ಶ್ರೀ ಬಾಲಗಂಗಾಧರ ತಿಲಕರ ಜನ್ಮ ದಿನಾಚರಣೆ ಸಮಾಜಕ್ಕೆ ಅತ್ಯಗತ್ಯ: ಧರ್ಮೇಂದ್ರ ಗಣೇಶಪುರ

Shreya Hegde
0


ಕುಳಾಯಿ: ಸಾರ್ವಜನಿಕ ಗಣೇಶೋತ್ಸವದ ಮೂಲಕ ದೇಶದಲ್ಲಿ ಸಾಮಾಜಿಕ ಒಗ್ಗಟ್ಟು ಮತ್ತು ಜಾಗೃತಿ ಮೂಡಿಸಲು ಕಾರಣಕರ್ತರಾದ ಲೋಕಮಾನ್ಯ ಬಾಲಗಂಗಾಧರ ತಿಲಕರ ಜನ್ಮ ದಿನಾಚರಣೆಯನ್ನು ಆಚರಿಸುವುದು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ ಎಂದು ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶಪುರದ ನಿಕಟಪೂರ್ವ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಹೇಳಿದರು. ಅವರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ) ಕುಳಾಯಿ ಇದರ 55 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.


ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸದರಾದ ಕ್ಯಾಪ್ಟನ್ ಬ್ರಜೇಶ್ ಚೌಟರವರು ಸ್ವಚ್ಛ ಪರಿಸರದ ಜಾಗೃತಿಯಂಗವಾಗಿ 'ಸ್ವಚ್ಛ ಕುಳಾಯಿ' ಅಭಿಯಾನವನ್ನು ನಡೆಸಿರಿ ಎಂದು ಕರೆ ನೀಡಿದರು. ಶಾಸಕ ಡಾ. ವೈ. ಭರತ್ ಶೆಟ್ಟಿಯವರು ಮಾತನಾಡಿ, ಯುವ ಜನಾಂಗದವರಿಗೆ ಹಿರಿಯರು ಸನ್ಮಾರ್ಗದರ್ಶನ ನೀಡಿ ದೇಶ ಸೇವೆಗೆ ಬದ್ಧರಾಗಿರುವಂತೆ ಮಾಡಬೇಕು ಎಂದರು. ಸುರತ್ಕಲ್ ಗೋವಿಂದದಾಸ ಕಾಲೇಜಿನ ಉಪನ್ಯಾಸಕಿ ಪ್ರೊ. ಡಾ. ಸುಧಾ ಚಂದ್ರಶೇಖರ ಶೆಟ್ಟಿಯವರು, ಶ್ರೀ ಮಹಾಗಣಪತಿಯ ವಾಹನವಾದ ಮೂಷಿಕದಿಂದ ಪ್ರಕೃತಿಯಲ್ಲಿರುವ ಎಲ್ಲಾ ಜೀವಿಗಳಿಗೂ ಪ್ರಾಮುಖ್ಯತೆ ನೀಡುವ ಸಂದೇಶವನ್ನು ತಿಳಿದುಕೊಂಡು, ಧನಾತ್ಮಕ ಚಿಂತನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಪಣಂಬೂರು ಮೊಗವೀರ ಮಹಾಸಭಾದ ಅಧ್ಯಕ್ಷ ಮಾಧವ ಸುವರ್ಣರವರು ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಸಂಘಟನೆಗಾಗಿ ದುಡಿದ ಹಿರಿಯರ ತ್ಯಾಗವನ್ನು ಸ್ಮರಿಸಿ ಗೌರವ ಸಲ್ಲಿಸಿ ಮುನ್ನಡೆಯೋಣ ಎಂದರು. ಉದ್ಯಮಿ ಪ್ರಶಾಂತ್ ಮುಡಾಯಿಕೋಡಿ ಭ್ರಷ್ಟಾಚಾರಮುಕ್ತ ಸಮಾಜದ ಬಲವರ್ಧನೆಗೆ ಕರೆಯಿತ್ತರೆ, ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಭರತ್ ರಾಜ್ ಕೃಷ್ಣಾಪುರರವರು ಹಿಂದು ಸಮಾಜದ ಸಂಘಟನೆಗೆ ಸಾರ್ವಜನಿಕ ಗಣೇಶೋತ್ಸವ ಸಹಕಾರಿ ಎಂದರು.


ಇದೇ ಸಂದರ್ಭದಲ್ಲಿ ವಿದ್ಯಾಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಕುಮಾರಿ ಶ್ರದ್ಧಾ ಮೈರ್ಪಾಡಿ ಮತ್ತು ಕುಮಾರಿ ಹರ್ಷಿತಾ ಹರೀಶ ಭಂಡಾರಿ ಹಾಗೂ ಶ್ರೀ ಗಣಪತಿ ವಿಗ್ರಹ ರಚನೆ ಮಾಡಿದ ಶಿಲ್ಪಿ ವಾಸುದೇವ ಸುರತ್ಕಲ್ ರವರಿಗೆ ಗೌರವ ಅಭಿನಂದನೆ ಸಲ್ಲಿಸಲಾಯಿತು. ವೇದಿಕೆಯಲ್ಲಿ ಮಹಾನಗರ ಪಾಲಿಕೆ ನಿಕಟಪೂರ್ವ ಸದಸ್ಯ ವರುಣ್ ಚೌಟ, ಸಮಿತಿಯ ಗೌರವಾಧ್ಯಕ್ಷ ಕೆ.ಪಿ. ಚಂದ್ರಶೇಖರ ಮತ್ತು ಮಹಿಳಾ ಮಂಡಲ ಕುಳಾಯಿ ಅಧ್ಯಕ್ಷೆ ರೇವತಿ ನವೀನ್ ಉಪಸ್ಥಿತರಿದ್ದರು.


ಶ್ರೀಮತಿ ರಮಾ ವೆಂಕಟ್ರಾವ್ ಮತ್ತು ಶ್ರೀಮತಿ ಮೀನಾಕ್ಷಿ ದೇವದಾಸ ಪ್ರಾರ್ಥನೆಗೈದರೆ, ಸಮಿತಿಯ ಅಧ್ಯಕ್ಷ ವಿಠ್ಠಲ್ ಸಾಲಿಯಾನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಎನ್. ಶೆಟ್ಟಿ ಸಮಿತಿಯ ವರದಿ ವಾಚಿಸಿ, ಕೋಶಾಧಿಕಾರಿ ಶ್ರೀನಿವಾಸ ಕುಳಾಯಿ ಸಾಧಕರ ಪರಿಚಯ ನೀಡಿ ಅಭಿನಂದಿಸಿದರು. ಜೊತೆ ಕಾರ್ಯದರ್ಶಿ ರಂಜಿತ್ ಕುಳಾಯಿ ಧನ್ಯವಾದವಿತ್ತು, ಉಪಾಧ್ಯಕ್ಷ ಯೋಗೀಶ ಸನಿಲ್ ಕುಳಾಯಿ ಕಾರ್ಯಕ್ರಮ ನಿರೂಪಿಸಿದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top