ಡಾ. ಸುಧಾ ಕೌಜಗೇರಿ ಅವರು ಚಲನಾತ್ಮಕ ವ್ಯಕ್ತಿತ್ವವುಳ್ಳವರು, ಪ್ರಖರ ವಿಮರ್ಶಕರು, ಉತ್ತಮ ವಾಗ್ಮಿ ಹಾಗೂ ದಕ್ಷ ಆಡಳಿತಗಾರರು. ಪದವಿ ವಿದ್ಯಾರ್ಥಿಗಳಿಗಾಗಿ 'ಬೆಳಗು' ಪಠ್ಯ ಹಾಗೂ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳನ್ನೊಳಗೊಂಡ ಹಲವಾರು ಪಠ್ಯಪುಸ್ತಕಗಳ ಸಂಪಾದಕರಾಗಿ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಕವಯಿತ್ರಿ, ಸೃಜನಶೀಲ ಸಾಹಿತ್ಯಾಸಕ್ತರು ಹಾಗೂ ಖ್ಯಾತ ವಿದ್ವಾಂಸರಾಗಿರುವ ಇವರು, ಇತ್ತೀಚೆಗೆ ಧಾರವಾಡದ ಪ್ರಾದೇಶಿಕ ಮಹಿಳಾ ನೂತನ ಜಂಟಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. 'ಸರಳ ಜೀವನ, ಉನ್ನತ ಚಿಂತನೆ' (Simple living & high thinking) ತತ್ವದ ಹಾದಿಯಲ್ಲಿ ಸಾಗುತ್ತಿರುವ ಇವರು, ಅಹಂಕಾರವಿಲ್ಲದ ಅನುಪಮ ನಿಗರ್ವಿ ಹಾಗೂ ಬಹುಮುಖ ಪ್ರತಿಭಾನ್ವಿತರು.
ಅಣ್ಣಿಗೇರಿಯ ಶ್ರೀ ಅಮೃತೇಶ್ವರ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರಾದ ಎಸ್. ಎಚ್. ಕೌಜಗೇರಿ ಅವರ ಪುತ್ರಿಯಾಗಿರುವ ಇವರು, ಪಶುವೈದ್ಯರಾದ ಡಾ. ರವೀಂದ್ರನಾಥ ನಾಯ್ಕರ ಅವರ ಧರ್ಮಪತ್ನಿ. ಈ ದಂಪತಿಗಳಿಗೆ ಡಾ. ಕನಕಲಕ್ಷ್ಮಿ ಹಾಗೂ ಪ್ರಸ್ತುತ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಭಾರ್ಗವಿ ಎಂಬ ಇಬ್ಬರು ಪುತ್ರಿಯರಿದ್ದಾರೆ.
ಹುಲಕೋಟಿಯ ಕೆ. ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ-ಪ್ರಾಧ್ಯಾಪಕರಾಗಿ ಹಾಗೂ ಎರಡು ಅವಧಿಗೆ ಶ್ರೇಷ್ಠ ಆಡಳಿತಗಾರ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ, ಸಿಬ್ಬಂದಿ ವರ್ಗ, ವಿದ್ಯಾರ್ಥಿ ಬಳಗ ಹಾಗೂ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ವಿಚಾರಸಂಕಿರಣಗಳಲ್ಲಿ ವಿವಿಧ ವಿಷಯಗಳ ಕುರಿತು ಇವರು ಮಂಡಿಸಿದ ಸಂಶೋಧನಾ ಪ್ರಬಂಧಗಳು ISBN, ISSN ಜರ್ನಲ್ ಹಾಗೂ ಸ್ಮರಣ ಸಂಪುಟಗಳಲ್ಲಿ ಪ್ರಕಟವಾಗಿವೆ. ಜೊತೆಗೆ ನೂರಾರು ಸಂಶೋಧನಾ ಲೇಖನಗಳು ವಿವಿಧ ಸ್ಮರಣ ಸಂಚಿಕೆಗಳು, ಪುಸ್ತಕಗಳು ಹಾಗೂ ಅಭಿನಂದನಾ ಗ್ರಂಥಗಳಲ್ಲಿ ಪ್ರಕಟಗೊಂಡಿದ್ದು, ಸಂಶೋಧಕರಿಗೆ ಅತ್ಯುತ್ತಮ ಆಕರ ಗ್ರಂಥಗಳಂತಿವೆ.
ಶಿಕ್ಷಣ ಮತ್ತು ಸಂಶೋಧನೆ:
ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಮುಗಿಸಿದ ಇವರು, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ., ಎಂ.ಫಿಲ್. ಹಾಗೂ ಪಿಎಚ್.ಡಿ. ಪದವಿಗಳನ್ನು ಪ್ರಶಸ್ತಿ ಸಹಿತ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ನಂತರ ಲಿಂಗ್ವಿಸ್ಟಿಕ್ಸ್ (ಭಾಷಾವಿಜ್ಞಾನ) ಡಿಪ್ಲೋಮಾ ಕೋರ್ಸ್‌ನಲ್ಲಿಯೂ ಪ್ರಥಮ ಶ್ರೇಣಿ ಪಡೆದರು. 1993ರಲ್ಲಿ 'ಮಂಗರಾಜನ ಅಭಿನವಾಭಿಧಾನಂ' ವಿಷಯದ ಮೇಲೆ ಸಂಶೋಧನಾ ಪ್ರಬಂಧ ಸಮರ್ಪಿಸಿ ಎಂ.ಫಿಲ್. ಪದವಿ ಪಡೆದರು. 2001ರಲ್ಲಿ 'ಕಿಟ್ಟೆಲ್ ಅವರ ಕನ್ನಡ-ಇಂಗ್ಲಿಷ್ ಡಿಕ್ಷನರಿ: ಒಂದು ಸಾಂಸ್ಕೃತಿಕ ಅಧ್ಯಯನ' ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ. ಡಾಕ್ಟರೇಟ್ ಪದವಿ ಗೌರವಕ್ಕೆ ಪಾತ್ರರಾದರು. ಈ ಮಹಾಪ್ರಬಂಧವು 2008ರಲ್ಲಿ ಗ್ರಂಥರೂಪದಲ್ಲಿ ಹೊರಬಂದಿತು. ಇದಲ್ಲದೆ 'ಜನನಿ' ಸೇರಿದಂತೆ ಹಲವು ಕೃತಿಗಳನ್ನು ರಚಿಸಿ ಲೋಕಾರ್ಪಣೆಗೊಳಿಸಿದ್ದಾರೆ.
