ಸುರತ್ಕಲ್: ರಕ್ತದಾನವು ವ್ಯಕ್ತಿಗಳ ಜೀವವನ್ನು ಉಳಿಸುವ ಶ್ರೇಷ್ಠ ಹಾಗೂ ಮಾನವೀಯತೆಯ ಮಹಾದಾನವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಪ್ರಸ್ತುತ ರಕ್ತದ ತೀವ್ರ ಕೊರತೆಯಿದ್ದು, ಪ್ರತಿಯೊಬ್ಬರೂ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ರೋಗಿಗಳ ನೆರವಿಗೆ ಬರಬೇಕು ಎಂದು ಮಂಗಳೂರು ಕಸ್ತೂರ್ಬಾ ಮೆಡಿಕಲ್ ಕಾಲೇಜಿನ (KMC) ಪ್ರಾಧ್ಯಾಪಕಿ ಹಾಗೂ ರಕ್ತ ಕೇಂದ್ರದ ಅಧಿಕಾರಿ ಡಾ. ಸಿಂಚನ ಕರೆ ನೀಡಿದರು.
ಬೈಕಂಪಾಡಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC) ಡಿಪ್ಲೋಮಾ ಕಾಲೇಜಿನಲ್ಲಿ, ಸುರತ್ಕಲ್ ರೋಟರಿ ಕ್ಲಬ್ ಹಾಗೂ KMC ರಕ್ತ ಕೇಂದ್ರದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದ ಉದ್ಯಮಿ ರೋಟೇರಿಯನ್ ಶಿವಾನಂದ ಹೆಚ್. ಎಂ. ಅವರು, ಇಂತಹ ಶಿಬಿರಗಳು ಸಮಾಜಕ್ಕೆ ಅತ್ಯಗತ್ಯ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸುರತ್ಕಲ್ ರೋಟರಿ ಕ್ಲಬ್‌ನ ನಿಯೋಜಿತ ಅಧ್ಯಕ್ಷ ಪ್ರೊ. ಕೃಷ್ಣಮೂರ್ತಿ ಮಾತನಾಡಿ, "ತುರ್ತು ಸಂದರ್ಭಗಳಲ್ಲಿ ರಕ್ತದ ಅಗತ್ಯಕ್ಕೆ ತಕ್ಷಣ ಸ್ಪಂದಿಸಲು ಸುರತ್ಕಲ್ ರೋಟರಿ ಕ್ಲಬ್ ರಕ್ತದಾನಿಗಳ ಮಾಹಿತಿ ಕೋಶವನ್ನು (Data Bank) ಸಿದ್ಧಪಡಿಸುತ್ತಿದೆ. GTTC ಕಾಲೇಜು ಈ ಶಿಬಿರದ ಮೂಲಕ ವಿದ್ಯಾರ್ಥಿಗಳಲ್ಲಿ ಸಹಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಿರುವುದು ಶ್ಲಾಘನೀಯ," ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಲಕ್ಷ್ಮಿನಾರಾಯಣ ಸಿ. ಆರ್. ಮಾತನಾಡಿ, "ನಮ್ಮ ಸಂಸ್ಥೆಯು ಉದ್ಯಮ ರಂಗದ ಅಗತ್ಯಕ್ಕೆ ತಕ್ಕಂತೆ ಉತ್ತಮ ತಂತ್ರಜ್ಞರನ್ನು ರೂಪಿಸುವುದರ ಜೊತೆಗೆ, ರಕ್ತದಾನ ಶಿಬಿರ ಮತ್ತು ಸ್ವಚ್ಛತಾ ಅಭಿಯಾನಗಳ ಮೂಲಕ ವಿದ್ಯಾರ್ಥಿಗಳಿಗೆ ಸಾಮಾಜಿಕ ಹೊಣೆಗಾರಿಕೆಯನ್ನು ಕಲ್ಪಿಸುತ್ತಿದೆ. ರಕ್ತದಾನವು ವ್ಯಕ್ತಿಯ ದೈಹಿಕ ಚೈತನ್ಯ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ," ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ ಟಿ. ಎನ್. ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ರೋಟೇರಿಯನ್ ಕೆ. ರಾಜಮೋಹನ್ ರಾವ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶಿಬಿರದಲ್ಲಿ ಕಾಲೇಜಿನ ಹಲವಾರು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕ ವೃಂದದವರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಈ ಸಮಾಜಮುಖಿ ಕಾರ್ಯವನ್ನು ಗುರುತಿಸಿ KMC ರಕ್ತ ಕೇಂದ್ರದ ವತಿಯಿಂದ GTTC ಡಿಪ್ಲೋಮಾ ಕಾಲೇಜು ಮತ್ತು ಸುರತ್ಕಲ್ ರೋಟರಿ ಕ್ಲಬ್‌ಗೆ ಅಭಿನಂದನಾ ಗೌರವ ಫಲಕವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಘಟಕ ಮುಖ್ಯಸ್ಥ ಪ್ರಾಧ್ಯಾಪಕ ಕುಮಾರಸ್ವಾಮಿ ಬಿ. ಎಸ್. ಸ್ವಾಗತಿಸಿದರು. ಸುರತ್ಕಲ್ ರೋಟರಿ ಕ್ಲಬ್‌ನ ಪಬ್ಲಿಕ್ ಇಮೇಜ್ ನಿರ್ದೇಶಕ ಸತೀಶ್ ಸದಾನಂದ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

