತಿಕೆ ಕಲಿತರು.
ಆರಂಭದಲ್ಲಿ ಹೊಳಂದೂರು ಸಂಜೀವ ಶೆಟ್ಟರ ಕಮಲಶಿಲೆ ಮೇಳದಲ್ಲಿ 2 ವರ್ಷ, ಪಳ್ಳಿ ಕಿಶನ್ ಹೆಗ್ಡೆಯವರ ಯಜಮಾನಿಕೆಯಲ್ಲಿ ಕಾಳಿಂಗ ನಾವುಡರ ಒಡನಾಡಿಯಾಗಿ ಸಾಲಿಗ್ರಾಮ ಮೇಳದಲ್ಲಿ 2 ವರ್ಷ, ತಾರಾನಾಥ ಶೆಟ್ಟಿಯವರ ಹಾಲಾಡಿ ಮೇಳದಲ್ಲಿ 1 ವರ್ಷ ಭಾಗವತಿಕೆ ಮಾಡಿದ ಬಳಿಕ ವೈ. ಕರುಣಾಕರ ಶೆಟ್ಟಿಯವರ ಯಜಮಾನಿಕೆಯ ಶ್ರೀ ಪೆರ್ಡೂರು ಮೇಳದಲ್ಲಿ ಸುಬ್ರಹ್ಮಣ್ಯ ಧಾರೇಶ್ವರರ ಸಹ ಭಾಗವತರಾಗಿ 20 ವರ್ಷಗಳ ಸಾರ್ಥಕ ತಿರುಗಾಟ ಮಾಡಿದರು. ಪ್ರಸ್ತುತ 15 ವರ್ಷದಿಂದ ಅತಿಥಿ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸುರೇಶ್ ಶೆಟ್ಟರದ್ದು ಯಕ್ಷ ತಿರುಗಾಟದ ಸುವರ್ಣಯುಗ. ಶೂದ್ರ ತಪಸ್ವಿನಿ, ಚಾರು ಚಂದ್ರಿಕೆ, ಪದ್ಮ ಪಲ್ಲವಿ, ನಾಗನಂದಿನಿ, ಚೈತ್ರ ಚಂದನ, ಶಿವಾನಿ ಭವಾನಿ, ಸಾವನಿ ಪಾವನಿ, ಧಾಮಿನಿ ಭಾಮಿನಿ, ಶಿವರಂಜಿನಿ, ನಾಗವಲ್ಲಿ ಮೊದಲಾದ ನೂತನ ಪ್ರಸಂಗಗಳಲ್ಲಿ ಮತ್ತು ಇತರ ಪೌರಾಣಿಕ ಆಖ್ಯಾನಗಳನ್ನೂ ಆಡಿಸುವಲ್ಲಿ ಪ್ರಸಿದ್ದಿ ಪಡೆದರು. ದೇಶ ವಿದೇಶಗಳಲ್ಲಿ ಕಾರ್ಯಕ್ರಮ ನೀಡಿ ಹಾಡುಗಾರಿಕೆಗೆ ಅಪಾರ ಅಭಿಮಾನಿಗಳನ್ನು ಹೊಂದಿದ ಅವರು ಹಲವೆಡೆ ಸನ್ಮಾನಿತರಾಗಿರುವರು. ಪ್ರಶಸ್ತಿ - ಪುರಸ್ಕಾರಗಳನ್ನು ಪಡೆದಿದ್ದಾರೆ. ಮಡದಿ ಶೃಂಗಾರಿ ಶೆಟ್ಟಿ, ಮಕ್ಕಳಾದ ಚಿರಾಗ್, ವಿಪುಲ್ ಇವರನ್ನೊಳಗೊಂಡ ಸುಖ ಸಂಸಾರ ಅವರದು.
ಸೆಪ್ಟೆಂಬರ 12ರಂದು ಶನಿವಾರ ಮಂಗಳೂರಿನ ಕರಂಗಲ್ಪಾಡಿಯಲ್ಲಿರುವ ಎಜೆ ಗ್ರಾಂಡ್ ಹೋಟೆಲ್ ನಲ್ಲಿ ಮುಂಬೈ ಯುನೈಟೆಡ್ ರಬ್ಬರ್ ಇಂಡಸ್ಟ್ರೀಸ್ (ಪ್ರೈ.) ಲಿಮಿಟೆಡ್ ಸಂಸ್ಥಾಪಕ ಅಧ್ಯಕ್ಷ ಪಾದೆ ಅಜಿತ್ ರೈ ಪ್ರಶಸ್ತಿ ಪ್ರದಾನ ಮಾಡುವರು. ವರ್ಲ್ಡ್ ಬಂಟ್ಸ್ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಕುಶಾಲ್ ಎಸ್. ಹೆಗ್ಡೆ ಅಧ್ಯಕ್ಷತೆ ವಹಿಸುವವರು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