ವೃತ್ತಿಜೀವನ:
1992ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (KPSC) ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅಕ್ಕಿಆಲೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ-ಪ್ರಾಧ್ಯಾಪಕರಾಗಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಂತರ ಅಣ್ಣಿಗೇರಿಯಲ್ಲಿ 14 ವರ್ಷ ಹಾಗೂ 2022 ರಿಂದ 2026ರ ವರೆಗೆ ಹುಲಕೋಟಿಯಲ್ಲಿ ಆದರ್ಶ ಪ್ರಾಧ್ಯಾಪಕರಾಗಿ ಮತ್ತು ದಕ್ಷ ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸಿದರು. ಪ್ರಸ್ತುತ ಜುಲೈ 10, 2026 ರಿಂದ ಧಾರವಾಡದಲ್ಲಿ ಪ್ರಾದೇಶಿಕ ಜಂಟಿ ನಿರ್ದೇಶಕರಾಗಿ ನೇಮಕಗೊಂಡು ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಪ್ರಶಸ್ತಿ ಮತ್ತು ಗೌರವಗಳು:
34 ವರ್ಷಗಳ ಸುದೀರ್ಘ ಬೋಧನಾ ಅನುಭವ ಹೊಂದಿರುವ ಡಾ. ಸುಧಾ ಕೌಜಗೇರಿ ಅವರ ಸಾಧನೆಯನ್ನು ಗುರುತಿಸಿ, 2022ರಲ್ಲಿ 'ಕರ್ನಾಟಕ ರಾಜ್ಯ ಅಧ್ಯಾಪಕರ ಸಂಘ'ವು ಅತ್ಯುತ್ತಮ ಪ್ರಾಧ್ಯಾಪಕ ಪ್ರಶಸ್ತಿ ನೀಡಿ ಗೌರವಿಸಿದೆ. ಜೊತೆಗೆ ಗುರು ಪ್ರಶಸ್ತಿ ಸೇರಿದಂತೆ ಹಲವು ಸನ್ಮಾನಗಳು ಇವರಿಗೆ ಲಭಿಸಿವೆ. ಇವರು ಹಲವಾರು ಆನ್‌ಲೈನ್ ಮತ್ತು ಆಫ್‌ಲೈನ್ ಅಂತರರಾಷ್ಟ್ರೀಯ ಸಮಾವೇಶಗಳಲ್ಲಿ, 'ಅಕ್ಕನ ಅರಿವು' ಗೂಗಲ್ ಮೀಟ್ ಕಾರ್ಯಕ್ರಮಗಳಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ತಾಲ್ಲೂಕು ಮತ್ತು ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಗೋಷ್ಠಿಯ ಅಧ್ಯಕ್ಷರಾಗಿ, ಉಪನ್ಯಾಸಕರಾಗಿ, ಉದ್ಘಾಟಕರಾಗಿ ಹಾಗೂ ಮುಖ್ಯ ಅತಿಥಿಗಳಾಗಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಬಡವರ, ದೀನದಲಿತರ ಮತ್ತು ಅನಾಥರ ಬಾಳಿಗೆ ಬೆಳಕಾಗಿ, ಅವರ ಕುಂದುಕೊರತೆಗಳಿಗೆ ಸ್ಪಂದಿಸುವ ಮಾನವೀಯತೆಯ ಸಾಕಾರ ಮೂರ್ತಿ ಹಾಗೂ ಸದಾ ಹಸನ್ಮುಖಿಯಾಗಿರುವ ಆತ್ಮೀಯ ಸಖಿ ಡಾ. ಸುಧಾ ಕೌಜಗೇರಿ ಅವರಿಗೆ ಇನ್ನಷ್ಟು ಉನ್ನತ ಹುದ್ದೆಗಳು ಒಲಿದುಬರಲಿ.
ಅವರಿಗೆ ಸರ್ವ ಬಂಧು-ಬಾಂಧವರ, ಸ್ನೇಹಿತರ, ಅಭಿಮಾನಿಗಳ, ವಿದ್ಯಾರ್ಥಿ ಬಳಗದ ಹಾಗೂ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯಾಭಿಮಾನಿಗಳ ಪರವಾಗಿ ಹೃತ್ಪೂರ್ವಕ ಹಾರ್ದಿಕ ಶುಭಾಶಯಗಳು.ದ ಹಾಗೂ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯಾಭಿಮಾನಿಗಳ ಪರವಾಗಿ ಹೃತ್ಪೂರ್ವಕ ಹಾರ್ದಿಕ ಶುಭಾಶಯಗಳು.
-ಪ್ರೊ. ಶಕುಂತಲಾ.ಚನ್ನಪ್ಪ. ಸಿಂಧೂರ.
ವಿಶ್ರಾಂತ ಕನ್ನಡ ಪ್ರಾಧ್ಯಾಪಕರು, ಗದಗ.


